ಜಾಗತೀಕರಣದಲ್ಲಿ ಕಳೆದುಹೋಗುತ್ತಿರುವ ತಾಯಿ
ತೊಂಭತ್ತರ ದಶಕದಲ್ಲಿ ಭಾರತ ದೇಶವು ಅಳಿವಿನಂಚಿಗೆ ಬಂದು ನಿಂತಿತ್ತು. ರಿಜರ್ವ್ ಬ್ಯಾಂಕಿನಲ್ಲಿಟ್ಟ ಬಂಗಾರವನ್ನು ಅಡವು ಇಡುವ ದುಸ್ಥಿತಿ ಬಂದೊದಗಿತ್ತು. ದೇಶದ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಹೀನಾಯ ಸ್ಥಿತಿಯನ್ನು ತಲುಪಿತ್ತು. ಭ್ರಷ್ಟಾಚಾರದಿಂದ ಕಂಗೆಟ್ಟಿತ್ತು. ಆಗ ಚಾಣಾಕ್ಷ ಪ್ರಧಾನಮಂತ್ರಿಯಾದ ಪಿ.ವಿ. ನರಸಿಂಹರಾಯರು ದಿಟ್ಟ ಹೆಜ್ಜೆಯನ್ನಿಟ್ಟು ರಿಜರ್ವ್ ಬ್ಯಾಂಕಿನಲ್ಲಿಟ್ಟ ಬಂಗಾರವನ್ನು ಅಡವು ಇಟ್ಟು ಕರೆನ್ಸಿಯನ್ನು ತಂದರು. ಅಲ್ಲದೇ ನಮ್ಮ ದೇಶಕ್ಕೆ ಹಣ ಹರಿದುಬರುವಂತಾಗಲು ಮುಕ್ತ ಮಾರುಕಟ್ಟೆ ಒಪ್ಪಂದಕ್ಕೆ ಸಹಿ ಹಾಕಿದರು. ಹೀಗಾಗಿ ವಿದೇಶದಿಂದ ಬಂಡವಾಳ ನದಿಯಂತೆ ಹರಿದುಬಂತು. ಅಲ್ಲದೇ ವಿದೇಶಿಯರು ಮತ್ತೊಮ್ಮೆ ಭಾರತದಲ್ಲಿ ವ್ಯಾಪಾರ ಮಾಡಲು, ತಮ್ಮ ಕಂಪನಿಗಳನ್ನು ಸ್ಥಾಪಿಸಲು ಅಡಿ ಇಟ್ಟರು. ಕೆಲವೇ ಸಮಯದಲ್ಲಿ ನಮ್ಮ ಅಡಿವಿಟ್ಟ ಬಂಗಾರವು ಭಾರತಕ್ಕೆ ಮರಳಿ ಬಂದಿತು. ಎಲ್ಲೆಡೆಯೂ ಸುಫಲಾಂ ಸುಫಲಾಂ-ಸುಭೀಕ್ಷ ಕಾಲ ಪ್ರಾರಂಭವಾಯಿತು. ಉದ್ಯೋಗಗಳೂ ಹೆಚ್ಚಿದವು. ಆರ್ಥಿಕ ಹರಿವು, ಸರಾಸರಿ ಆರ್ಥಿಕ ಸ್ಥಿತಿಗತಿಗಳು ಹೆಚ್ಚಿದವು. ಅದೇ ಸಮಯದಲ್ಲಿ ಬಿ.ಪಿ.ಓ., ಕೆ.ಪಿ.ಓ. ಗಳೆಲ್ಲ ಹುಟ್ಟಿದವು. ನಮ್ಮಲ್ಲಿಯ ನುರಿತ ಸುಶಿಕ್ಷಿತ ಯುವಕರಿಗೆ ವಿಶೇಷ ತರಬೇತಿ ನೀಡಿ ಮಲ್ಟಿನ್ಯಾಶನಲ್ ಕಂಪನಿಗಳು ಕೆಲಸ ನೀಡಲಾರಂಭಿಸಿದವು. ಮತ್ತೊಮ್ಮೆ ಕಂಪನಿಗಳು ಸರ್ಕಾರವನ್ನು ನಿಯಂತ್ರಿಸಲಾರಂಭಿಸಿದವು. ತಮಗೆ ಬೇಕಾದ ನೀತಿ ನಿಯಮ ಕಾನೂನುಗಳನ್ನು ಪಾಸು ಮಾಡಿಸಿಕೊಳ್ಳಲಾರಂಭಿಸಿದವು. ಪ್ರತಿಯಾಗಿ ಇಲೆಕ್ಷನ್ನಿನಲ್ಲಿ ಪಾರ್ಟಿಫಂಡು ಎಂದು ಇಂತಿಷ್ಟು ಕಂತನ್ನು ಕೊಟ್ಟು ಸರ್ಕಾರಗಳನ್ನು ಕೊಳ್ಳಲಾರಂಭಿಸಿದವು. ಈ ಕಂಪನಿಗಳು ಯಾವ ತಂದೆ ರಿಟೈರ್ ಆಗುವ ಸಮಯದಲ್ಲಿ ಕಂಡಿರದಷ್ಟು ಡಬ್ಬಲ್, ತ್ರಿಬ್ಬಲ್ ದಷ್ಟು ಮೊತ್ತದ ಸಂಬಳ ಕೇವಲ ೨೪ರ ಹರೆಯದಲ್ಲಿ, ಆಗ ತಾನೇ ಡಿಗ್ರಿ ಮುಗಿಸಿದ ಉದ್ಯೋಗಿಗೆ ನೀಡಲಾರಂಭಿಸಿದವು. ಹೀಗಾಗಿ ಉಚ್ಛ್ರಾಯದ ಜೊತೆ ಜೊತೆಗೇ ಅವನತಿಯ ಲಕ್ಷಣಗಳೂ ಕಂಡುಬರತೊಡಗಿದವು. ಕುಡಿತ, ಕುಣಿತ, ಪಬ್ ಸಂಸ್ಕೃತಿ, ಲಿವಿಂಗ್ ಟುಗೆದರ್ ಸಂಸ್ಕೃತಿ, ಮುಂತಾದವುಗಳ ವಹಿವಾಟು ಹೆಚ್ಚಾದವು. ಒಂದು ಸುಶಿಕ್ಷಿತ ಜನಾಂಗವೇ ವಿದೇಶಕ್ಕೆ ಎದ್ದು ಹೊರಡಲಾರಂಭಿಸಿತು. ಇಲ್ಲಿಯೇ ಮಲ್ಟಿನ್ಯಾಶನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರೂ ವಿದೇಶೀ ಸಂಸ್ಕೃತಿಯನ್ನೇ ತಮ್ಮ ಸಂಸ್ಕೃತಿ ಎಂಬಂತೆ ಅಪ್ಪಿಕೊಳ್ಳಲಾರಂಭಿಸಿದರು. ನಮ್ಮ ಪರಂಪರೆ, ನಂಬಿಕೆ, ವಿಶ್ವಾಸಗಳಿಗೆಲ್ಲ ಒಂಥರದ ಪೆಟ್ಟು ಬೀಳಲಾರಂಭಿಸಿತು. ಮದುವೆಯೆಂಬ ಅನುಬಂಧಕ್ಕೂ, ಏಳು ಜನ್ಮಗಳ ಪ್ರೀತಿಯ ಬಂಧಕ್ಕೂ ಕೊಡಲಿ ಪೆಟ್ಟು ಬೀಳಲಾರಂಭಿಸಿ, ಲಿವಿಂಗ್ ಟುಗೆದರ್ ಅಥವಾ ವಿಚ್ಛೇದನವೆಂಬ ವಿಚ್ಛಿದ್ರತೆಗಳು ಮೊಳಕೆಯೊಡೆಯಲಾರಂಭಿಸಿದವು. ಕೇವಲ ದುಡ್ಡಿನಿಂದ ಬೇಕಾದ್ದನ್ನು ಮಾಡಬಹುದು ಎಂಬ ಅತಿರೇಕ ಯುವಜನತೆಯಲ್ಲಿ ಹೆಚ್ಚಾಗಿ ಕಾಣಿಸುತ್ತಾ ಮಾನಸಿಕ ಕ್ಷೋಭೆಗೂ ಅವರು ಒಳಗಾಗಲಾರಂಭಿಸಿದರು. ಬೆಲೆಗಳೆಲ್ಲ ಮುಗಿಲು ಮುಟ್ಟಿ ಒಬ್ಬನ ದುಡಿತದಿಂದ ಸಂಸಾರ ನೌಕೆ ತೂಗಲಾರದಾಗ ಇಬ್ಬರೂ (ಪತಿ ಪತ್ನಿ) ಗಳಿಸಲಾರಂಭಿಸಿದರು. ಪತಿ -ಪತ್ನಿ ಇಬ್ಬರೂ ಬೆಳಗ್ಗೆಯಿಂದ ರಾತ್ರಿಯವರೆಗೂ ಹೊರಗೇ ಇರಬೇಕಾದಾಗ ಮನೆಯಲ್ಲಿ ಉಳಿದ ಮಗುವಿನ ಪರಿಸ್ಥಿತಿ ಹೇಳಲಾಗದು. ಅನಾಥ, ಅಸುರಕ್ಷತೆಯ ಭಾವದಿಂದ ನರಳುವಂತಾಯಿತು. ತಾಯಿಗೆ ತಪ್ಪಿತಸ್ಥ ಮನೋಭಾವದಿಂದ ಆ ಮಗು ಬೇಡಿದ್ದನ್ನು ಕೊಡಿಸುತ್ತಾ ತನ್ನಷ್ಟಕ್ಕೆ ಸಮಾಧಾನಪಟ್ಟುಕೊಳ್ಳುತ್ತಿದ್ದರೂ ಕೂಡ ಮನಸ್ಸಿಗೆ ಶಾಂತಿ ಎಂಬುದಿಲ್ಲ. ಎಲ್ಲೋ ಅಳುಕು. ತಾನೆಲ್ಲೋ ತಪ್ಪುತ್ತಿರುವೆನೇನೋ, ಆ ಮಗುವಿನ ಲಾಲನೆ, ಪಾಲನೆಯನ್ನೆಲ್ಲ ಕೆಲಸದಾಳಿಗೆ ಒಪ್ಪಿಸಿದಾಗ ಅವರ ಆಟೋಟಗಳಲ್ಲಿ ಪಾಲ್ಗೊಳ್ಳದೇ ಕೇವಲ ದುಡ್ಡನ್ನು ಗಳಿಸುವ ಯಂತ್ರವಾಗಿ ಪರಿಣಮಿಸಿದಾಗ ಆಕೆಗೆ ಅನಾಥ ಪ್ರಜ್ಞೆ ಕಾಡದೇ ಇರಲಿಲ್ಲ. ಹೀಗಾಗಿ ಜಾಗತೀಕರಣದಿಂದಾಗಿ ತಾಯಿ ಕಳೆದು ಹೋಗುತ್ತಿದ್ದಾಳೇನೋ.
ನಾವೆಲ್ಲ ಚಿಕ್ಕವರಿದ್ದಾಗ ನಮ್ಮ ತಾಯಿ ಆಗ ಮನೆಯಲ್ಲೇ ಇದ್ದು ನಮ್ಮ ಬೇಕು ಬೇಡಗಳನ್ನೆಲ್ಲ ನೋಡುತ್ತಿದ್ದರು. ಹೀಗಾಗಿ ಆಕೆ ನಮ್ಮೊಂದಿಗೇ ಅಂಟಿಕೊಂಡಿರದೇ ಇದ್ದರೂ ಕೂಡ ಅಮ್ಮ ಇಲ್ಲೇ ಇದ್ದಾಳೆ ಎನ್ನುವ ಸುರಕ್ಷತೆಯ ಭಾವ ನಮ್ಮಲ್ಲಿರುತ್ತಿತ್ತು. ಅದರಿಂದಾಗಿ ಆತ್ಮವಿಶ್ವಾಸ, ಮುನ್ನುಗ್ಗುವ ಛಲಗಳನ್ನೆಲ್ಲ ರೂಢಿಸಿಕೊಳ್ಳುತ್ತಿದ್ದೆವು. ಮನಃಪೂರ್ವಕವಾಗಿ ಶಾಲೆಯ ಗ್ಯಾದರಿಂಗ್ ಇರಲಿ, ಆಟೋಟಗಳಿರಲಿ ಭಾಗವಹಿಸುತ್ತಿದ್ದೆವು.
ಇಂದಿನ ಮಕ್ಕಳು ನಮ್ಮದರಕ್ಕಿಂತ ಮೇಲಸ್ತರಿಗೆಯಲ್ಲಿದ್ದರೂ ಕೂಡ ಏನೋ ಕಳೆದುಕೊಂಡ ಭಾವ, ಎಲ್ಲ ಇದ್ದೂ ಇಲ್ಲದ ಅನಾಥ ಭಾವ, ಒಳಗಿನಿಂದ ಪುಟಿದೇಳುವ ಹುರುಪು ಹುಮ್ಮಸ್ಸು ಇಲ್ಲ. ಅವುಗಳನ್ನೆಲ್ಲ ಪೋಷಿಸಿ ಬೆಳೆಸುವ ತಾಯಂದಿರಿಗೆ ವೇಳೆ ಇಲ್ಲ. ಹೀಗಾಗಿ ಗೊಂದಲದ ಗೂಡಾಗಿ ಮಗು ಬೆಳೆಯುತ್ತಿದೆ. ಹಿಂದೆಂದಿಗಿಂತಲೂ ಇಂದು ಮಕ್ಕಳ ಮಾನಸಿಕ ವೈಕಲ್ಯ ಹೆಚ್ಚಾಗುತ್ತಿದೆ.
ಜಾನಪದೀಯರು ಮಗುವಿನ ಕುರಿತು, ತಾಯಿಯ ಬಗ್ಗೆ ಎಷ್ಟೊಂದು ನೈಜವಾಗಿ ಅನುಭವಿಸಿ ಹಾಡಿದ್ದಾರೆ. ಮಗುವೊಂದು ಅರಳುತ್ತಿರುವ ಮೊಗ್ಗು, ಅದನ್ನು ಬಲವಂತದಿಂದ ಅರಳಿಸಲಾಗದು ಅದು ತನ್ನಿಂದ ತಾನೇ ಸಹಜವಾಗಿ ಅರಳಬೇಕಾದದ್ದು ಅವಶ್ಯಕ. ಅವರವರ ಕರ್ತವ್ಯಗಳನ್ನು ಅವರವರು ಪಾಲಿಸಿದರೆ ಮುಂದಿನ ಜನಾಂಗವಾದರೂ ಸುರಕ್ಷಿತವಾಗಿರಬಲ್ಲದೇನೋ.
ಇತ್ತೀಚೆಗಿನ ಸರ್ವೇ ಪ್ರಕಾರ ಅಮೇರಿಕೆಯಲ್ಲಿ ಅನೇಕರು ತಾಯಿಯಾದ ಮೇಲೆ ಮನೆಯಲ್ಲೇ ಇರಲು ಬಯಸುತ್ತಾರೆ. ಮಗುವಿನ ಮೊದಲ ಐದು ವರ್ಷಗಳ ಬೆಳವಣಿಗೆ ಅದರ ಇಡೀ ಜೀವನವನ್ನು ನಿರ್ಧರಿಸುತ್ತದಂತೆ.
ತಾಯಿ ಎನ್ನುವ ಶಬ್ದವೇ ನಿಸ್ವಾರ್ಥ ತ್ಯಾಗದ ಪ್ರತೀಕ. ತನ್ನೆಲ್ಲ ಆಶೋತ್ತರಗಳನ್ನು ಬದಿಗೊತ್ತಿ ಮಕ್ಕಳಿಗಾಗಿ ಏನೆಲ್ಲ ಮಾಡುತ್ತಿರುವುದರಿಂದಲೇ ಆಕೆಗೆ ಅಂತಹ ಮಹತ್ವ. ತಾಯಿಯೇ ಮೊದಲ ಪಾಠಶಾಲೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇಂದಿನ ಜಾಗತೀಕರಣದಲ್ಲಿ ತಾಯಿಯ ಪಾತ್ರವನ್ನು ವಹಿಸಿಕೊಳ್ಳುತ್ತಿರುವುದು ‘ಕೆಲಸದಾಳು’ ಎಂದು ವಿಷಾದವಾಗಿ ಹೇಳಬೇಕಾಗಿದೆ. ಇಡೀ ದಿನ ಕೆಲಸದಾಳಿನ ಜೊತೆಗೇ ಕಳೆಯಬೇಕಾಗಿರುವುದರಿಂದ ಸಹಜವಾಗಿ ಆಕೆಯ ಸಂಸ್ಕಾರ, ನಡವಳಿಕೆ ಅಥವಾ ಕೀಳರಿಮೆಗಳನ್ನೆಲ್ಲ ಮೈಗೂಡಿಸಿಕೊಂಡರೆ ಆಶ್ಚರ್ಯವಿಲ್ಲ. ತಾಯಿಯ ಪ್ರೀತಿ ವಾತ್ಸಲ್ಯದ ವಂಚನೆಯಿಂದ ಮಕ್ಕಳು ಅಡ್ಡಹಾದಿ ತುಳಿದರೆ ಅದಕ್ಕೆ ಹೊಣೆ ಯಾರು? ಇಂದು ಮಕ್ಕಳಿಗೆ ಒದಗದ ಪ್ರೀತಿ ವಾತ್ಸಲ್ಯ ಅಂತಃಕರುಣೆಗಳು ವೃದ್ಧರಾದಾಗ ತಾಯ್ತಂದೆಗಳು ಅವರಿಂದ ಅಪೇಕ್ಷಿಸುವುದೆಷ್ಟು ಸರಿ? ವೃದ್ಧಾಶ್ರಮದ ದಾರಿ ತೋರಿದಾಗ ಕೊರಗುವುದೇಕೆ? ಮಾಡಿದ್ದುಣ್ಣೋ ಮಹರಾಯ ಅಷ್ಟೇ.
ದುಡ್ಡು ಎಷ್ಟಾದರೂ ಕಡಿಮೆಯೇ. ಆದರೆ ದುಡ್ಡೇ ಬದುಕಿಗೆ ಸರ್ವಸ್ವವಲ್ಲ. ಅಂಥ ದುಡ್ಡಿಗೋಸ್ಕರ ತಾನು, ತನ್ನವರು, ತನ್ನದೇ ಸಂತಾನವನ್ನು ಬಲಿಕೊಡುವುದರಲ್ಲಿ ಅರ್ಥವಿಲ್ಲ ಎಂದು ನನಗನಿಸುತ್ತದೆ. ಅಂದರೆ ಮಗುವಿನ ಮೊದಲ ಐದು ವರ್ಷಗಳ ಬೆಳವಣಿಗೆಯಲ್ಲಿ ತಾಯಿಯಾದವಳ ಪಾತ್ರ ಹಿರಿದಾದ್ದು ನಂತರ ಮಗು ಬೆಳೆದು ಶಾಲೆಗೆ ಹೋಗಲಾರಂಭಿಸಿದಾಗ ಆಕೆ ಕೆಲಸಕ್ಕೆ ಸೇರಿದರೆ ಸರಿ ಏನೋ? ಸಂಸಾರ ನೌಕೆಯನ್ನೂ ಸರಿಯಾಗಿಸಬೇಕಾದ ಹೊಣೆಗಾರಿಕೆಯೂ ಆಕೆಯ ಮೇಲಿದೆಯಲ್ಲವೇ?
ತಾಯಿಯ ಪ್ರಾಮುಖ್ಯತೆಯನ್ನುಳಿಸಲು, ತನ್ನ ಸಂತಾನ ಮುಂದಿನ ಸತ್ಪ್ರಜೆಯಾಗಲು ಮುಂದಿನ ಸದೃಢ ಸಮಾಜ ನಿರ್ಮಾಣ ಮಾಡಲು ತಾಯಿ ಇಷ್ಟಾದರೂ ಮಾಡಬೇಕಲ್ಲವೇ? ಆ ಮಗುವಿನಲ್ಲಿ ನೈತಿಕತೆಯ ಮೌಲ್ಯಗಳನ್ನು ಅರಹುತ್ತಾ, ಸತ್ಯ, ನ್ಯಾಯ, ನೀತಿಗಳನ್ನು ಪರಿಚಯಿಸುತ್ತಾ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರ, ರಾಮ, ಕೃಷ್ಣರ ಕಥೆಗಳನ್ನು ಹೇಳುತ್ತಾ ಅವರಲ್ಲಿ ಪ್ರಶ್ನಿಸುವ, ಉತ್ತರಿಸುವ ಗುಣ ಸ್ವಭಾವಗಳನ್ನು ಬೆಳೆಸಿದಾಗ ಸರಿ, ತಪ್ಪುಗಳ ನಿರ್ಣಯಿಸುವ ಸಾಮರ್ಥ್ಯ ಬೆಳೆಸಿದಾಗ ಮಗು ನಿಜವಾಗಿಯೂ ಸಮಾಜಕ್ಕೆ ಆಸ್ತಿಯಾಗಿ ಪರಿಣಮಿಸುತ್ತದೆ ಎಂಬುದರಲ್ಲಿ ಅತಿಶಯೋಕ್ತಿಯೇನಿಲ್ಲ. ಅದರ ಕ್ರೆಡಿಟ್ಟು ತಾಯಿಗೇ ಸಲ್ಲುತ್ತದೆ ಅಲ್ಲವೇ. ದೀರ್ಘಕಾಲ ಬಾಳುವಿಕೆಯಲ್ಲಿ ಸದೃಢ ಅಡಿಪಾಯ ಕಟ್ಟಡಕ್ಕೆ ಅವಶ್ಯಕ. ಹಾಗೆಯೇ ಮಗುವಿನ ದೀರ್ಘ ಬದುಕಿನಲ್ಲಿ ಸುಂದರ ಭವಿತವ್ಯಕ್ಕೆ ಸುರಕ್ಷತೆಯ ಬಾಲ್ಯ ಅವಶ್ಯಕ!