ವೊ ದಿನ್ ಭೀ ಕ್ಯಾ ದಿನ್ ಥೆ

ವೊ ದಿನ್ ಭೀ ಕ್ಯಾ ದಿನ್ ಥೆ..
“ ನಾ ಇನ್ನ ಯಾವದೇ ಧಾರ್ಮಿಕ ಕಾರ್ಯ ಕ್ರಮ ಮಾಡಸ್ಲಿಕ್ಕೆ ಹೋಗಬಾರದಂತ ಮಾಡೇನಿ…. ಜನರೊಳಗ ಈಗ ಮೊದಲಿನ ಶೃದ್ಧಾ ಇಲ್ಲ. ಕಾಟಾಚಾರಕ್ಕೆ ಮಾಡಿ ಮುಗಸ್ತಾರ. ಮಾಡಬೇಕು ಅನ್ನೋಕಿಂತ ತೋಸ್ಗೋಬೇಕನ್ನೋದ ಭಾಳ ಇರ್ತದ…. ಧರ್ಮ, ನಂಬಿಕೆ ಜಗದಾಗ, ಬರೇ ಆಡಂಬರ ಇರ್ತದ. ಮಾಡಬೇಕದ್ದನ್ನು ಮೊಟಕ ಮಾಡಿ, ಬಿಡಬಹುದಾದ್ದರ ಮೆರವಣಿಗಿ ನಡೀತದ… ಮನಸ್ಸಿಗೆ ಭಾಳಾ ಬ್ಯಾಸರಾಗ್ತದ…. ಹೌದಪಾ ಸಂಸಾರದ …. ಖರ್ಚದ ಅನ್ನೋ ದರ್ದ ಅಂತೂ ಇಲ್ಲ… ಅದರ ಬದ್ಲು ಶೃದ್ಧಾದ್ಲೆ ಕಲೀತೀವಿ ಅನ್ನೋರ್ಗೆ ಪಾಠ ಮಾಡೋದು ಛೋಲೋ ಇಲ್ಲಾ ಅಂದ್ರ ನೆಮ್ಮದಿಯಿಂದ ನಮಗೇನ ಅದನ್ನ ಮಾಡ್ಕೊಂಡ ಇರಬಹುದು.”
ಶಾಂತಿ, ಸಹನೆ ಪುರುಷಾವತಾರ ಎಂಬಂತಿದ್ದ ಪುರೋಹಿತರೊಬ್ಬರ ನೋವಿನ ನುಡಿಗಳಿವು… ಧರ್ಮಕ್ಕಾಗಿಯೇ ಧರ್ಮದ ಪಾಲನೆ ಹಣಕ್ಕಲ್ಲ ಎಂದು ನಂಬಿ, ಅದನ್ನೇ ಬಹುಕಿ, ಅದನ್ನೇ ಹೇಳುತ್ತಾ, ದುಡ್ಡಿಗಾಗಿ ಎಂದೂ ಕೈಚಾಚದೇ, ಅಕಸ್ಮಾತ್ ಆಗ್ರಹದಿಂದ ಯಾರಾದರೂ ಕೊಟ್ಟರೆ ಕೆರೆಯ ನೀರು ಕೆರೆಗೆ ಎಂದಂದು ಧರ್ಮದ ಕಾರ್ಯಗಳಿಗೇನು ಅದನ್ನು ಬಳಸುತ್ತ ಇನ್ನೂ ಇಂಥವರು ಉಳಿದಿದ್ದಾರೆಯೇ ಎಂಬಂಥ ಅಚ್ಚರಿ ಹುಟ್ಟಿಸುತ್ತ, ಸಮಾಜ ತನಗೆ ಕೊಟ್ಟುದಕ್ಕೆ ಪ್ರತಿಯಾಗಿ ತನ್ನನ್ನೇ ಸಮಾಜಕ್ಕೆ ಕೊಟ್ಟು ಕೊಂಡಂಥ ಮಹನೀಯರ ಮನದಾಳದಮಾತುಗಳಿವು….
ನನಗೂ ಹಲವಾರು ಬಾರಿ ಈ ತರಹ ಅನಿಸಿದ್ದಿದೆ…. ಆತ್ಮೀಯರಾದ ಒಬ್ಬಬ್ಬರ ಮುಂದೆ ಗೊಣಗಿದ್ದು ಆಗಿದೆ…. ಎಲ್ಲದಕ್ಕೂ ಹೆಸರಿಡುವ ಸಿನಿಕರ ಗುಂಪಿಗೆ ನನ್ನನ್ನು ಸೇರಿಸಿಯಾರೆಂದು ದಬ್ಬಿ ಆ ಮಾತುಗಳನ್ನು
ಹೂತಾಗಿದೆ…. ಆದರೆ ಬಾಯಲ್ಲಿ ಹೇಳುವದಿಲ್ಲ ಅಂದ ಮಾತ್ರಕ್ಕೆ ಇಲ್ಲವೆಂದು ಹೇಗಾದೀತು?
ನನ್ನ, ನನ್ನ ಸಹೋದರ ಸಹೋದರಿಯರ ಮದುವೆಯ ಕಥೆ ಕೇಳಿದರೆ ಬಹುಶಃ ಹಳಬರಿಗೆ ಅಚ್ಚರಿಯಾಗಲಿಕ್ಕಿಲ್ಲ. ಆದರೆ ಮೊಮ್ಮಕ್ಕಳು ಅಡಗೊಲಜ್ಜಿ ಕಥೆಗಳು ಅಂದಾರು…. ಕೆಲವೇ ಸಾವಿರಗಳಲ್ಲಿ ಒಂದು ಗುಡಿಯ ಪ್ರಾಂಗಣದಲ್ಲಿ, ಇಡೀ ಊರಿನ ಜನ ನೆರೆದು ನೆರವೇರಿಸಿ ಕೊಟ್ಟ ಕಾರ್ರಕ್ರಮಗಳವು. ಮಂತ್ರ, ವೇದ ಘೋಷಗಳ ಆರ್ಭಟ ಊರನ್ನೇ ತುಂಬುತ್ತಿತ್ತು.
ಕಾರ್ಯಕ್ರಮದ ನಾಲ್ಕು ದಿನ ಹಳ್ಳಿಯ ಯಾರ ಮನೆಯಲ್ಲೂ ಅಡಿಗೆಯಿಲ್ಲ. ಯಾರಿಗೂ ಹಾಗೆ ಮಾಡಿ ಹೀಗೆ ಮಾಡಿ ನಿರ್ದೇಶನವಿಲ್ಲ. ಯಾರಿಗೆ ಏನು ಬರುತ್ತೋ, ಯಾರು ಯಾವ ಕೆಲಸದಲ್ಲಿ ನಿಪುಣರೋ ಅವರು ಯಾರಿಗೂ ಕಾಯದೇ ಕೆಲಸ ಮಾಡಿ ಮುಗಿಸುತ್ತಿದ್ದರು. ಎಂಟು, ಹತ್ತು ದಿನ ಮೊದಲೇ ಪ್ರತಿಯೊಬ್ಬರ ಮನೆಗೂ ಹೋಗಿ ಔತಣ ನೀಡುವುದಲ್ಲದೇ ಆದಿನ ಅಕಸ್ಮಾತ್ ಯಾರಾದರೂ ನೆಂಟರ ಆಗಮನವಾದರೆ ಅಗಾವಾಗಿ ಅವರನ್ನೂ ಸೇರಿಸಿ ಔತಣ ಕೊಟ್ಟು ಬರುತ್ತಿದ್ದುದೂ ಉಂಟು. ಯಾರ ಮನೆಯಲ್ಲಿ ಏನೇ ಆಗಲಿ ಅದು ಊರ ಜಾತ್ರೆಯಾಗಿಬಿಡುತ್ತಿತ್ತು. ಪ್ರತಿಯೊಬ್ಬರೂ ಮತ್ತೊಬ್ಬರಿಗೆ ತೋರಿಸುವ ಪರಸ್ಪರ ಕಾಳಜಿಯಿಂದ ಯಜಮಾನನ ಹೊರೆ ತಂತಾನೇ ತೂಕ ಕಳೆದುಕೊಳ್ಳುತ್ತಿತ್ತು. ಎಲ್ಲರೂ ಖುಶ್. ಹೀಗಾಗಿ ಎಷ್ಟೋ ವರ್ಷಗಳ ನಂತರವೂ ನೆನಪುಗಳ ಖಜಾನೆ ತುಂಬಿರುತ್ತಿತ್ತಲ್ಲದೇ ಕಿರಿಯರೆದುರು, ಬಂಧು ಬಳಗದೆದುರು ಸಮಯ ಸಿಕ್ಕಾಗ ಮೆದ್ದು ಸವಿಯಬಹುದಾದ ಮೇಜವಾನಿ ಊಟ ಉಂಡ ತೃಪ್ತಿ ಸಿಗುತ್ತಿತ್ತು.
ಈಗ ಎಲ್ಲವೂ ತದ್ವಿರುದ್ಧ… ಸ್ವತಃ ಮನೆಯವರಿಗೇನೇ ಯಾವುದೇ ಕಾರ್ಯಕ್ರಮಗಳಲ್ಲಿ ಕೆಲಸವಿರುವುದಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಒಂದು ಆಮಂತ್ರಣ/ ವಿಜ್ಞಾಪನೆ, ಒಂದೆರಡು ಫೋನ್ ಕರೆಗಳು, event managers ಗಳಿಗೆ ಕೆಲಸದ ಆಧಾರದ ಮೇಲೆ ಹಣ ಸಂದಾಯ ಮಾಡಿಬಿಟ್ಟರೆ ಮುಗಿಯಿತು. ನೀವೂ host ಗಳ ಬದಲು guest ಗಳೇ ಆಗಿಬಿಡಬಹುದು. ಸಧ್ಯದ ಜೀವನ ಶೈಲಿ, ಕೆಲಸದ ಒತ್ತಡ, ಕೈತುಂಬಿ, ಕಿಸೆದುಂಬಿ ಬರುವ ಧಾರಾಳ ಹಣ, ಇವುಗಳಿಂದಾಗಿ ಸಂಬಂಧಿಸಿದವರ ಜವಾಬ್ದಾರಿಯನ್ನೂ ಹಲವರ ಹೆಗಲಿಗೇರಿಸಿ ಹಗುರವಾಗಿ ಬಿಡುವದು ಇಂದಿನವರ ಆಯ್ಕೆಯಾಗಿ, ಎಲ್ಲವೂ ಇದೆ. ಯಾರದೂ ಅಲ್ಲ ಎಂಬಂತಾಗಿದೆ. ಹಿಂದೆಲ್ಲ ಉಡುಗೊರೆಯಾಗಿ ಬರುತ್ತಿದ್ದ ಅಷ್ಟಿಷ್ಟು ಹಣವೋ, ಸಾಮಾನೋ ಆನಂದ ತರುತ್ತಿದ್ದವು. ಈಗ ನಾವು ಕೊಟ್ಟದ್ದೇ ಅನೇಕ ಬಾರಿ ನಮಗೇ ಮರಳಿ ಬರುವಷ್ಟು ಅನಾದರ ಕೊಳಪಟ್ಟಿವೆ ಉಡುಗೊರೆಗಳು…
ಎಲ್ಲದರ ಬಳಿಯೂ ಎಲ್ಲವೂ ಇದ್ದ ದ್ದು ಒಂದು ಕಾರಣವಾದರೆ ಯಾವುದಕ್ಕೂ ಬೆಲೆಯಿಲ್ಲದಿರುವುದು ಇನ್ನೊಂದು ಕಾರಣ. ಬದಲಾದ ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುವುದು ಸ್ವಾಭಾವಿಕ… ಸಮಯ ಹರಿಯುವ ನೀರು ಇದ್ದಂತೆ… ಅದಕ್ಕೆ ಮುಂದೆ ಹರಿಯುವದಷ್ಟೇ ಗೊತ್ತು. ತನ್ನ ಜೊತೆ ಸಿಕ್ಕಿದ್ದೆಲ್ಲವನ್ನೂ ಮುಂದೆ ದಾಟಿಸಿ ಬಿಡುವುದು ಗೊತ್ತು . ತನ್ನ ಜೊತೆ ಸಿಕ್ಕಿದ್ದೆಲ್ಲವನ್ನೂ ಮುಂದೆ ದಾಟಿಸಿ ಬಿಡುವದು ಗೊತ್ತು. ಅವುಗಳಲ್ಲಿ ಅವಿಭಕ್ತ ಕುಟುಂಬಗಳು ಒಡೆದು ಸಣ್ಣ ಸಣ್ಣ ಘಟಕಗಳಾಗಿ ದೂರ ದೂರ ಇರತೊಡಗಿದ ಮೇಲೆ ಅವರ ಮಧ್ಯೆ ಕಂಡೂ ಕಾಣದ ಗೋಡೆಗಳು ಎದ್ದು ಕುಟುಂಬ ವ್ಯವಸ್ಥೆಯ ಬುಡವನ್ನೇ ಅಲುಗಿಸತೊಡಗಿದ್ದೂ ಒಂದು. ಹೀಗಾಗಿ ಭದ್ರ ಅಡಿಪಾಯವಿಲ್ಲದ ಇಂದಿನ ಕಟ್ಟಡಗಳಂತೆ ಸಂಬಂಧಗಳೂ ಸಹ ಕಟ್ಟುವ ಹಂತದಲ್ಲಿಯೇ ಕುಸಿಯತೊಡಗಿವೆ.
ಪರಸ್ಪರ ಪ್ರೀತಿ, ವಿಶ್ವಾಸ, ಅಭಿಮಾನದ ಜಾಗದಲ್ಲಿ ಅನಾರೋಗ್ಯಕರ ಸ್ಫರ್ಧೆ, ಅಸೂಯೆ, ಅಸಹನೆಗಳಿಂದ ಯಾರಿಗೂ ಸಮಾಧಾನವಿಲ್ಲದ ವಾತಾವರಣ ಉಂಟಾಗಿದೆ. ಏನೋ ಚಡಪಡಿಕೆ, ಅದಾವದೋ ಉದ್ವೇಗ, ಅವಸರಗಳಿಂದಾಗಿ ಮಾತು, ಕೃತಿ, ಎಲ್ಲವುಗಳಲ್ಲೂ ಒಂದು ಕೃತ್ರಿಮತೆ ಎದ್ದು ಕಾಣುತ್ತದೆ.
ಅಪರಿಚಿತ ಭಾವ ಮೂಡಿ ಯಾವದೂ ನಮ್ಮದಲ್ಲ ಅನಿಸುವ ಅನ್ಯ ಭಾವ ಮೂಡಿದಾಗ ಪರಿಣಾಮ ಅತಿ ಸ್ಪಷ್ಟ, ಶುಷ್ಕತೆ, ಒಣ ಬಡಿವಾರ, ಆತ್ಮೀಯವೆನಿಸದ ತೋರಿಕೆಯ ಛಾಪು ನಮ್ಮ ನಡೆ ನುಡಿಗಳಲ್ಲಲ್ಲದೇ ಎಲ್ಲಿ ಕಾಣ ಸಿಗಬೇಕು ಹೇಳಿ?

 

Leave a Reply