ಆಧ್ಯಾತ್ಮ ಎಂದರೇನು?

ಆಧ್ಯಾತ್ಮ ಎಂದರೇನು?
ಭಾರತದಲ್ಲಿ ತತ್ತ್ವಶಾಸ್ತ್ರವನ್ನು ಎತ್ತಿ ಹಿಡಿದುದು ಜ್ಞಾನಕ್ಕಾಗಿ ಅಲ್ಲ. ಮನುಷ್ಯ ಈ ಬದುಕಿನಲ್ಲಿ ಸಾಧಿಸಬಹುದಾದ ಅತ್ಯುನ್ನತ ಗುರಿಯನ್ನು ತಲುಪುವುದಕ್ಕಾಗಿ. ಇಲ್ಲಿ ತತ್ತ್ವಶಾಸ್ತ್ರವು ಆಶ್ಚರ್ಯ, ಕುತೂಹಲಗಳಿಂದಾಗಿ ರೂಪುಗೊಂಡಿಲ್ಲ, ಬದಲಿಗೆ ಅದು ರೂಪುಗೊಂಡಿರುವುದು ಬದುಕನ್ನು ಸುಂದರಗೊಳಿಸಿಕೊಳ್ಳುವುದಕ್ಕಾಗಿ. ಇಲ್ಲಿ ತತ್ತ್ವಾನುಸಂಧಾನವು ಕೇವಲ ಬೌದ್ಧಿಕ ಜಿಜ್ಞಾಸೆ ಅಲ್ಲ. ಅದು ಕೇವಲ ಆಚರಣೆ ಪ್ರಧಾನವಾದ ನೈತಿಕತೆಯೂ ಅಲ್ಲ. ಭಾರತೀಯ ಚಿಂತಕರ ಮನಸ್ಸನ್ನು ಕಲಕಿದುದು ಬದುಕಿನ ಇತಿಮಿತಿಗಳೇ. ಇವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದೇ ಅವರ ಮುಖ್ಯ ಕಾಳಜಿ.
ನಮ್ಮ ತತ್ವಶಾಸ್ತ್ರದ ಆಧಾರವೇ ಆಧ್ಯಾತ್ಮ. ಆಧ್ಯಾತ್ಮ ಎಂದರೇನು? ಇದು ಅನಾದಿ ಕಾಲದಿಂದಲೂ ಎಲ್ಲರನ್ನೂ ಕಾಡಿದ ಹಾಗೂ ಕಾಡುವ ಪ್ರಶ್ನೆಯಾಗಿದೆ. ಕೆಲವರಿಗೆ ಆಧ್ಯಾತ್ಮವೆಂದರೆ ಬೇರೆಯೇ ಲೋಕ. ಅಲ್ಲಿ ದೇವರುಗಳದೇ ರಾಜ್ಯ. ಇನ್ನು ಕೆಲವರಿಗೆ ಅವರಿಗೆ ಉಂಟಾದಂಥ ಅನೇಕ ಅತೀಂದ್ರಿಯವೆಂದುಕೊಂಡ ವಿಚಿತ್ರ ಅನುಭವಗಳೇ ಆಧ್ಯಾತ್ಮ. ಅವರು ನೀರಿನ ಮೇಲೆ ನಡೆಯುತ್ತಾರೆ. ಸಮಾಧಿ ಸ್ಥಿತಿಯಲ್ಲಿ ಹಗೇವಿನಲ್ಲಿ ಕೂಡ್ರುತ್ತಾರೆ. ಅತ್ಯಂತ ಹೇಯವೆಂದರೆ ಇನ್ನೂ ಕೆಲವರು ಇದನ್ನೊಂದು ಉದ್ಯೋಗವನ್ನೇ ಮಾಡಿಕೊಂಡಿದ್ದಾರೆ. ಅವರು ತಮ್ಮ ಭಕ್ತರ ಸಲುವಾಗಿ ದೇವರನ್ನು ಭೆಟ್ಟಿ ಮಾಡುತ್ತಾರೆ. ಅವರಿಗೆ ಐಹಿಕ ಸುಖಭೋಗಗಳನ್ನು ಕರುಣಿಸೆಂದು ದೇವರ ಮನವೊಲಿಸುತ್ತಾರೆ. ಅದಕ್ಕಾಗಿ ಅವರ ಫೀ ಕೂಡ ಸಾಕಷ್ಟು ಹೈ ಲೆವೆಲ್ಲಿನದೇ ಆಗಿರುತ್ತದೆ. ಬಡವರಿಗೆ ಅವರ ಫೀಜಿಗೆ ತಕ್ಕಂಥ ಬೇಡಿಕೆಗಳಾದರೆ ಸಿರಿವಂತರಿಗೆ ಅವರಿಗೆ ತಕ್ಕಂಥವು! ಬೇಕಾದಷ್ಟು ಪಾಪಗಳನ್ನು ಮಾಡಿದ್ದರೂ ಆ ಉಳ್ಳವರು ಖರ್ಚು ಮಾಡುವ ಮಟ್ಟದ ಮೇಲೆ ಅವರಿಗೆ ದೇವರ ಕರುಣೆಯು ಪ್ರಾಪ್ತವಾಗುತ್ತದೆ! ಇನ್ನೊಂದು ರೀತಿಯ ಜನರಿದ್ದಾರೆ. ಅವರು ದೇವರನ್ನು ಭಜಿಸುತ್ತ ಭಜಿಸುತ್ತ ಅವರಲ್ಲಿಯೇ ಲೀನವಾಗುವ ಕನಸನ್ನು ಕಾಣುತ್ತಾರೆ. ಇಹದ ಗೊಡವೆಯೇ ಅವರಿಗೆ ಮರೆತುಹೋಗುತ್ತದೆ. ಹೀಗೆಯೇ ಮುಂದೆ ಅವರು ಮಾನಸಿಕ ಖಿನ್ನತೆಗೂ ಒಳಗಾಗುತ್ತಾರೆ. ಅದರೆ ಇದಾವುದೂ ಆಧ್ಯಾತ್ಮ ಜ್ಞಾನವಲ್ಲ. ಅವರವರ ದೃಷ್ಟಿಯಲ್ಲಿ ಅದು ಸರಿ ಎನ್ನಿಸಿದ್ದರೂ ಅದು ಆಧ್ಯಾತ್ಮಿಕತೆಯಲ್ಲ.
ಧಾರ್ಮಿಕ ಸ್ಥಳಗಳಲ್ಲಿ ಪೂಜೆ ಮಾಡುವುದು ಆಧ್ಯಾತ್ಮವೇ? ಅಲ್ಲವೇ ಅಲ್ಲ. ಆಧ್ಯಾತ್ಮವೇ ಬೇರೆ, ಭಕ್ತಿಯೇ ಬೇರೆ. ಭಕ್ತಿಯಲ್ಲಿಯ ಉನ್ಮಾದವೇ ಬೇರೆ. ನಾವು ಇದುವರೆಗೆ ಆಚರಿಸಿಕೊಂಡು ನಮ್ಮ ಪದ್ದತಿಗಳು, ಆಚಾರ-ವಿಚಾರಗಳು, ಪೂಜೆಯ ಪದ್ಧತಿಗಳು ಆಧ್ಯಾತ್ಮಿಕತೆಯಲ್ಲ.
ಅಧ್ಯಾತ್ಮದ ನಿಜವಾದ ಅರ್ಥವೇ ಬೇರೆ. ಅದು ನಮ್ಮ ಅಂತರಂಗದಲ್ಲಿ ನಡೆಯುವ ಬದಲಾವಣೆ, ನಮ್ಮ ಅಂತರಂಗದಲ್ಲಿಯ ನಮ್ಮ ಅನುಭವ, ಅಂತರ್ಮುಖಿ ಅನ್ವೇಷಣೆ ಹಾಗೂ ಪರಿಶೋಧನೆಗಳು.
ಸಾಂಖ್ಯ ದರ್ಶನವು ಭಾರತೀಯ ಸಿದ್ಧಾಂತಗಳ ಒಂದು ಪಂಥ. ಇದು ಹಿಂದೂ ಸಿದ್ಧಾಂತದ ಮೇಲೆ ವೈದಿಕ ಪ್ರಭಾವವನ್ನು ಮಾನ್ಯ ಮಾಡುವ ಆರು ಆಸ್ತಿಕಗಳಲ್ಲಿ ಒಂದು. ಇದು ಅತ್ಯಂತ ಪ್ರಾಚೀನ ಹಾಗೂ ಸಂಪ್ರದಾಯಬದ್ಧ ಸಿದ್ಧಾಂತವೆಂದು ಪರಿಗಣಿತವಾಗಿದೆ. ಇದರ ಸಂಸ್ಥಾಪಕರು ಕಪಿಲ ಮುನಿಗಳು. ಇದು ಪುರುಷ ಹಾಗೂ ಪ್ರಕೃತಿಗಳ ದ್ವೈತವನ್ನು ಎತ್ತಿ ಹಿಡಿಯುತ್ತದೆ. ಸಾಂಖ್ಯ ದರ್ಶನದಲ್ಲಿ “ಆತ್ಮಾನಂ ವಿದ್ಧಿ” (ನಿನ್ನನ್ನು ನೀನು ಅರಿ) ಎಂದು ಹೇಳಿದೆ. ಅದನ್ನೇ ನಮ್ಮ ಮುಕ್ತಾಯಕ್ಕನು, “ತನ್ನ ತಾನರಿದವಂಗೆ ಅರಿವೇ ಗುರು; ಅರಿವರಿತು ಮರಹು ನಷ್ಟವಾದಲ್ಲಿ ದೃಷ್ಟನಷ್ಟವೇ ಗುರು; ದೃಷ್ಟನಷ್ಟವೇ ಗುರು ತಾನಾದಲ್ಲಿ ಮುಟ್ಟಿ ತೋರಿದವರಿಲ್ಲದಡೇನು? ಸಹಜವ ನೆಲೆಗೊಳಿಸುವ ನಿರ್ಣಯ ನಿಷ್ಟತ್ತಿಯೇ ಗುರು ನೋಡಾ; ಗುರು ತಾನಾದಡೆಯೂ ಗುರುವಿಡಿದರಬೇಕು ಎನ್ನ ಅಜಗಣ್ಣನಂತೆ” ಎಂದು ಹೇಳುತ್ತಾಳೆ.
ಸಾಂಖ್ಯ ದರ್ಶನದ ಪ್ರಕಾರ ಮನುಷ್ಯನಲ್ಲಿ ಐದು ಆಧ್ಯಾತ್ಮ ಕೋಶಗಳನ್ನು ಗುರುತಿಸಿದ್ದು, ಅದರೊಳಗೆ ಮೊದಲನೆಯದು ಅನ್ನಮಯ ಕೋಶ. ಇಲ್ಲಿ ಮಾನವೀಯ ಬಯಕೆ, ಪ್ರೇರಣೆಗಳ ಜೈವಿಕವಾದ “ಪ್ರಾಣಮಯ ಕೋಶ” ಈ ಕೋಶದೊಳಗೆ ಇಂದ್ರಿಯ ಗ್ರಹಿಕೆಗಳ ಮನಸ್ಸಿಗೆ ಸಂಬಂಧಿಸಿದ “ಮನೋಮಯ ಕೋಶ” ಇನ್ನೂ ಒಳಗೆ ಅತ್ಯುನ್ನತ ಮಟ್ಟದ ಅಂತರ್ಬೊಧೆ ಹಾಗೂ ಬುದ್ಧಿಶಕ್ತಿಗಳ, ವಿಶ್ವಸಮಾನತೆಯ ಆದ್ಯಾತ್ಮಿಕ ವಲಯದ ” ವಿಜ್ಞಾನಮಯ ಕೋಶ ಮತ್ತು ಇವೆಲ್ಲವುಗಳ ಕೇಂದ್ರದಲ್ಲಿ ಪರಿಪೂರ್ಣ ಆನಂದದ ಬೆಳಕು ನೀಡುವ ಆನಂದಮಯ ಕೋಶ.
ನ ವಾ ಪಂಚಕೋಶಃ -ಇದಾದ ಬಳಿಕ ಜೀವನನ್ನು ಬಂಧನದಲ್ಲಿ ಮತ್ತು ಅಜ್ಞಾನದಲ್ಲಿ ಇಟ್ಟಿರುವ ಐದು ಪದರಗಳಾದ ಪಂಚಕೋಶಗಳ ಬಗ್ಗೆ ಹೇಳುತ್ತಾ ಅವೂ ಸಹಾ ನಾನು ಎಂಬ ಆತ್ಮವಲ್ಲ ಎನ್ನುತ್ತಾರೆ ಭಗವಾನ್ ಶಂಕರರು. ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದ ಮಯ ಎನ್ನುವ ಕೋಶಗಳೇ ಈ ಐದು ಪದರಗಳು.
ಅನ್ನಮಯ ಕೋಶವು ಸ್ಥೂಲ ದೇಹಕ್ಕೆ ಸಂಬಂಧಿಸಿದ್ದಾಗಿದೆ. ಅನ್ನವು ಸ್ಥೂಲ ವಸ್ತುವನ್ನು ಹೇಳುತ್ತದೆ. ಹಾಗಾಗಿ ಸ್ಥೂಲ ದೇಹದಲ್ಲಿನ ಜೀವವು ಈ ಅನ್ನದಿಂದ ಜೀವಿಸಿದೆ, ಅನ್ನದ ಮೇಲೆ ಅವಲಂಬಿತ ಆಗಿದೆ. ಈ ಜೀವನು ಹುಟ್ಟು ಸಾವು, ಅನಾರೋಗ್ಯ, ಅಂಗವೈಕಲ್ಯ ಇವೆಲ್ಲವನ್ನೂ ಹೊಂದತ್ತಾನೆ. ಪ್ರಾಣಮಯ ಕೋಶವು ಪಂಚವಾಯುಗಳಿಂದ ಮತ್ತು ಪಂಚ ಕರ್ಮೇಂದ್ರಿಯಗಳಿಂದ ಕೂಡಿದೆ. ಈ ಹಿಂದೆಯೇ ಪಂಚವಾಯುಗಳಾಗಲೀ,  ಕರ್ಮೇಂದ್ರಿಯಗಳಾಗಲೀ ನಾನು ಎನ್ನುವ ಆತ್ಮವಲ್ಲ ಎಂದು ಹೇಳಿದ ಮೇಲೆ ಇವುಗಳಿಂದ ಮಾಡಲ್ಪಟ್ಟ ಪ್ರಾಣಮಯ ಕೋಶವೂ ಕೂಡ ನಾನು ಎನ್ನುವ ಆತ್ಮವಲ್ಲ. ಮನೋಮಯ ಕೋಶವು ಮನಸ್ಸು ಮತ್ತು ಜ್ಞಾನೇಂದ್ರಿಯಗಳಿಗೆ ಸಂಬಂಧಿಸಿದ್ದಾದರೆ, ವಿಜ್ಞಾನ ಮಯಕೋಶವು ಬುದ್ಧಿ ಮತ್ತು ಜ್ಞಾನೇಂದ್ರಿಯಗಳಿಗೆ ಸಂಬಂಧಿಸಿದೆ. ಮನೋಮಯ ಕೋಶ ಮತ್ತು ವಿಜ್ಞಾನಮಯ ಕೋಶಗಳು ಸೂಕ್ಷ್ಮ ದೇಹವಾಗಿದೆ. ಪ್ರಾಣಮಯ ಮತ್ತು ಮನೋಮಯ ಕೋಶಗಳು, ಭಯ, ದುಃಖ, ರೋಗ, ಇವುಗಳಿಗೆ ಸೀಮಿತವಾಗಿವೆ. ವಿಜ್ಞಾನಮಯ ಕೋಶದಲ್ಲಿ ಜೀವನು ಸ್ಥೂಲ ಮತ್ತು ಸೂಕ್ಷ್ಮಗಳ ಅಸ್ಥಿತ್ವದ ಮಿತಿಯಿಂದ ಅಂದರೆ ಬಿಸಿ, ತಂಪು, ದುಃಖ, ಭಯ ಇವುಗಳಿಂದ ಮುಕ್ತವಾಗಿದ್ದರೂ, ಜ್ಞಾನೇಂದ್ರಿಯಗಳಲ್ಲಿ ಸೂಕ್ಷ್ಮ ಅಸ್ತಿತ್ವದ ಬಂಧನ ಇದ್ದೇ ಇರುತ್ತದೆ. ಆ ಬಂಧನವನ್ನೂ ಮೀರಿ ಮೇಲೇರಲು ಜೀವಿಗೆ ಕಷ್ಟ ಸಾಧ್ಯ. ಅನಂದಮಯ ಕೋಶವು, ಮೂಲಪ್ರಕೃತಿ ಅಂದರೆ ಕಾರಣವು ಶರೀರವೇ ಆಗಿದೆ. ಇದು ಎಲ್ಲಾ ಕರ್ಮಗಳ ಉಗ್ರಾಣ. ಇಲ್ಲಿ ಕೂಡ ಜೀವನು ಕಾರಣಶರೀರದ ಮಿತಿಯಲ್ಲೇ ಇರುತ್ತಾನೆ. ಹಾಗಾಗಿ ಈ ಕೋಶವೂ ಕೂಡ ನಾನು ಎಂಬ ಆತ್ಮವಲ್ಲ. ಹಾಗಾಗಿ ಸ್ಥೂಲ, ಸೂಕ್ಷ್ಮ ಕಾರಣ ದೇಹಗಳೂ ಪಂಚಕೋಶಗಳೂ ನಾನು ಎಂಬ ಆತ್ಮವಲ್ಲ.
೧)ಆಧ್ಯಾತ್ಮ ಎಂದರೆ ಅದು ನನ್ನ  ಮನಸ್ಸು ಅಥವಾ ಮನಸ್ಸನ್ನು ನಿಗ್ರಹಿಸುವುದು.
೨) ಆಧ್ಯಾತ್ಮ ಎಂದರೆ ಪ್ರೀತಿ
೩) ಆಧ್ಯಾತ್ಮ ಎಂದರೆ ಮುಗ್ಧತೆ
೪) ಆಧ್ಯಾತ್ಮ ಎಂದರೆ ಅನುಭವಿಸುವಿಕೆ.
೫) ಆಧ್ಯಾತ್ಮ ಎಂದರೆ ಹುಡುಕು.
ಮನಸ್ಸನ್ನು ನಿಗ್ರಹಿಸಿ ಸಮಾಜದಲ್ಲಿ ಸಕಲ ಜೀವಿಗಳಲ್ಲೂ ಸಹಬಾಳ್ವೆ ನಡೆಸುವುದೇ ಆಧ್ಯಾತ್ಮದ ಒಂದನೇ ಹಂತ. ನಿಷ್ಕಳಂಕ ಪ್ರೀತಿಯಲ್ಲಿ ಜೀವನ ಸಾಗಿಸುವುದೇ ಆಧ್ಯಾತ್ಮ
ಉದಾಹರಣೆಗೆ ತಾಯಿ ಮಗುವಿನ ಪ್ರೀತಿ. ಮಗುವಿನ ನಗುವಿನಲ್ಲಿ ಇರುವ ಮುಗ್ದತೆ. ತಾಯಿಯ ಎದೆ ಹಾಲು ಚೀಪುವ ಮಗು ತನಗೆ ಗೊತ್ತಿಲ್ಲದೆಯೇ ಆ ತಾಯಿಯು  ಪರಮ ಆನಂದ ಪಡೆದುಕೊಳ್ಳುತ್ತಾ ತನ್ನಲ್ಲಿ ತಾನು ಕಳೆದುಹೋಗಲು ಕಾರಣವಾಗುವುದೇ ಆಧ್ಯಾತ್ಮ.  ತಂದೆತಾಯಿ, ಬಂಧು ಬಾಂದವರಲ್ಲಿನ ಕಪಟವಿಲ್ಲದ ನೈಜ ಅನುಬಂಧವೇ ಆಧ್ಯಾತ್ಮ. ಪ್ರತಿ ಜೀವಿಯ ಉಚ್ಚ್ವಾಸ ನಿಃಶ್ವಾಸವೆ ಆಧ್ಯಾತ್ಮ.
ಭೂಮ್ಯಾಕಾಶಗಳ ನಡುವಿನ ಗಾಳಿ, ಬಿರುಗಾಳಿ, ಮಾರುತಗಳ ಸ್ಪರ್ಶವೇ ಆಧ್ಯಾತ್ಮ. ಒಂಬತ್ತು ತಿಂಗಳು ತನ್ನ ಗರ್ಭದಲ್ಲಿ ಹೊತ್ತು ಆ ಒಂಬತ್ತು ತಿಂಗಳಲ್ಲಿ ಅನುಭವಿಸಿದ ಸಂಕಟ, ನೋವು, ಸುಖ, ಕಾತರ, ಭಯ, ಅಂತಿಮವಾಗಿ ತಾಯ್ತನದ ಸುಖ. ಇದು ಒಂದು ಹೆಣ್ಣಿಗೆ ಪ್ರಕೃತಿ ನೀಡಿದ ಆಧ್ಯಾತ್ಮ.
ಹಿಂದೂಧರ್ಮದಲ್ಲಿ ಆಧ್ಯಾತ್ಮದ ಆರಂಭ ಬಿಂದು ಮನುಷ್ಯನೇ ಹೊರತು ದೇವರಲ್ಲ. ಇಲ್ಲಿ ಪ್ರತ್ಯಕ್ಷ ಪ್ರಮಾಣ ನೇರಗ್ರಹಿಕೆಯು ಆಧ್ಯಾತ್ಮದ ಪರೀಕ್ಷೆಯ ವೇದಿಕೆಯಾಗಿತ್ತೇ ಹೊರತು ಮತಾಂಧ ವಿಶ್ವಾಸವಾಗಿರಲಿಲ್ಲ. ಮತೀಯವಾದವೂ ಅಲ್ಲ.
ನಾವು ಪ್ರಕೃತಿಯಲ್ಲಿ ಬೆರೆತು ಬಾಳುವುದೇ ಆಧ್ಯಾತ್ಮ. ಅತಿ ದೊಡ್ಡ ಪ್ರಕೃತಿಯಲ್ಲಿ “ಪರಮಂ ಗುಹ್ಯಂ” ಎಲ್ಲ ಅನುಭವದ ರಹಸ್ಯಗಳಲ್ಲಿನ ಪರಮ ರಹಸ್ಯವನ್ನು ಪರಿಶೋಧನೆ ಮಾಡುವುದೇ ಆಧ್ಯಾತ್ಮ.
ಮನುಷ್ಯ ಪ್ರತ್ಯಕ್ಷ ಪ್ರಮಾಣಕ್ಕೆ ದೊರೆಯುವ ಇಂದ್ರಿಯಗೋಚರವಾದ ವಾಸ್ತವ ಎಂಬುದನ್ನು ಹಿಂದೂ ಆಧ್ಯಾತ್ಮಿಕತೆಯೂ ಎತ್ತಿಹಿಡಿಯುತ್ತದೆ. ಅರಿವಿನ ಬೆಳಕಿನತ್ತ  ಹೊರಟವನು ತನಗೆ ಹಾಕಿಕೊಳ್ಳುವ ಮೊದಲ ಪ್ರಶ್ನೆಯೆಂದರೆ ಕೋsಹಂ( ನಾನು ಯಾರು)?
ಆಧ್ಯಾತ್ಮವೂ ಮುಖ್ಯವಾಗಿ ಮಾನವಜೀವಿಗೆ ದೇಹ-ಮನಸ್ಸು-ಬುದ್ದಿಶಕ್ತಿಗಳ ಆಯಾಮಗಳನ್ನು ಮೀರಿದ ವ್ಯಾಪ್ತಿಯಿದೆ ಎಂದು ಗುರುತಿಸುತ್ತದೆ. ಸೃಜನಶೀಲತೆಯನ್ನು, ಕಲ್ಪನಾಶೀಲತೆಯನ್ನು ಮೀರುವ ಅಪಾರ ಸಾಧ್ಯತೆಯು ಮನುಷ್ಯನಿಗಿದೆ. ಮೊದಲು ನಿನ್ನ ಅಂತರ್ಬೋಧೆಯಲ್ಲಿ ವಿಶೇಷವಾದ ಶಕ್ತಿಯನ್ನು ಹುಡುಕು. ಯಾವುದೇ ಗುಡಿಗುಂಡಾರದಲ್ಲಿ ಆಧ್ಯಾತ್ಮವನ್ನು ಹುಡುಕಬೇಡ ಎಂದು ಶಂಕರ ಭಗವತ್ಪಾದಾಚಾರ್ಯರು ಹೇಳಿದ್ದಾರೆ. ಅವರು ಶಿವೋsಹಂ ಎಂದರೆ ನಾನೇ ಶಿವ ಎಂದಿದ್ದಾರೆ. ಈಶ್ವರ ಪ್ರಣಿಧಾನಾತ್  ವಾ ಎಂದಿದ್ದಾರೆ ಪತಂಜಲಿ ಮಹರ್ಷಿಗಳು. ಮನುಷ್ಯಕೇಂದ್ರಿತ ಆಧ್ಯಾತ್ಮದ ಲಕ್ಷ್ಯವು ನಿಷ್ಕಳಂಕ ಪರಿಪೂರ್ಣತೆ ಹಾಗೂ ಮಾನವೀಯ ಅರಿವು ಪ್ರಜ್ಞೆಗಳ ಸುತ್ತವೇ ಕೇಂದ್ರೀಕೃತವಾಗಿದೆ.
ಕೆಲವು ವಿಚಾರವಂತರ ಮುಖ್ಯ ಸಂದೇಹದಂತೆ ತಾತ್ತ್ವಿಕತೆ, ಆಧ್ಯಾತ್ಮಿಕತೆ ಎಂಬುದು ಬರಿಯ ಶಬ್ದಜಾಲ, ಮೋಸದ ಮಾಯಾಜಾಲ.  ಈ ಪ್ರಶ್ನೆ ಭಗವದ್ಗೀತೆಯದೂ ಹೌದು. ಅಧ್ಯಾತ್ಮದ ಒಂದು ಪರಿಕಲ್ಪನೆ ಆತ್ಮ. ಆತ್ಮ ಎಂಬುದು ದೇಹದ ಸಂಗಡ ಇರುವಂತಹದು. ಆತ್ಮವನ್ನು ಗ್ರಹಿಸುವ ಇಚ್ಛೆಯುಳ್ಳವನು ದೇಹಭಾವ ಮತ್ತು ದೇಹಭಾವ ಪ್ರಕಟಿಸುವ ಪ್ರಾಪಂಚಿಕತೆ ಇವೆರಡನ್ನು ಕೈಬಿಟ್ಟು ಆತ್ಮದ ಬಗ್ಗೆ ಏನನ್ನೂ ಗ್ರಹಿಸಲಿಕ್ಕೇ ಸಾಧ್ಯವಿಲ್ಲ. ಗ್ರಹಿಸುವ ವಾಸ್ತವಿಕತೆಗೆ ಜೈವಿಕ, ಅಜೈವಿಕ ಇತ್ಯಾದಿ ದ್ವೈತಾತ್ಮಕ ಅಥವಾ ಬಹುತ್ವಸೂಚಕ ಸಂಜ್ಞೆಗಳಿಲ್ಲ; ಆದ್ದರಿಂದಲೇ ಇರುವುದೆಲ್ಲವನ್ನೂ ಅವು ಇರುವಂತೆ ಮೊದಲು ಸ್ವೀಕರಿಸು; ನಂತರ ಅದಕ್ಕೆ ಅನುಗುಣವಾಗಿ ಕೆಲಸ ಮಾಡು ಎನ್ನುವ ಸೂಚನಾತ್ಮಕ ಲಕ್ಷಣ ಮಾತ್ರ. ಇಂಥ ಆಧ್ಯಾತ್ಮಿಕತೆ ಅನುಭವಾತ್ಮಕವೇ ಆಗಿರುವಾಗ ಅದು ಹೇಗೆ ಬರಿಯ ಶಬ್ದಜಾಲ ಆದೀತು? ಮೋಸ ಮಾಡುವ ತಂತ್ರಗಾರಿಕೆ, ವ್ಯೂಹಜಾಲ ಹೇಗೆ ಆದೀತು ಎಂದು ಭಗವದ್ಗೀತೆ ಮರುಪ್ರಶ್ನಿಸುತ್ತದೆ. ಅಣು ತತ್ತ್ವವಾಗಿ ವ್ಯಕ್ತಿಯನ್ನು, ಬೃಹತ್ ತತ್ತ್ವವನ್ನಾಗಿ ವಿಶ್ವವನ್ನೊಳಗೊಂಡ ಬ್ರಹ್ಮಾಂಡವನ್ನು ಕಲ್ಪಿಸಿಕೊಳ್ಳದ ಹೊರತೂ ಯಾವುದೇ ಕಾರ್ಯಯೋಜನೆ ಅರ್ಥಪೂರ್ಣವಾಗದು ಎಂದು ವೈಜ್ಞಾನಿಕವಾಗಿ ಯೋಚಿಸುವವರೂ ತಿಳಿಯುತ್ತಿರುವ ಕಾಲವಿದು. ಹೀಗಿರುವಾಗ ದೇಹ-ಆತ್ಮಗಳುಳ್ಳ ವ್ಯಕ್ತಿ ಅಣುತತ್ತ್ವ, ಬ್ರಹ್ಮಾಂಡ ವಿಶ್ವವನ್ನೊಳಗೊಂಡ ಪರಮಾತ್ಮ ‘ಬೃಹತ್ ತತ್ತ್ವ’ ಎಂದು ವಾಸ್ತವಿಕತೆಯನ್ನು ಪರಿಕಲ್ಪಿಸುತ್ತಿರುವ ಅಧ್ಯಾತ್ಮವನ್ನು ಬರಿಯ ಶಬ್ದಜಾಲ, ಕುತಂತ್ರ-ಕುತರ್ಕಗಳ ವ್ಯೂಹ ಜಾಲ ಎಂದು ಹೇಗೆ ತಿರಸ್ಕರಿಸಲು ಸಾಧ್ಯ? ಎಂದು ಕೇಳುತ್ತದೆ.
ನಮಸ್ಕಾರ.
(ಇಲ್ಲಿ ನಾನು ಶ್ರೀ ಶಂಕರ ಭಗವತ್ಪಾದಾಚಾರ್ಯರ ಕೆಲ ವಿಚಾರಗಳನ್ನು ಉಲ್ಲೇಖಿಸಿದ್ದೇನೆ.)

Leave a Reply