ಬುದ್ಧ ಮತ್ತು ನಾನು!
ಹಾ…ಇವತ್ತು ಬುದ್ಧನೊಟ್ಟಿಗೆ ಮಾತಿಗಿಳಿಯುವ ತವಕ ನನಗೆ…ಬುದ್ಧನಿಗೆ ನನ್ನ ಮನದ ಮಾತು ಹೇಳುವುದಿದೆ. ಬುದ್ಧ!… ಈಗಲ್ಲ ಚಿಕ್ಕವಳಿದ್ದಾಗಿನಿಂದ ನಿನ್ನ ಕುರಿತು ಕೇಳುತ್ತಿದ್ದೇನೆ. ಆಗ ನೀನು ಮುದ್ದಾದ ಗೊಂಬೆಯಂತೆ ಕಾಣುತ್ತಿದ್ದೆ. ನಿನ್ನೋಟ್ಟಿಗೆ ಆಟವಾಡಿ ಕಾಲ ಕಳೆಯುತ್ತಿದ್ದೆ. ಮುಂದೆ ಪಠ್ಯ ಪುಸ್ತಕಗಳಲ್ಲಿ ಓದಿದಾಗ ಓ…ಬುದ್ಧ ಸಾಮಾನ್ಯನಲ್ಲ ಏನೋ ಸಾಧನೆ ಮಾಡಿ, ಜ್ಞಾನ ಸಂಪಾದನೆ ಮಾಡಿರುವ ವ್ಯಕ್ತಿ ಎಂದು ತಿಳಿಯಿತು. ಮುಂದೆ ಬುದ್ಧನೆಂದಾಗ ಆಸೆ,ದುಃಖ,ಕರುಣೆ ಪ್ರೀತಿ,ಮೋಹ ಇನ್ನೂ ಹಲವಾರು ವಿಷಯಗಳು ತಿಳಿದುಕೊಂಡೆ. ಈಗ ಅರ್ಧ ಆಯಸ್ಸು ಕಳೆಯುವ ಹೊತ್ತಿಗೆ ನಿನ್ನನ್ನು ಅರ್ಥೈಸಿ ಕೊಳ್ಳುತ್ತಿದ್ದೇನೆ. ಇಂದು ನನ್ನ ಅರ್ಥೈಸಿ ಕೊಳ್ಳುವಿಕೆಯ ಕುರಿತು ನಾಚಿಕೆ ಯಾಗುತ್ತಿದೆ…ಏಕೆಂದು ಕೊಂಡೆಯಾ… ಹಾ ಹೇಳುತ್ತೇನೆ…ಏಕೆಂದರೆ… ನಿನ್ನನ್ನು ತಿಳಿಯಲು ಓದುವುದು, ನಿನ್ನ ವಿಷಯಗಳನ್ನು ಹೆಚ್ಚು ಸಂಗ್ರಹಿಸಲು ಹುಡುಕುವುದು, ಪರರ ಭಾಷಣ,ಉಪನ್ಯಾಸ ಕೇಳುವುದು ಇದರಲ್ಲೇ ಸಮಯ ವ್ಯರ್ಥವಾಯಿತು ಎಂದು ಮರುಗುತ್ತಿದ್ದೇನೆ..ಇಂದು ನಿನ್ನ ಮೂರ್ತಿ ನೋಡಿದ ಮೇಲೆ… ಬಹುಶಃ ನನ್ನ ಅಂತರಾತ್ಮ ಈದಿನ ನಿನ್ನನ್ನು ಸರಿಯಾಗಿ ವಿಶ್ಲೇಷಣೆ ಮಾಡಿದೆ ಅಂತ ಅನ್ನಿಸಿದೆ. ಆ…ನಿನ್ನ ಗಂಭೀರ ಮುಖಭಾವವನ್ನು ಇಂದು ಸುಧೀರ್ಘವಾಗಿ ನೋಡುತ್ತಲೇ ಇದ್ದೆ. ಅದೆಂಥ ಧ್ಯಾನಸ್ಥ ಸ್ಥಿತಿ…ಅದೆಂಥ ಗಂಭೀರ ಭಾವ..ಅದೆಂಥ ಮೌನ…ಅಬ್ಬಾ…ಕೆಲ ಸಮಯ ಭಾವೋದ್ವೇಗಕ್ಕೆ ಗುರಿಯಾದೆ. ಎಂದೂ ಇಲ್ಲದ ಈ ಭಾವ ಇಂದೇಕೆ ಎಂದು ಪ್ರೇಶ್ನಿಸಿಕೊಂಡೆ. ಆ ಶಾಂತ ಮುಖ ಭಾವ, ಆ…ನಿನ್ನ ಮೌನ ನನ್ನ ಮೈಮನದಲ್ಲಿ ರೋಮಾಂಚನ ಉಂಟುಮಾಡಿತು. ಆ…ನಿನ್ನ ಮೌನ ಸಾವಿರ ಮಾತುಗಳನ್ನು ಹೇಳುತ್ತಿತ್ತು..ನೀ ಹೇಳುತ್ತಿರುವ ಎಲ್ಲದಕ್ಕೂ ನಾನು ವಿರುದ್ಧವಾಗಿದ್ದು ದು ನನ್ನ ಭಾವೋದ್ವೇಗಕ್ಕೆ ಕಾರಣವಾಗಿತ್ತು. ನಾ ನಿನ್ನ ಓದಿದೆ, ತಿಳಿಯಲು ಪ್ರಯತ್ನಿಸಿದೆ ಎಲ್ಲಾ ಸರಿ ಆದರೆ ಕ್ರಿಯೆಯಲ್ಲಿ ತಂದದ್ದು ಎಷ್ಟು..? ಎಂಬ ಪ್ರಶ್ನೆ ಕಾಡಿತು. ಬುದ್ಧ!… ಆಸೆಯ ಕುರಿತು ನೀನು ಹೇಳಿದ ಮಾತು ನನಗೆ ಮೆಚ್ಚುಗೆಯಾಗಿತ್ತು…ಆದರೆ ಸಿಕ್ಕಿದಂತೆಲ್ಲ ಆಸೆ ಹೆಚ್ಚುತ್ತಲೇ ಹೋಯಿತು….ಇದರಿಂದ ತೃಪ್ತಿ ಸಿಗದೆ ದುಃಖವೂ …ನೀ ಹೇಳಿದಂತೆಯೇ ಹೆಚ್ಚಿತು.
ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ… ಯಾರೂ ಶಾಶ್ವತವಲ್ಲ ಎಂಬುದು ನೀ ಸಾರಿ ಸಾರಿ ಹೇಳಿದ್ದು… ನಾ ಓದುತ್ತಲೇ ಇದ್ದೆ. ಆದರೂ ಮೋಹಪಾಶದಿಂದ ಹೊರಬರಲು ಪ್ರಯತ್ನಿಸಲೆ ಇಲ್ಲ. ನಾನು, ನನ್ನದು,ನನ್ನವರು ಎಂಬ ಮೋಹಕ್ಕೆ ಅಂಟಿಕೊಂಡೇ ಇದ್ದೆ. ಏ..ಬುದ್ಧ! ನೀನು ಜಗತ್ತಿಗೆ ಪ್ರೀತಿ, ಕರುಣೆ,ಮಮತೆಯನ್ನು ಸಾರಿದೆ…ಎಲ್ಲರನ್ನೂ …ಎಲ್ಲವನ್ನೂ ಪ್ರೀತಿಸಿದ ಈ ಲೋಕದ ಏಕೈಕ ದೈವೀ ಸ್ವರೂಪಿ ನೀನು… ಇದೂ ನಾನು ತಿಳಿದುಕೊಂಡೆ…ಆದರೂ..ನನ್ನವರಿಗೆ ಈ “ನನ್ನ” ಎಂಬ ಶಬ್ದಕ್ಕೆ ಮಾತ್ರ ಇವುಗಳನ್ನು ಸೀಮಿತಗೊಳಿಸಿದೆ. ಆಪ್ತರು, ಸ್ನೇಹಿತರು, ಬಂಧುಗಳು ಸ್ವಲ್ಪವೇ ವಿರೋಧ ವ್ಯಕ್ತಪಡಿಸಿದರೂ ಸಹಿಸದೆ ದ್ವೇಷಿಸಿ ದೂರ ಮಾಡುವ ಪ್ರವೃತ್ತಿ ಬೆಳೆಸಿಕೊಂಡು … ನೀ ಹೇಳಿದ ತಾಳ್ಮೆ..ಸಹನೆ ಕಳೆದುಕೊಂಡೆ….ಹಾಗಾದರೆ ನಾ ಮಾಡಿದ್ದೇನು? ನೀನೋ…ಬುದ್ಧ! ಅರಮನೆಯ ಐಷಾರಾಮ ಜೀವನ, ಸುಂದರ ಮಡದಿ, ಮುದ್ದಾದ ಮಗು ಅಷ್ಟೇ ಯಾಕೆ ರಾಜ ಸಿಂಹಾಸನ ತೊರೆದು ತ್ಯಾಗಿಯಾಗಿ…ಲೋಕ ಕಲ್ಯಾಣ ಮಾಡಲು ಹೊರಟ ಕರುಣಾಮಯಿ! ನಾನೋ… ತ್ಯಾಗವೇನೋ ದೂರವೇ ಉಳಿಯಿತು…ಕರುಣೆ ಪ್ರೀತಿ ಪ್ರೇಮ ಎಲ್ಲರಲ್ಲೂ ತೊರಬಹುದಿತ್ತು..ನಾನು ಮಾಡಿದ್ದೇನು…ಮತ್ತದೇ…ನಿನ್ನ ಬಗ್ಗೆ “ಓದಿದ್ದು”.!? ಇಂದು ಈ ಭಾವೋದ್ವೇಗದ ಕಾರಣ ನಾನು ದುಃಖಿ ಸುತ್ತಿರುವೆ. ಬುದ್ಧ!… ನೀನು ಮನಸ್ಸನ್ನು ಹತೋಟಿಯಲ್ಲಿಡಲು ಜ್ಞಾನ, ಧ್ಯಾನದ ಮಾರ್ಗ ತಿಳಿಸಿಕೊಟ್ಟ ದಾರ್ಶನಿಕ…. ತಿಳಿದೂ ತಿಳಿದೂ ನನ್ನ ಮನಸ್ಸು ಚಂಚಲವಾಗಿದ್ದೇಕೆ?.. ವಿಶ್ವದ ಅತ್ಯುತ್ತಮ ಮಾನವ ಶಕ್ತಿ ಸಹನೆ, ಇದನ್ನು ನೀನು ಸುಂದರವಾಗಿ ಸರಳವಾಗಿ ಅರ್ಥವಾಗುವಂತೆ ತಿಳಿಸಿದೆ. ಅದೆಷ್ಟೋ ಸಮಯದಲ್ಲಿ ನಾನು ಸಹಿಸಿಕೊಳ್ಳಲು ಹೆಣಗಾಡಿದ್ದೇನೆ. ಮಾನವ ಪರಸ್ಪರ ಅವಲಂಬನ ಜೀವಿ…ಪ್ರಕೃತಿಯೊಂದಿಗೆ ಬೆರೆತು ಬದುಕಬೇಕು ಎಂದು ನೀನು ಉಪದೇಶ ನೀಡಿದೆ. ನಾನು “ನಾನು” ಎಂಬ ಅಹಂಕಾರದಲ್ಲಿ ಸರ್ವಶ್ರೇಷ್ಠ ಎಂದು ಭಾವಿಸಿ….ಅಲ್ಲ..ಅಲ್ಲ..ಭ್ರಮೆಯಲ್ಲಿ ಇಂದು ಪ್ರಕೃತಿಯ ವಿರೋಧ ಕಟ್ಟಿಕೊಂಡು..ಸಂಕಷ್ಟದಲ್ಲಿ ಸಿಲುಕಿದೆ. ಬುದ್ಧ…ನಿನಗೆ ಏನು ಹೇಳಲಿ?…ನೀ ಹೇಳಿದ್ದೇನು?… ಇಂದು ನಾನು ಮಾಡುತ್ತಿರುವುದೇನು?… ಕ್ಷಮೇಕೇಳಲೂ ಯೋಗ್ಯತೆ ಇಲ್ಲವೆಂದೇ ಹೇಳಬೇಕು. ಹಾ…ಇನ್ನೊಂದು ವಿಷಯ ಅದೂ ಸಧ್ಯದ ಪರಿಸ್ಥಿತಿ…ವರ್ತಮಾನದ ಸಂಕಷ್ಟ…ಮುಂದೆ ಹೇಳುವೆ…ಅದಕ್ಕೂ ಮೊದಲು..ನಿನ್ನ ಆ ಸಂದರ್ಭ ನೆನಪಿಸಿಕೊಳ್ಳಲು ಮರೆಯ ಬಾರದು ಎನ್ನಿಸಿದೆ… ಅದೇ… ಆ ದಿನ ನೀನು ನಿನ್ನ ನೆಚ್ಚಿನ ಬಂಟ ಅಂದರೆ ಗೆಳೆಯ ಚೆನ್ನನೊಡನೆ ವಿಹಾರಕ್ಕೆ ಹೋದೆ ಅದೇ ನಿನ್ನ ಜೀವನದ ತಿರುವನ್ನೇ ಬದಲಾಯಿಸಿದ ಕ್ಷಣ!..ಹೌದು.. ಆ ದಿನ ನೀನು ದಾರಿಯಲ್ಲಿ ಒಬ್ಬ ವೃದ್ಧ, ಒಬ್ಬ ರೋಗಿ, ಒಂದು ಕಳೇಬರ ಹಾಗೆ ಒಬ್ಬ ಸನ್ಯಾಸಿಯನ್ನು ಕಂಡು…ವ್ಯಥೆ ಪಟ್ಟೆ, ಅಷ್ಟೇ ಅಲ್ಲ ಸುಂದರವಾಗಿರುವ ಯಾವುದು ಶಾಶ್ವತವಲ್ಲ ಎಂದು ಅರಿತೆ… ಅಂದೇ…ಜಗತ್ತಿನ ಉದ್ಧಾರಕ್ಕೆ
ದುಃಖದ ಮೂಲಕ್ಕೆ ನಿದ್ದೆಗೆಟ್ಟು ಒದ್ದಾಡಿದೆ…. ಅದೇ ರಾತ್ರಿ ಪ್ರೀತಿಯ ಮಡದಿ, ಮಗು ಅರಮನೆ ವೈಭವ ಎಲ್ಲವನ್ನೂ ತೊರೆದು ನಿನ್ನ ನೆಚ್ಚಿನ ಕುದುರೆ ” ಕಾಂತಕ” ನನ್ನು ಏರಿ …ಗುರು, ಗುರಿಗಾಗಿ ಹೊರಟೇ ಬಿಟ್ಟೆ… ಇಂದೂ ಯಾವುದೋ… ಕಾಣದ ಜೀವಾಣುವೊಂದು ಹೆಮ್ಮಾರಿಯಂತೆ ಮೆರೆದು ಸಾವಿನ ರಣಕಹಳೆ ಊದುತ್ತಿದೆ…ಲಕ್ಷ ಲಕ್ಷ ಜನ ಸಾವಿಗೆ ತುತ್ತಾಗಿದ್ದಾರೆ, ಸಾವಿರ ಸಾವಿರ ಮಕ್ಕಳು ಅನಾಥರಾಗಿದ್ದರೆ, ಅದೆಷ್ಟೋ ಜನ ಬೀದಿಪಾಲಾಗಿ ದುಃಖದಲ್ಲಿದ್ದಾರೆ…ಸಾವು ದಿಂಬಿಗೆ ಆತು ಕುಳಿತು ನಗುತ್ತಿದೆ… ಓ…ಬುದ್ಧ! ನಾನೇನು ಮಾಡಿದೆ.? ನಿನ್ನಂತೆ ಎಲ್ಲಾ ಬಿಟ್ಟು ಹೋಗುವ ತ್ಯಾಗಿ ಆಗದಿದ್ದರೂ…ಸತ್ಯಾನ್ವೇಷಣೆಯ ಹುಡುಕಾಟಕ್ಕೆ ಧ್ಯಾನಸ್ಥ ಆಗದಿದ್ದರೂ…ನೊಂದವರಿಗೆ ಸಾಂತ್ವಾನ ಹೇಳಬಹುದಲ್ಲಾ?… ಪ್ರೀತಿಯ ಮಾತುಗಳನ್ನು ಹೇಳಬಹುದಲ್ಲಾ? …ಭರವಸೆ ಕಳೆದುಕೊಂಡ ಕಣ್ಣುಗಳಿಗೆ ಬೆಳಕಿನ ದಾರಿ ತೊರಬಹುದಲ್ಲಾ?… ಭಯದ ಜ್ವಾಲೆಯಲ್ಲಿ ನರಳುತ್ತಿರುವವರಿಗೆ ವಿಶ್ವಾಸದ ಹೂ ಅರಳಿಸ ಬಹುದಲ್ಲ?… ಓ..ಬುದ್ಧ!… ನಾನೇಕೆ ಈಗಲೂ ಜಡವಾಗಿರುವೆ?. ನಿನ್ನನ್ನು ನಾನು ಅರ್ಥೈಸಿಕೊಂಡದ್ದು ಇಷ್ಠೆಯೇ..? ನಿನ್ನ ಈ ಶಾಂತ ಮೂರ್ತಿ ಇಂದು ನನ್ನ ಎದೆಯ ಸೀಳಿ ಅಣಕಿಸುತ್ತಿದೆ. ನೀ ನನ್ನನ್ನು ಇನ್ನೂ ತಿಳಿಯುವುದು ಸಾಕು….ಬಿಟ್ಟು ಬಿಡು ಎಂದು ವ್ಯಂಗ್ಯವಾಗಿ ಟೀಕಿಸಿದಂತಿದೆ . ನಿನ್ನಿಂದ ಪರಿವರ್ತನೆ ಆಗದ ಈ ಬದುಕು ವ್ಯರ್ಥ ಎಂದು ಅರಿವಿಗೆ ಬರುತ್ತದೆ. ನೀನಿದ್ದಾಗಲೇ ಇದ್ದ ಆ…ಅಶೋಕ ಚಕ್ರವರ್ತಿ ಬದಲಾದ..ಕಾಳಿಂಗ ಯುದ್ಧದಲ್ಲಿ ಲಕ್ಷ ಲಕ್ಷ ಸಾವು ನೋವು ಕಂಡ ಅಶೋಕ.. ಮನಃ ಪರಿವರ್ತನೆ ಆಗಿ ಬೌದ್ಧ ಧರ್ಮ ಸ್ವೀಕರಿಸಿ ಚಾಂಡಾಲಅಶೋಕ ” ದೇವನಾಂಪ್ರಿಯ” ಅಶೋಕನಾದ. 999 ಜನರ ಕ್ರೂರವಾಗಿ ಕೊಂದು ಅವರ ಬುರುಡೆ, ಕೈ ಬೆರಳುಗಳನ್ನು ಹಾರವಾಗಿ ಹಾಕಿಕೊಂಡ ಅಂಥ ಕ್ರೂರಿ ಅಂಗುಲಿಮಾಲ ನಿನ್ನ ಶಾಂತ ಮುಖ ಭಾವದ ಪ್ರಭಾವಕ್ಕೆ ಒಳಗಾಗಿ ಪರಿವರ್ತನೆ ಆಗಿ ನಿನ್ನ ದಾಸನಾದ. ಅಂಥದ್ದರಲ್ಲಿ …ಇನ್ನೂ ನಾನು ನಿನ್ನನ್ನು ಓದುತ್ತಾ ಕುಳಿತರೆ ನನ್ನ ಜೀವನವೇ ನಶ್ವರ ಆದೀತು..ನಾನು ನಿನ್ನ ದಾಸಳಾಗಬೇಕಿದೆ ಬುದ್ಧ! ನಿನ್ನ ಶಾಂತ ಮೂರ್ತಿ ಒಂದೇ ಸಾಕು ಬದಲಾಗಲು…ನನಗೆ ಬದಲಾಗಬೇಕಿದೆ ಗುರುವೇ. ಧ್ಯಾನದಲ್ಲಿ ಬಂದು ದಾರಿತೋರು.
ಉಮಾ ಭಾತಖಂಡೆ.