ಬುಡಾಪೆಸ್ಟ್ ನ ನಾಲಿಗೆಯಿಲ್ಲದ ಸಿಂಹಗಳು

ಬುಡಾಪೆಸ್ಟ್ ಡಾನ್ಯೂಬ್ಮ ತ್ತು ನಾಲಿಗೆಯಿಲ್ಲದ ಸಿಂಹಗಳು.

ಗಜಗಾತ್ರದ ನಾಲ್ಕು ನಾಲಿಗೆಯಿಲ್ಲದ ಸಿಂಹಗಳು ಡಾನ್ಯೂಬ್ ನದಿಯ ಚೇನ್ ಬ್ರಿಜ್ ಮೇಲಿನ ನಾಲ್ಕೂ ನಿಟ್ಟಿನಲ್ಲಿ ಭವ್ಯವಾಗಿ ಕೂತು ಹೋಗುಬರುವವರನ್ನೇ ದಿಟ್ಟಿಸುತ್ತಿವೆಯಲ್ಲ ಅನಿಸಿ ಇದೇನಿದು? ಆ ಸಿಂಹಗಳ ಜಿಹ್ವಾರಹಿತ ಕಥನದ ಹಿಂದೇನಿರಬಹುದು‌? ಎಂದು ನಾನು ಕೆದಕಿದೆ. ನದೀತಟದ ಎರಡು ಬದಿಗಳನ್ನು ಬೆಸೆಯಲು ಸೇತುವೆ ಕಟ್ಟೋಣ ಸಹಜ ಅಲ್ಲವೇ? ಹಾಗೆ ಬುಡಾ ಮತ್ತು ಪೆಸ್ಟ್ ಎಂಬ ನಗರಗಳನ್ನು ಒಂದು ಮಾಡಲು ಅಲ್ಲಿನ ಡಾನ್ಯೂಬ್ ನದಿಯ ಮೇಲೆ ಚೇನ್ ಹೆಸರಿನ ಸೇತುವೆ ಎದ್ದು ನಿಂತಿತು.‌ (ಸೇತುವೆಯನ್ನು ಬ್ರಿಟಿಷ್ ಇಂಜಿನಿಯರುಗಳು ಕಟ್ಟಿದರು) ಅನಂತರ ಅದರ ನಾಲ್ಕು ತುದಿಗಳ ಮೇಲೆ ಭವ್ಯವಾದ ನಾಲ್ಕು ಸಿಂಹಗಳು ಬಂದು ಕೂತವು. 1849 ಸಮಯದ ಸಂಗತಿ ಇದು.

ಇನ್ನು ದಂತಕತೆಗಳು ಹುಟ್ಟಿ ಹರಡಿದ ಬಗೆ ನೋಡಿ. ಸೇತುವೆಯ ಉದ್ಘಾಟನೆಯ ದಿನ ಎಲ್ಲ ಗೌಜಿ ನಡೆದು ಇನ್ನೇನು ಬ್ರಿಜ್ ಆರಂಭ ಎಂದು ಘೋಷಿಸಬೇಕು ಆಗ ಸೇತುವೆ ಮೇಲಿನ ಸಿಂಹಗಳನ್ನು ಕಡೆದ ಶಿಲ್ಪಿ ಇಶ್ತ್ವಾನ್ ಶ್ಕೆನ್ಯಿಯ (ತಂಡದವನೇ ಒಬ್ಬ ಸಹಾಯಕ‌” ಅಯ್ಯೋ ಸಿಂಹಗಳ ಬಾಯಲ್ಲಿ ನಾಲಿಗೆಯೇ ಇಲ್ಲ” ಎಂದು ಕೂಗಿದನಂತೆ. ಅವಾಕ್ಕಾದ ಶಿಲ್ಪಿ ಇನ್ನೊಂದು ಬಾರಿ ಸಿಂಹಗಳನ್ನು ನೋಡಿ ಬಾಯಿಯಲ್ಲಿ ತಾನು ನಾಲಿಗೆ ಇಡುವುದನ್ನು ಹೇಗೆ ಮರೆತೆ ಎಂದು ಆಘಾತಕ್ಕೆ ಸಿಲುಕಿ ಅವಮಾನದ ಹೊಡೆತಕ್ಕೆ ಅದೇ ಸೇತುವೆಯ ಮೇಲಿಂದ ಕೆಳಗಿನ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡನಂತ!!
ಆದರೆ ಇದೊಂದು ಸಂಪೂರ್ಣ ಮಿಥ್ಯೆ. ಆ ಥರ ಏನೂ ನಡೆದಿಲ್ಲ ಎಂದು ಹೇಳುವವರೂ ಇದ್ದಾರೆ ಇಲ್ಲಿ . ಮಿಥ್ಯೆಯೋ? ತಥ್ಯವೋ?
ಅದೇನೇ ಇರಲಿ ಈ (ನಾಲಿಗೆ ಇಲ್ಲದ) ಸಿಂಹಗಳು ಮಾತ್ರ ತುಂಬ ಚಂದ. ಭವ್ಯ. ಡಾನ್ಯೂಬ್ ನದಿಯ ಸೇತುವೆಗೆ ಭೂಷಣಪ್ರಾಯವಾಗಿ ಕೂತು ನೋಡು ಬಾ ಎಂದು ಕರೆಯುತ್ತವೆ.

ಕಪ್ಪು ಸಮುದ್ರಕ್ಕೆ ಧಾವಿಸುವ ಯುರೋಪಿನ ಮಹಾ ನದಿಗಳಲ್ಲಿ ಎರಡನೆಯ ಜಾಗ ಗಿಟ್ಟಿಸಿಕೊಂಡಿರುವ ಡಾನ್ಯೂಬ್ ಡೊನಾವ್, ದುನೆರಾ, ದೂನಾ, ದುನಾಜ್, ದೂನೈ, ದೂನಾವ್ ಅಂತ ಹಲವಾರು ಹೆಸರಿನ ಹೊಸ ವೇಷಗಳ ತೊಟ್ಟು ಹರಿಯುವ ಮೊದಲು ಜರ್ಮನಿಯ ಬ್ಲ್ಯಾಕ್ ಫಾರೆಸ್ಟ್ ಗಳಲ್ಲಿ ಹುಟ್ಟುತ್ತದೆ. ರಶಿಯದ ಓಲ್ಗಾ ಬಿಟ್ಟರೆ ಯೂರೋಪಿನ ತುಂಬೆಲ್ಲ ಸಮುದ್ರದಷ್ಟು ನೀರನ್ನು ಹೊತ್ತು‌ ಹರಿಯುವುದೇ ಈ ಡಾನ್ಯೂಬ್.
ಎರಡುಸಾವಿರದಾ ಎಂಟುನೂರು ಕಿಲೋಮೀಟರ್ ಓಡುವಾಗ ಇದು ಬಳಸಿ ಬರುವ ದೇಶಗಳು ಆಸ್ಟ್ರಿಯಾ, ಸ್ಲೋವಾಕಿಯಾ, ಹಂಗರಿ, ಜರ್ಮನಿ, ಕ್ರೋವೇಶಿಯಾ, ಸೆರ್ಬಿಯಾ , ಬಲ್ಗೇರಿಯಾ, ರೋಮಾನಿಯಾ, ಮೊಲ್ಡೋವಾ, ಮತ್ತು‌ಉಕ್ರೇನ್.
ಅಬ್ಬಬ್ಬಾ ಅನಿಸಿತು..ಅಲ್ಲ ಒಂದು ದೇಶವನ್ನೇ ದಾಟಲಾಗದೆ ಒದ್ದಾಡಿ ಅಲ್ಲಲ್ಲೇ ಹರಿದು‌ ಸಮುದ್ರ ಸಿಕ್ಕೊಡನೆ ಮಾಯವಾಗುವ ನದಿಗಳೆಲ್ಲಿ? ಅಂದಹಾಗೆ ಹತ್ತು ದೇಶಗಳನ್ನು ಸುತ್ತಿಬರುವ ನದಿ ಇದೊಂದೇ ಅಂತೆ ಪ್ರಪಂಚದಲ್ಲಿ!

 

Leave a Reply