ಯಾದ್ ವಶೇಮ್, ಆಶ್ವಿಚ್…
ಅಲ್ಲೇ ಎಲ್ಲೋ ನಿಂತಿದ್ದಂತಿದ್ದಳು “ಯಾದ್ ವಶೇಮ್” ಕಾದಂಬರಿಯ ನಾಯಕಿ, ಜಗತ್ತಿನ ಸಮಸ್ತ ಯಹೂದಿಗಳ ನೋವನ್ನು ಪ್ರತಿನಿಧಿಸುವ ಹ್ಯಾನಾ…
”ನೋಡಿ ಜಗತ್ತಿನ ಉದ್ದಗಲಕ್ಕೂ ಮಸಣದಲ್ಲಿ ಜಾಗದ ಪಾಲು ಪಡೆದಿರುವ ನನ್ನವರನ್ನು ನೋಡಿ” ಅನ್ನುತ್ತ ಮಾರಣಹೋಮದಲ್ಲಿ ಮಡಿದು ಸಾಲುಗಟ್ಟಿ ಮಲಗಿದ ಲಕ್ಷ ಲಕ್ಷ ಜೀವಸಮಾಧಿಯ ನೆಲದ ಹಾಡನ್ನು ಹಾಡುತ್ತಿದ್ದಳು. ತಮ್ಮ ಪಿತೃ ಭೂಮಿ ಅಂದು ಸಾಕ್ಷಿಯಾಗಿದ್ದ ಅಮಾನುಷ ಜೀವಹಿಂಸೆಯನ್ನು ಸ್ಮರಿಸಿ ಆ ಜೀವಗಳಿಗೆ ತಮ್ಮದೊಂದಿಷ್ಟು ಅಶ್ರುತರ್ಪಣ ನೀಡುವಂತೆ ನಿರ್ಮಿಸಿದ ಜಾಗವೇ ಬರ್ಲಿನ್ನಿನ ‘ಬ್ರಾಂಡೆನ್ ಬರ್ಗ್ ಗೇಟ್’ ಬಳಿ ಕಟ್ಟಿರುವ ಸಾವಿರಾರು ಗೋರಿಗಳ ಪ್ರತಿರೂಪಗಳು.
ನಾಲ್ಕು ವರ್ಷಗಳ ಹಿಂದೆ ‘ಮೆಮೋರಿಯಲ್ ಆಫ್ ಹಾಲೋಕಾಸ್ಟ್ ‘ ನಲ್ಲಿ, ತದನಂತರ ಪೋಲೆಂಡಿನ ‘ಆಶ್ವಿಚ್’ ನ ಹೆಣಸುಡುವ ಆ ನರಕದ ಗೂಡುಗಳ, ಕಾನ್ಸಂಟ್ರೇಶನ್ ಕ್ಯಾಂಪ್ ಗಳಿಗೆ ನನ್ನ ಹೊಡೆದುಕೊಳ್ಳುವ ಎದೆಯೊಂದಿಗೆ ಹೋಗಿ ನಿಂತಿದ್ದ ನನಗೆ ಅಲ್ಲಿ ನೇಮಿಚಂದ್ರರ ಕಾದಂಬರಿಯ ನಾಯಕಿ ಹ್ಯಾನಾಳನ್ನೇ ಕಂಡಂತೆ ಭಾಸವಾಯಿತು! ಅದರಲ್ಲೂ ಆಶ್ವಿಚ್ ಅತ್ಯಧಿಕ ಹಿಂಸೆ ನಡೆಸಿ ಯಹೂದಿಗಳನ್ನು ಕೊಂದ ಮಾರಣಹೋಮ ಕೇಂದ್ರ. ಅಲ್ಲಿಗೆ ಭೇಟಿಕೊಟ್ಟು ಬಂದ ದಿನ ನಾನು ನಿದ್ದೆಯೇ ಇಲ್ಲದೆ ಒದ್ದಾಡಿದ್ದೆ.
ಹ್ಯಾನಾಳೇ ಅಂದಿನ ಆ ದಿನಗಳತ್ತ ಬೆರಳಿಟ್ಟು ಕ್ರೌರ್ಯ, ಅಮಾನುಷತೆಗಳ ರಕ್ತಸಿಕ್ತ ಮಣ್ಣಿನೊಳಗಿಂದ ಹೇಗೋ ಪಾರಾಗಿ ತಾನು ದಿಕ್ಕೆಟ್ಟು ಕೈ ಚಾಚಿ, ಧಾವಿಸಿ ಬಂದಾಗ ಭಾರತ ತನ್ನ ತಲೆ ನೇವರಿಸಿ ಮಡಿಲೊಳಗಿಟ್ಟುಕೊಂಡು ಶಾಂತಿಮಂತ್ರವನ್ನುಸುರಿ ಕಾಯ್ದ ಕತೆಯನ್ನು ನನಗೆ ಹೇಳಿದಂತೆನಿಸಿತು.
ಪೃಥ್ವಿಯಲ್ಲಿ ಮನುಷ್ಯಕುಲ ಆರಂಭವಾದಂದಿನಿಂದಲೂ ಇನ್ನೊಬ್ಬರ ಮೇಲೆ ತಾನಾಗಿಯೇ ಯುದ್ಧಕ್ಕಿಳಿಯದ, ಪರರ ನೆಲವನ್ನು ಎಂದೂ ಆಕ್ರಮಿಸದ ಭಾರತದ ಬಗ್ಗೆ ಹೆಚ್ಚಿರುವ ತನ್ನ ಜನರ ಒಲವನ್ನು ಹನಿಗಣ್ಣಾಗಿ ನನ್ನೆದುರು ಹೇಳಿದಂತಿತ್ತು ಹ್ಯಾನಾ. ಪ್ರೀತಿ ಪ್ರೀತಿಯನ್ನೇ ಬಯಸುತ್ತದೆಯಲ್ಲವೇ?
ಇಸ್ರೇಲಿಗಳು ನಮ್ಮ ಭಾರತದ ಗೆಳೆತನಕ್ಕಾಗಿ ಕಾತರಿಸಿ ಕಾದು ಬಯಸಿ ಇದೀಗ ಸಾಕಾರಗೊಳ್ಳುತ್ತಿರುವ ಸುಂದರ ಭವಿಷ್ಯ ಹಿಂಬಾಲಿಸಿ ಬಂದಿದೆ ಹ್ಯಾನಾಳ ಈ ಕತೆಯನ್ನು.
“ಹ್ಯಾನಾ ಯಾನೆ ಅನಿತಾ- ವಿವೇಕ್, ಅಮ್ಮ, ಈ ಮೂರು ಕಂಬಗಳ ಜೊತೆಯಲ್ಲೇ ಸುತ್ತಿಕೊಳ್ಳುವ ‘ಯಾದ್ ವಶೇಮ್’ ನ ಮೂಲಧಾರೆ ಮುಖ್ಯವಾಗಿ ಮಾನವೀಯತೆಯನ್ನು ಎತ್ತಿ ಹಿಡಿದು ‘ಬದುಕಿ ಮತ್ತು ಬದುಕಲು ಬಿಡಿ’ ಮಂತ್ರವನ್ನು ಉಚ್ಚರಿಸುತ್ತದೆ. ಅಸಂಖ್ಯ ಘಟನೆಗಳು, ಅಮಾನುಷತೆ ಜರುಗಿ ಹೋದ ಸ್ಥಳಗಳನ್ನು ಅರಸುತ್ತ ತನ್ನವರಲ್ಲಿ ಯಾರಾದರೂ ಇನ್ನೂ ಜೀವ ಹಿಡಿದುಕೊಂಡಿರುವ ಸಾಧ್ಯತೆಯನ್ನೇ, ಅಥವಾ ಆ ಅನಿಸಿಕೆಯನ್ನೇ ಆಧಾರವಾಗಿಟ್ಟುಕೊಂಡು ಕತ್ತಲಲ್ಲಿ ಕಾಡಿಗೆಯನ್ನರಸಿ ತಡಕಾಡಿದಂತೆ ಹೆಜ್ಜೆಗಳಿಡುವಾಗ ಬಾಲ್ಯದಿಂದಲೇ ಅವಳನ್ನು ತನ್ನಲ್ಲಿ ಇಳಿಸಿಕೊಂಡಿದ್ದ
ಭಾರತ, ಬೆಂಗಳೂರು ಮತ್ತು ವಿವೇಕ್ ಅವಳ ನೋವನ್ನುಅರ್ಥ ಮಾಡಕೊಂಡ ಬಗೆ ಕಾದಂಬರಿಯುದ್ದಕ್ಕೂ ಪರರ ನೋವಿಗೆ ಮಿಡಿಯುವ ನಮ್ಮವರ ಗುಣಕ್ಕೆ ಭಾಷ್ಯ ಬರೆಯುತ್ತದೆ.
ಒಂದೊಂದೇ ಎಳೆ ಬಿಚ್ಚಿಕೊಳ್ಳುತ್ತ, ನಾಝಿ ಕಾನ್ಸನ್ಟ್ರೇಶನ್ ಕ್ಯಾಂಪ್ ಗಳ ದರ್ಶನದಲ್ಲಿ ಅವಳ ಆತ್ಮವೇ ಕುಸಿದು ಹೋಗುತ್ತ, ಯಾರ್ಯಾರೋ ಹೇಳಿದ ತುಂಡು ತುಂಡು ಮಾಹಿತಿಗಳ ಸುರುಳಿಯೊಳಗೆ ಸುತ್ತಿಳಿದು ಕೊನೆಗೂ ಕೈಗೆ ದಕ್ಕಿದ ಇದ್ದೊಬ್ಬ ಅಕ್ಕನ ಜೀವ ಅನುಭವಿಸಿದ ನಾಝಿ ಕ್ಯಾಂಪಿನ ದಾರುಣ ಬರ್ಬರತೆಗೆ ಇನ್ನಷ್ಟು ಘಾಸಿಗೊಂಡವಳು ಹ್ಯಾನಾ.
ಕ್ರಿಸ್ತನನ್ನು ಕೊಂದ ಜನಾಂಗದ ಒಬ್ಬನೇ ಒಬ್ಬ ಯಹೂದಿಯೂ ಭೂಮಿಯ ಮೇಲೆ ಬದುಕಬಾರದು, ಎಲ್ಲರೂ ಸಾಯಬೇಕೆನ್ನುವ ಹುಚ್ಚು ಹಠ ತುಂಬಿಕೊಂಡ ಹಿಟ್ಲರ್ ತನ್ನ ಆರ್ಯನ್ ಜನಾಂಗದ ಶ್ರೇಷ್ಠತ್ವದ ಬಗ್ಗೆ ಅತಿಯಾದ ವ್ಯಾಮೋಹಿ. ಆರ್ಯನ್ನರಿಗೆ ಮಾತ್ರ ಭೂಮಿಯಲ್ಲಿ ಬದುಕುವ ಹಕ್ಕು, ಅರ್ಹತೆಗಳಿದ್ದು ಪಾಪಿ ಯಹೂದ್ಯರು ಭೂಮಿಗೆ ಭಾರವಾದವರು ಆದ್ದರಿಂದ ಅವರಿಗೆ ತಾನು ನೀಡುವ ಮರಣದಂಡನೆ ಸೂಕ್ತ ಎಂಬುದವನ ಗಾಢ ನಂಬಿಕೆ..
ಮೊಲೆ ಉಣ್ಣುವ ಹಸುಗೂಸುಗಳನ್ನೂ ವಿಷಾನಿಲ ಬಿಟ್ಟು ಸಾಯಿಸಿದ ಕ್ರೌರ್ಯದ ಮುಂದೆ ಮಾತಿಲ್ಲದೆ ಸಾವೇ ಬೇಕೆಂದು ಯಹೂದಿ ಗುಲಾಮರು ಸಾವಿನ ಮುಕ್ತಿ ದೊರಕಲಿ ಎಂದು ಹಂಬಲಿಸುವಷ್ಟರ ಮಟ್ಟಿಗಿನ ಹಿಂಸೆ ನಡೆಸಿದ ನಾಜಿಗಳೇ ನೀವು ರಾಕ್ಷಸತ್ವದ ಸಂಕೇತವೇ ಅಂದು ಮರುಗಿದವಳು ಹ್ಯಾನಾ.
ಪ್ಯಾಲೆಸ್ಟೈನ್, ಗಾಜಾ ಪಟ್ಟಿ, ಅರಬ್ಬರು, ಇಸ್ರೇಲಿಗಳ ನಿರಂತರ ರಕ್ತಪಾತದ ಹೊಸ ಇತಿಹಾಸ ರಚನೆ ಆಗುತ್ತಿರುವುದರ ಬಗ್ಗೆ ಕಣ್ಣೀರು ತುಂಬಿದವಳು.. ‘ನಿಲ್ಲಬಾರದೇ ಈ ಹಿಂಸೆ, ರಕ್ತಪಾತ.. ಒಂದಿಷ್ಟು ನೆಲ ಅದೂ ಕೊನೆಗೊಂದು ದಿನ ಇಲ್ಲೇ ಬಿಟ್ಟು ಹೋಗಬೇಕಾಗಿರುವ ನೆಲದ ತುಂಡಿಗಾಗಿ ಏನೆಂಥ ಹಿಂಸೆಯ ತಾಂಡವಗಳಿವು?’ ಅನ್ನುತ್ತ ಶಾಂತಿಗಾಗಿ ತಹತಹಿಸುವ ಹ್ಯಾನಾಳ ಜೊತೆಯಲ್ಲೇ ನಾವೂ ಚಡಪಡಿಸುತ್ತ ಹೊರಟಿರುವ ಭಾವನೆ.. ದಿಕ್ಕುದೆಸೆಯ ಅನಿಶ್ಚಿತತೆಯಲ್ಲಿ ತೊಳಲಾಡಿದ ಹ್ಯಾನಾಳನ್ನು ಮಡಿಲಲ್ಲಿ ಇರಿಸಿಕೊಂಡು ಮನೆಯ ಸೊಸೆಯಾಗಿಸಿ ಮಗನನ್ನೇ ಅವಳಿಗೆ ಕೊಟ್ಟು ಕಾಪಾಡಿದ್ದು ಭಾರತದ, ಬೆಂಗಳೂರಿನ ಕುಟುಂಬ. ಅವಳ ಜೀವಮಾನದ ಕನಸನ್ನು ನನಸುಗೊಳಿಸಿದ್ದು ವಿವೇಕನ ಪ್ರೀತಿ!
ಕಾದಂಬರಿ ಓದಿ ಕೆಳಗಿಡುವಾಗ ನಮ್ಮ ಜೀವ ಕುಸಿದು ಹೋದಂತೆ ಭಾಸವಾಗುತ್ತದೆ.
ಜರ್ಮನಿಯ ‘ಹೋಲೋಕಾಸ್ಟ್ ಮೆಮೋರಿಯಲ್’ ಎಂಬ ಸಾಮೂಹಿಕ ಸ್ಮಾರಕಗಳೊಳಗೆ ಜರ್ಮನಿಯಲ್ಲಿ ಮತ್ತದರ ಆಸುಪಾಸಿನ ದೇಶಗಳಲ್ಲಿ ಬಲಿಯಾದ ಲಕ್ಷಾಂತರ ಯಹೂದಿಗಳ ಅವಶೇಷಗಳಿಲ್ಲ. ಅವೆಲ್ಲ ಜಗತ್ತಿನ ಉದ್ದಗಲಕ್ಕೂ ಹಂಚಿಹೋಗಿ ಮಲಗಿವೆ. ಅಥವಾ ಹಿಟ್ಲರ್ ಕಟ್ಟಿದ- ಆಶ್ವಿಚ್ ನ ಹೆಣ ಸುಡುವ ಕಬ್ಬಿಣದ ಕುಲುಮೆಗಳೊಳಗೆ ಭಸ್ಮವಾಗಿವೆ. ಈ ಗೋರಿಗಳ ಒಳಗಿಲ್ಲ ಅಂದು ಉಸಿರುಗಟ್ಟಿ ಕುಸಿದ ಜೀವಗಳ ಅವಶೇಷಗಳು. ಇವೆಲ್ಲ ಕೇವಲ ನೆನಪಿನ ಅವತರಣಿಕೆಗಳಷ್ಟೇ.
ಇವೆಲ್ಲವೂ 1933 ಯಿಂದ 1945 ವರೆಗೆ ಜರ್ಮನ್ ಯಹೂದ್ಯರು ಅನುಭವಿಸಿದ ಅಮಾನುಷ ಕರಾಳತೆಯ ಸೂಚಕ ಅಷ್ಟೇ. ಮಾನಸಿಕವಾಗಿ ಮರಣಿಸಿದ ಹ್ಯಾನಾಳಂಥ ಲಕ್ಷಾವಧಿ ಯಹೂದಿಗಳು ತಮ್ಮವರ ಉಸಿರು ನಿಂತ ದುರುಳಸಂಕೇತಗಳ ಚಿಹ್ನೆಗಳನ್ನು ಮರೆಯಲೆತ್ನಿಸುವ ಪ್ರಸ್ಥಭೂಮಿ ಇದೇ.
ಯಹೂದಿ ಜನಾಂಗದ ಆರಂಭದ ಮೂಲಸೆಲೆಯಾದ ಅಬ್ರಹಾಂ, ಅಲ್ಲಿಂದ ಟಿಸಿಲೊಡೆದ ಮೂರು ಕವಲುಗಳಲ್ಲಿ ಕ್ರಿಶ್ಚಿಯನ್, ಇಸ್ಲಾಮಿಕ್ ಸಂಪ್ರದಾಯಗಳ ಜೊತೆಯಲ್ಲಿಯೇ ಹುಟ್ಟಿದ ಕವಲು ಜುಡಾಯಿಸಮ್. ಅವರೇ ಯಹೂದ್ಯರು. ಇತಿಹಾಸ ಹೇಳುವಂತೆ ಕ್ರಿಸ್ತನನ್ನು ಕೊಂದವರು ಎಂಬ ಹಣೆಪಟ್ಟಿಯನ್ನು ಬಡಿಸಿಕೊಂಡವರು, ಅದೇ ಕಾರಣ ಕೊಡುವುದಲ್ಲದೆ, ಜೊತೆಗೆ ಇನ್ನಷ್ಟು ಕ್ಷುಲ್ಲಕ ನೆಪಗಳನ್ನು ಮುಂದೊಡ್ಡಿ ಇವರನ್ನು ಹಿಂಸಿಸಿದ ಕ್ರಿಶ್ಚಿಯನ್ನರ ಮತ್ತು ಮುಂದೆ ಹಿಟ್ಲರ್ ನ ಆಕ್ರೋಶಕ್ಕೆ ಬಲಿಯಾದವರು. ಆಕ್ರಾಮಕ ಗುಣದವರಲ್ಲ ಇವರು. ವ್ಯಾಪಾರೋದ್ಯಮ ಇವರ ರಕ್ತದ ಸೆಲೆ, ಮೂಲಗುಣ. ಲಾಭ ಬದುಕಿನ ಉದ್ದೇಶ. ತಪ್ಪೇ? ಆದರೂ ಮೊದಲ ವಿಶ್ವಯುದ್ಧದಲ್ಲಿ ಮುಖ್ಯ ದಾಳಿಕೋರನಾಗಿ ವಿಜೃಂಭಿಸಿದ ಯುರೋಪನ್ನು ನಡುಗಿಸಿದ ಜರ್ಮನಿ ತನ್ನನ್ನೇ ವಿಲನ್ ಆಗಿಸಿಕೊಂಡ ಇತಿಹಾಸದ ದಾಖಲೆಗಳು, ಅದರ ಪೂರ್ವಾಪರವಾಗಿ ಜರ್ಮನಿಯನ್ನು ಶಿಕ್ಷಿಸುವಲ್ಲಿ ನಾ ಮುಂದೆ, ನೀ ಮುಂದೆ ಅಂತ ಹಲವು ದೇಶಗಳು ಬಂದಿದ್ದು ಸುಳ್ಳಲ್ಲ. ಉಸಿರುಗಟ್ಟಿಸುವಷ್ಟು ಪ್ರಮಾಣದ ಕಡ್ಡಾಯ, ಪ್ರತಿಬಂಧ, ದಂಡಗಳ ರಾಜಕೀಯ ಶಿಕ್ಷೆಯನ್ನು ಜಗತ್ತು ಜರ್ಮನಿಯ ತಲೆಯ ಮೇಲೆ ಹೇರಿದಾಗ ಹುಟ್ಟಿ ಬಂದವನೇ ಹಿಟ್ಲರ್! ಅವನು ನಡೆಸಿದ ಕೃತ್ಯಗಳಿಗಾಗಿ ಅವನನ್ನು ಕೇವಲ ನರರಾಕ್ಷಸ ಅಂದರೆ ಏನೂ ಹೇಳಿದಂತಾಗುವುದಿಲ್ಲ…ಅಷ್ಟೇ. ಇವನ ಜೊತೆ ಇಂಥ ನರಮೇಧದಲ್ಲಿ ಕೈ ಜೋಡಿಸಿ ಸಹಕರಿಸಿದ ದೇಶಗಳ ಪಾಲೂ ಇದರಲ್ಲಿ ಇದೆ.ಆಸ್ಟ್ರಿಯಾ, ಹಂಗರಿ, ಜಪಾನ್ ಸಹ ಒಂದರ್ಥದಲ್ಲಿ ವಿಶ್ವಯುದ್ಧ ಭಯಾನಕವಾಗಿ ಕೆರಳಲು ಕಾರಣ.
ನಾನು ಕಾಲೇಜಿನಲ್ಲಿದ್ದ ಸಮಯ, ಹಾಗೆ ಆ ಸಮಯದಲ್ಲಿ ನಮ್ಮೆಲ್ಲ ಇತಿಹಾಸದ ಓದಿನಲ್ಲಿ ಹಿಟ್ಲರ್ ಬಗೆಗಿನ ಸಂಗತಿ ಒಂದು ಅಧ್ಯಾಯವಾದರೂ ಒಂದಿಲ್ಲೊಂದು ಬಗೆ ಕಥಾನಕವಾಗಿ ನಮ್ಮ ಓದು, ಕಿವಿ, ಮನಸ್ಸನ್ನು ಹೊಕ್ಕು ನಿರಂತರ ಗುಂಗೀಹುಳವಾಗಿ ಕಾಡಿದ್ದು ಮರೆಯಲಸದಳ. ಹಿಟ್ಲರ್ ಬಗ್ಗೆ ಅಸಂಖ್ಯಾತ ಡಾಕ್ಯುಮೆಂಟರಿ, ಸಿನಿಮಾ, ಪುಸ್ತಕ, ಪೇಪರುಗಳ ಭರಭರಾಟೆ. ಎರಡನೆಯ ವಿಶ್ವಯುದ್ಧದ ಭಿನ್ನ ಭೀಕರ ಸುದ್ದಿಗಳ ಮಹಾಪೂರ ಯುದ್ಧಸ್ಯ ವಾರ್ತಾ ರಮ್ಯಾ: ಅನ್ನುತ್ತಾರೆ. ಯಾರು ಯಾರನ್ನು ಹೇಗೆ ಸದೆಬಡಿದರು.ಯಾರು ಸೋತು ಶರಣಾದರು,ಯಾವ ದೇಶ ಎಷ್ಟು ಬಾಂಬ್ ಹೊಡೆಯಿತು…ಯಾವ ಸರ್ವಾಧಿಕಾರಿಯ ತಲೆ ಉರುಳಿತು!ಹೀಗೆ ಇಂಥ ರಕ್ತಸಿಕ್ತ ಯೂರೋಪಿನ ನಡುವಿಂದೆದ್ದು ಬರುತ್ತಿದ್ದುವು. ಹಿಟ್ಲರ್ ಜರ್ಮನಿಯನ್ನು ಕಪಿಮುಷ್ಟಿಯಲ್ಲಿ ಹಿಡಿದಾಳಿದ್ದು ,ಅವನ ಯಹೂದಿಗಳ ಮೇಲಿನ ದ್ವೇಷ, ಅಸಮರ್ಥನೀಯ ನೆಪಗಳಿಂದ ಅರವತ್ತು ಲಕ್ಷ ಯಹೂದಿಗಳ ಮಾರಣಹೋಮ…ಅದನ್ನು ಮಾತ್ರ ಜಗತ್ತು ಕ್ಷಮಿಸದೆ ಹೋಯಿತು.
ಇದನ್ನೆಲ್ಲ ಮರೆಯಬಯಸುತ್ತಾರೆ ಇಂದಿನ ಜರ್ಮನ್ನರು. ಕರಾಳ ನೆನಪು ರಸ್ತೆ ರಸ್ತೆಗಳಲ್ಲಿ ಮರಗಳಿಗೆ ನೇಣು ಕಟ್ಟಿದ ಸಾಲು ಸಾಲು ಜ್ಯೂವಿಶ್ ಜನರ ಕಳೇಬರಗಳನ್ನು ಮರೆಯಬಯಸುತ್ತಾರೆ. ಕಾನ್ಸಂಟ್ರೇಶನ್ ಕ್ಯಾಂಪ್ ಗಳೆಂಬ ಹಂದಿಗೂಡುಗಳಲ್ಲಿ ಕೂಡಿ ಹಾಕಿ ವಿಷಾನಿಲ ಬಿಟ್ಟು ಸಾಯಿಸಿದ ಲಕ್ಷ ಲಕ್ಷ ಜನರ ಮೃತ ದೇಹಗಳ ದಾರುಣ ಚಿತ್ರಗಳನ್ನು ಮರೆಯಬಯಸುತ್ತಾರೆ.
ನಾನು ಹಲವಾರು ಜರ್ಮನ್ನರನ್ನು ಮುಖತಃ: ಭೇಟಿಯಾಗಿದ್ದೆ. ಹಿಟ್ಲರ್ ಅಂದೊಡನೆ ಬಾಡಿ ಕಿರಿದಾಗುವ ಅವರ ಮುಖಗಳಲ್ಲಿನ ವೇದನೆ ಅರ್ಥವಾಗುವಂಥದ್ದೇ, ಹೌದು. ಹಿಟ್ಲರ್ ಗತಿಸಿದ ನಂತರ ಜಗತ್ತು ಅವನ ಕರಾಳತೆಯನ್ನು ಎಲ್ಲರೆದುರು ತೆರೆತೆರೆದು ಬಿಚ್ಚಿ ಹರವುತ್ತಿದ್ದಂತೆ ಅಪರಾಧೀ ಪ್ರಜ್ಞೆ ಅವರನ್ನು ಕಾಡಿತು..ಯಾರೋ ಮಾಡಿದ ಪಾಪಕ್ಕೆ ಯಾರೋ ಉತ್ತರಹೇಳುವ ನತದ್ರಷ್ಟರಾಗುವಂತೆ ಜರ್ಮನ್ ಜನ ಅನೇಕ ವರ್ಷಗಳ ವರೆಗೆ ಅಪರಾಧೀ ಪ್ರಜ್ಞೆಯಿಂದ ನರಳಿದರು.
ಪೂರ್ವ ಮತ್ತು ಪಶ್ಚಿಮ ಬರ್ಲಿನ ನಡುವೆ ಎದ್ದಿದ್ದ ಮುಂದೆ ಬೀಳಿಸಲ್ಪಟ್ಟ ಬರ್ಲಿನ್ ವಾಲ್ ಸಹ ತನ್ನಲ್ಲಿ ಅಸಂಖ್ಯ ಕತೆಗಳನ್ನು ಹೊತ್ತು ನಿಂತಿದೆ. ಅದನ್ನು ನೋಡಿದಾಗ ತನ್ನ ಒಡಲಿನ ಕತೆಗಳನ್ನೇ ನನಗೆ ಅದು ಉಸುರಿದ ಹಾಗೆ ಭಾಸವಾಗಿತ್ತು.
ನಾಜಿಗಳ ಕೈಯಲ್ಲಿ ಚಿಂದಿ ಚೂರಾದ ಜ್ಯುಯಿಷ್ ಸೈನಗಾಗ್ ಗಳು ಇಂದಿಗೂ ತಗ್ಗಿದ ಉಸಿರಿನಲ್ಲಿ ತಮ್ಮ ಇತಿಹಾಸದ ವೃಣಗಳನ್ನು ತೆರೆದಿಟ್ಟು ನೆಕ್ಕಿಕೊಳ್ಳುತ್ತ ನೋವಿನ ನೆರಳಿನಿಂದ ಹೊರಬಾರದೆ ಖಿನ್ನವಾಗಿವೆ. ಜಗತ್ತಿನಾದ್ಯಂತ ಚದುರಿ ಹೋಗಿರುವ ಆ ಕಾಲದ ಯಹೂದ್ಯರ ಮುಂದಿನ ಸಂತಾನ ತಮ್ಮ ಪೂರ್ವಜರ ಕಣ್ಣೀರಿನ ಕತೆಯ ಹಿಂದಿನ ಕಾರಣಗಳನ್ನರಿಯದೆ ತಬ್ಬಿಬ್ಬಾಗಿವೆ..ಹೆಚ್ಚು ಬಯಲಿಗೆ ಬರಲಿಷ್ಟಪಡುವುದಿಲ್ಲ ಇವರು. ಒಂದು ಬಗೆಯ ಹಶ್ ಹಶ್ ಕಥನಗಳೇ ಈ ಯಹೂದ್ಯರದ್ದು.
ಆದರೂ ಇಸ್ರೇಲ್ ಎದ್ದು ನಿಂತಿದೆ. ಫೀನಿಕ್ಸ್ ನಂತೆ! ಅದು ಮಹತ್ವದ ಸಂಗತಿ.
-ಜಯಶ್ರೀ ದೇಶಪಾಂಡೆ