ರಾಷ್ಟ್ರನಿರ್ಮಾಣದಲ್ಲಿ ಯುವಜನರ ಪಾತ್ರ ಭಾಗ-೩

ರಾಷ್ಟ್ರನಿರ್ಮಾಣದಲ್ಲಿ ಯುವಜನರ ಪಾತ್ರ ಭಾಗ-೩

ಸರಕಾರದ ಪೂರ್ಣ ಗಮನವು ಯುವಜನರ ಮೂಲಕವಾಗಿ  ವಿಕಾಸವನ್ನು ಸಾಧಿಸುವಂಥದಾಗಬೇಕು. ಸರಕಾರದ ಪರವಾಗಿ ಪ್ರಸ್ತುತಪಡಿಸಿದಂಥ ರಾಷ್ಟ್ರೀಯ ಯುವನೀತಿ-೨೦೧೪ ರ ಉದ್ದೇಶವು “ಯುವಕರ ಯೋಗ್ಯತೆಯನ್ನು ಗುರುತಿಸಿ ಅದಕ್ಕನುಗುಣವಾಗಿ ಅವರಿಗೆ ಅವಕಾಶಗಳನ್ನು ಒದಗಿಸಿ ಅವರನ್ನು ಬಲಿಷ್ಠಗೊಳಿಸುವ, ಮತ್ತು ಇದರ ಮೂಲಕ ನಮ್ಮ ದೇಶಕ್ಕೆ ದೊರೆಯಬೇಕಾದಂಥ ಯೋಗ್ಯ ಸ್ಥಾನವನ್ನು ಕೊಡಿಸಬೇಕಾಗಿದೆ” ಎಂಬುದು. ಯುವಕರ ವ್ಯಕ್ತಿತ್ವದಲ್ಲಿ ಸುಧಾರಣೆ ತರುವ, ಅವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಹಾಗೂ ಅವರಲ್ಲಿ ಒಬ್ಬ ಜವಾಬ್ದಾರಿಯುತ ನಾಗರಿಕನ ಗುಣ ಹಾಗೂ ಸ್ವಯಂ ಸೇವೆಯ ಭಾವನೆಗಳನ್ನು ಹುಟ್ಟಿಸುವ ಉದ್ದೇಶದಿಂದ ಸರಕಾರವು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಜಗತ್ತಿನ ಯಾವುದೇ ಆಂದೋಲನವು ಜಗತ್ತಿನ ಯಾವುದೇ ವಿಚಾರಧಾರೆಯು ಯುವಶಕ್ತಿಯ ಅನುಪಸ್ಥಿತಿಯಲ್ಲಿ ಸಾಧ್ಯವಾಗಲಾರದು. ವಾಸ್ತವಿಕವಾಗಿ ಯುವಶಕ್ತಿಯ ಮೇಲಿನ ಒಂದು ವಿಶ್ವಾಸದಿಂದಲೇ ನಿರ್ಮಾಣ ಕಾರ್ಯ ಅಥವಾ ವಿಧ್ವಂಸಕ ಕೃತ್ಯಗಳಿಗೆ ಅಡಿಪಾಯವನ್ನು ಇಡಲಾಗುತ್ತದೆ. ನಮ್ಮ ಈ ಬೃಹತ್ ಯುವಜನಸಂಖ್ಯೆಯನ್ನು ನಾವು ನಮ್ಮ ದೇಶದ ಮೇಲಿನ ಒಂದು ಭಾರವೆಂದೆಣಿಸದೆ, ದೇಶವನ್ನು ಇದರಿಂದಾಗಿಯೇ ದುರ್ಬಲವೆಂದೆಣಿಸದೆ ಸಶಕ್ತ ಹಾಗೂ ಸಮೃದ್ಧ, ಸ್ವಾವಲಂಬಿ ರಾಷ್ಟ್ರದ ನಿರ್ಮಾಣದಲ್ಲಿ ಈ ಯುವಜನರನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಸಾಧನವನ್ನಾಗಿಸಿಕೊಳ್ಳಬೇಕಾಗಿದೆ. ಎಲ್ಲ ದೇಶಗಳಿಗೂ ಶತೃರಾಷ್ಟ್ರಗಳಿದ್ದೇ ಇರುತ್ತವೆ. ಆದರೂ ಅವುಗಳೊಂದಿಗೇ ಜೀವನ ಸಾಗಿಸಬೇಕಾದ ನಾವು ನಮ್ಮ ರಕ್ಷಣೆಯನ್ನೂ ನಾವು ಮಾಡಿಕೊಳ್ಳಬೇಕಲ್ಲದೆ, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ವಿಕಾಸವಂತೂ ನಡೆಯಲೇಬೇಕು. ಏಕತೆಯ ಭಾವವನ್ನು ಎಲ್ಲರಲ್ಲಿಯೂ ಬಿತ್ತಬೇಕು. ಇದರಿಂದಾಗಿ ಸ್ವಾಭಿಮಾನವು ಬೆಳೆಯುತ್ತದೆ. ನಮ್ಮಲ್ಲಿಯ ಪ್ರಚಂಡ ಶಕ್ತಿಯ ಪರಿಚಯ ನಮಗಾಗಬೇಕು. ಆತ್ಮವಿಶ್ವಾಸ ಹೆಚ್ಚಬೇಕು.

ಮಕ್ಕಳಲ್ಲಿ  ಒಳ್ಳೆಯ ಆದರ್ಶಗಳನ್ನು ಹುಟ್ಟುಹಾಕಬೇಕಾದಲ್ಲಿ ತಂದೆ ತಾಯಿಯರು ಹಾಗೂ ಗುರುಗಳು ಮಹತ್ವಪೂರ್ಣ ಪಾತ್ರವನ್ನು ನಿರ್ವಹಿಸಬೇಕಾಗಿದೆ. ಅವರಲ್ಲಿ ಚಿಕ್ಕಂದಿನಿಂದಲೇ ಹಿರಿಯರ ಬಗ್ಗೆ ಆದರ ಸಮ್ಮಾನಗಳನ್ನು ಹುಟ್ಟುಹಾಕಬೇಕು. ಶಿಕ್ಷಕರು ಮಕ್ಕಳಲ್ಲಿ ಅಂತರಾತ್ಮದ ಅನಂತ ಶಕ್ತಿಯನ್ನು ಗುರುತಿಸಿ ಮಾರ್ಗದರ್ಶನ ಮಾಡಬೇಕು.

ಇಂದು ರಾಜನೈತಿಕವಾಗಿ ದೂರದೃಷ್ಟಿಯೂ  ಯಾರಲ್ಲಿಯೂ ಕಂಡುಬರುವುದಿಲ್ಲ. ಎಲ್ಲರೂ ಆಕ್ಷಣದ ಸುಖಕ್ಕಾಗಿಯೇ ಪರಿತಪಿಸುತ್ತಿದ್ದಾರೆ. ಸಾಮಾಜಿಕ ಹಾಗೂ ರಾಷ್ಟ್ರೀಯ ಬದ್ಧತೆಯ ಕೊರತೆಯಿಂದಾಗಿ ಭಾರತದ ಬಗ್ಗೆ ರೂಪಿತವಾಗಿರುವಂಥ ಒಂದು ಆಕಾರದಿಂದಾಗಿ ಪ್ರತಿಯೊಬ್ಬ ಭಾರತೀಯನೂ ಗೊಂದಲಕ್ಕೀಡಾಗಿದ್ದಾನೆ. ಅಪರಾಧ, ಅನೇಕ ರೀತಿಯ ಮೋಸದ ಪ್ರಸಂಗಗಳು, ಭ್ರಷ್ಟಾಚಾರಗಳನ್ನು ನೋಡಿದ ಪ್ರತಿಯೊಬ್ಬ ಯುವಕನೂ ಇದೇ ನಮ್ಮ ವೈಭವೋಪೇತವಾದಂಥ ದೇಶವೇ ಎಂದು ಚಿಂತಿಸುವಂತಾಗಿದೆ. ನಮ್ಮಲ್ಲಿಯ ರಾಜಕಾರಣದ ದೂರದರ್ಶಿತ್ವದ ಕೊರತೆಯನ್ನು ಪರಿಗಣಿಸಿ ಯುವ ಜನರು ದೇಶದ ನೇತೃತ್ವವನ್ನು ವಹಿಸಿಕೊಳ್ಳಬೇಕಾಗಿದೆ. ನಮ್ಮಲ್ಲಿಯ ನಕ್ಸಲವಾದ, ಜಾತಿವಾದ, ಮತ ಪಂಥಗಳ ವೈಷಮ್ಯಗಳನ್ನು ತೊಡೆದುಹಾಕಬೇಕಗಿದೆ. ನಮ್ಮ ರಕ್ಷಣಾ ಕ್ಷೇತ್ರಗಳ ಬಗ್ಗೆ, ಚುನಾವಣಾ ಆಯೋಗಗಳ ನಿಷ್ಪಕ್ಷತೆಯ ದೋರಣೆಯನ್ನು ತಳೆಯುವಂತೆ ನೋಡಿಕೊಳ್ಳಬೇಕು. ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆ, ಅಮಾನವೀಯ ಕಾರ್ಯಗಳಿಗೆ ಪ್ರೋತ್ಸಾಹವನ್ನೀಯದೆ ಬಡವ ಬಲ್ಲಿದರಿಗಿರುವ ಅಂತರವನ್ನು ಹೋಗಲಾಡಿಸಿ, ಪ್ರತಿಯೊಬ್ಬ ಭಾರತೀಯನೂ ಉದ್ಯೋಗ, ಊಟ, ವಸತಿಗಳಿಂದ ವಂಚಿತನಾಗದಂತೆ ನೋಡಿಕೊಳ್ಳುವ ಕಾರ್ಯ ಯುವಜನರದಾಗಿದೆ. ಅನ್ನದಾತರ ಬೇಡಿಕೆಗಳಿಗೆ ಕಿವಿಗೊಟ್ಟು ಅವರು ಆತ್ಮಹತ್ಯೆಗೆ ತೊಡಗದಂತೆ ಕಡಿಮೆ ಬಡ್ಡಿಯ ಸಾಲ, ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿ, ಸಾವಯವ ಗೊಬ್ಬರ ಬಳಕೆ, ಸ್ವಾವಲಂಬನೆಯ ಸಾಧ್ಯತೆಗಳ ಬಗ್ಗೆ ಹೇಳಬೇಕು. ದೇಶದ ನಾಗರಿಕರನ್ನು ಒಗ್ಗಟ್ಟು ಮಾಡಬೇಕು.

ಯುವಕರೇ ನಮ್ಮ ದೇಶದ ಪ್ರಗತಿಯ ಹಾಗೂ ವಿಕಾಸದ ಆಧಾರ ಸ್ತಂಭ.

ರಾಷ್ಟ್ರ ನಿರ್ಮಾಣವೆಂಬುದು ಕೇವಲ ಒಂದು ಶಬ್ದವಲ್ಲ. ಅದು ನಮ್ಮ ನಾಗರಿಕರೆಲ್ಲರನ್ನೂ ದೇಶದ ವಿಕಾಸದಲ್ಲಿ ಒಡಗೂಡಿಸಿಕೊಳ್ಳುವ ಒಂದು ಪ್ರಕ್ರಿಯೆ. ಭವಿಷ್ಯದೊಂದಿಗೇ ನಮ್ಮ ದೇಶದ ವರ್ತಮಾನವೂ ಕೂಡ ಯುವಕರ ಕೈಯಲ್ಲಿಯೇ ಇದೆ. ಯುವಜನರ ಮನದಲ್ಲಿ ಹೊಸ ಹೊಸ ವಿಚಾರಗಳು ಹುಟ್ಟುತ್ತವೆ. ಆ ವಿಚಾರಗಳೇ ನಮ್ಮ ದೇಶವನ್ನು ಮುನ್ನಡೆಸಲು ಸಹಾಯಕವಾಗುತ್ತವೆ. ಪ್ರಗತಿಯನ್ನು ಹೊಂದಬೇಕಾದರೆ ದೇಶದಲ್ಲಿ ಮೂರು ಮುಖ್ಯ ತತ್ವಗಳನ್ನು ಅನುಷ್ಠಾನಕ್ಕೆ  ತರಬೇಕಾಗುತ್ತದೆ. ಮೊದಲನೆಯದು ಗುಣಮಟ್ಟದ ಶಿಕ್ಷಣ, ಎರಡನೆಯದು ಔದ್ಯೋಗೀಕರಣ, ಮೂರನೆಯದು ಸಶಸ್ತ್ರೀಕರಣ. ದೇಶದ ಯುವಜನರು ಸುಶಿಕ್ಷಿತರಾದರೆ ಅವರ ಶಿಕ್ಷಣದ ಸದುಪಯೋಗವಾಗುತ್ತದೆ. ದೇಶದ ವಿಕಾಸವಾಗುತ್ತದೆ.

ನಮ್ಮ ಯುವಕರು ನಮ್ಮ ದೇಶದ ಭವಿಷ್ಯ. ಅವರನ್ನು ಸುಶಿಕ್ಷಿತಗೊಳಿಸದೆ ಹೋದರೆ ನಮ್ಮ ದೇಶದ ಪ್ರಗತಿಯು ಸಾಧ್ಯವಿಲ್ಲ. ಯುವಕರು ತಾರ್ಕಿಕವಾಗಿ, ಮುಕ್ತಮನದಿಂದ ಯೋಚಿಸಬೇಕೆಂದಲ್ಲಿ ಅವರಿಗೆ ಶಿಕ್ಷಣದ ಅವಶ್ಯಕತೆಯಿದೆ. ನಮ್ಮ ದೇಶದ ಅತ್ಯಂತ ಜ್ವಲಂತ ಸಮಸ್ಯೆ ಎಂದರೆ ನಿರುದ್ಯೋಗ ಸಮಸ್ಯೆ. ಇದರಿಂದಾಗಿ ದೇಶದಲ್ಲಿ ಅರಾಜಕತೆಯೂ, ಸಾಮಾಜಿಕ ಅಶಾಂತಿಯೂ ಉಂಟಾಗಬಹುದು. ಮೂರನೆಯದಾಗಿ ಯುವಜನರು ತಮ್ಮ ಜೀವನದ ಹೊಣೆಗಾರಿಕೆಯನ್ನು ಹೊರಬೇಕಾದಲ್ಲಿ ಅವರು ಸಬಲರಾಗಬೇಕಾಗುತ್ತದೆ. ಅವರ ಅಧಿಕರಗಳಿಗೆ ಬೆಂಬಲ ಕೊಡುವುದು, ಅವರನ್ನು ಸಾಮುದಾಯಿಕ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಜೊತೆಗೂಡಿಸಿಕೊಳ್ಳುವುದು ಅವಶ್ಯಕ.

ಯುವಜನರ ಬುದ್ಧಿ ಹಾಗೂ ಶಕ್ತಿಯ ಉಪಯೋಗವನ್ನು ನಮ್ಮ ದೇಶದ ಪ್ರಗತಿಗಾಗಿ ಅತ್ಯಂತ ಜಾಣ್ಮೆಯಿಂದ ಉಪಯೋಗಿಸಿಕೊಳ್ಳಬೇಕು. ಅವರ ಈ ಎಲ್ಲ ಶಕ್ತಿಗಳಿಗೆ ಒಂದು ಯೋಗ್ಯವಾದ ಔಟ್ಲೆಟ್ ಬೇಕಾಗಿದೆ. ಅದಕ್ಕಾಗಿ ನೀತಿಗಳನ್ನು ರೂಪಿಸುವುದು ಅವಶ್ಯಕ. ನಮ್ಮ ದೇಶವು ವಿಜ್ಞಾನ, ತಂತ್ರಜ್ಞಾನಗಳಲ್ಲಿ, ಆರ್ಥಿಕತೆಯಲ್ಲಿ, ಆರೋಗ್ಯದ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಬೇಕಾದಲ್ಲಿ ನಮ್ಮ ಯುವಕರು ಉತ್ಸಾಹದಿಂದ ಹಾಗೂ ಪ್ರಾಮಾಣಿಕತೆಯಿಂದ ಭಾಗವಹಿಸುವ ಅಗತ್ಯವಿದೆ.

ಈ ರೀತಿಯಾಗಿ ಯುವಕರು ರಾಷ್ಟçದ ಪ್ರಗತಿಯಲ್ಲಿ ವಿಶೇಷ ಪಾತ್ರವನ್ನು ವಹಿಸುವುದರಿಂದ ಹಾಗೂ ಅವರೇ ದೇಶದಲ್ಲಿ ಬದಲಾವಣೆಗಳನ್ನು ತರಲು ಸಾಧ್ಯವಿರುವುದರಿಂದ ಅವರ ಉಡ್ಡಯನಕ್ಕಾಗಿ ನಾವು ವಿಶಾಲ ಆಗಸವನ್ನು ನೀಡಬೇಕಾಗಿದೆ..

**

ಮಾಲತಿ ಮುದಕವಿ, ಧಾರವಾಡ-೫೮೦೦೦೭

Leave a Reply