ವೃದ್ಧಾಶ್ರಮ
ವಿಶಾಲವಾದ ಪ್ರಾಂಗಣ, ಸುತ್ತಲೆಲ್ಲ ಹಸಿರು ಗಿಡಮರಗಳ ಮಧ್ಯೆ ಕುಟೀರದಂತೆ ಕಾಣುವ ‘ಘರಕುಲ’ಕ್ಕೆ ಬಂದಾಗ ಸಂಜೆಯ ಸೂರ್ಯ ಆ ಕಡೆಗೆ ಮುಖ ತಿರುಗಿಸುತ್ತಿದ್ದ ಬೆಳ್ಳಿಯ ಬೆಳಕು ಕತ್ತಲೆಗೆ ಜಾರುತ್ತಿತ್ತು. ವಿಶಾಲವಾದ ಪ್ರಾಂಗಣದ ಮಧ್ಯದಲ್ಲಿ ದತ್ತ ಗುರುವಿನ ಫೋಟೋ ಇಟ್ಟುಕೊಂಡ ವೃದ್ಧ ಸಮೂಹ ಪ್ರಾರ್ಥನೆಯಲ್ಲಿ ಮುಳುಗಿತ್ತು. ವಾತಾವರಣದಲ್ಲೆಲ್ಲ ತಂಪು ಹವೆ ಆಚ್ಛಾದಿಸುತ್ತಿತ್ತು. ಭಕ್ತಭಾವ ಎಲ್ಲರಲ್ಲೂ ತುಂಬಿ ಪರಿಸರದಲ್ಲಿ ಆಧ್ಯಾತ್ಮದ ಜ್ಯೋತಿ ಹೊತ್ತಿ ಉರಿಯುತ್ತಿತ್ತು. ತಾಳದೊಂದಿಗೆ ರಾಗ ಮೇಳೈಸಿ ಭಕ್ತಿಭಾವ ರಚನೆಗೆ ರಂಗು ತರಿಸಿತ್ತು. ರಾಮರಕ್ಷಾ ಸ್ತೋತ್ರವನ್ನು ಒಕ್ಕೋರಲಿನಿಂದ ಹೇಳುತ್ತಿದ್ದರೆ ನಮಗೆಲ್ಲ ರೋಮರೋಮಗಳಲ್ಲೂ ಸಂಚಲನೆ ಉಂಟಾಗುತ್ತಿತ್ತು. ವೃದ್ಧರ ಮುಖದಲ್ಲಿ ಯಾವುದೇ ರೀತಿಯ ಅಸಹನೆಯಾಗಲೀ, ಅಸಂತೃಪ್ತಿಯಾಗಲೀ ನನಗೆ ಕಾಣಲಿಲ್ಲ. ಎಲ್ಲ ಪ್ರಾರ್ಥನೆ ಮುಗಿಯುವವರೆಗೂ ನಾವೂ ಅವರಲ್ಲಿ ಶಾಮೀಲಾಗಿ ತಾಳಕ್ಕೆ ತಕ್ಕ ಹಾಗೆ ಚಪ್ಪಾಳೆ ಜೋಡಿಸುತ್ತಿದ್ದೆವು. ಅದೆಲ್ಲ ಮುಗಿದಾಗ ‘ಘರಕುಲ’ದ ಸ್ಥಾಪಕರಾದ ಶ್ರೀಯುತ ಮುಕುಂದ ಪೋದ್ದಾರ ಅವರಿಗೆ ಸಮಕ್ಷಮ ಭೆಟ್ಟಿಯಾಗಿ ವೃದ್ಧರನ್ನು ಮಾತನಾಡಿಸಲು ಅನುಮತಿ ಕೋರಿದೆವು. ಅದಕ್ಕೆ ಅವರು ಧಾರಾಳವಾಗಿ ತಮ್ಮ ಒಪ್ಪಿಗೆ ನೀಡಿದರು.
“ನೀವು ಇವರನ್ನೆಲ್ಲ ಭೆಟ್ಟಿಯಾಗಲು ಇಲ್ಲೀವರೆಗೂ ಬಂದದ್ದೇ ದೊಡ್ಡದು. ಅವರೆಲ್ಲ ಯಾರಾದರೂ ಬರುತ್ತಾರೇನೋ ಅಂತ ಜಾತಕ ಪಕ್ಷಿಯಂತೆ ಇದಿರು ನೋಡುತ್ತಿರುತ್ತಾರೆ. ನೀವುಗಳು ಅವರನ್ನು ಮಾತನಾಡಿಸಲು ಬಂದಿದ್ದು ನಮಗೆಲ್ಲ ತುಂಬ ಸಂತೋಷ ತರಿಸಿದೆ. ನೀವು ಅವರೊಂದಿಗೆ ಮಾತನಾಡಿ” ಎಂದು ಹೇಳಿದಾಗ ಅಲ್ಲಿಯೇ ಪಕ್ಕದಲ್ಲಿ ಕುಳಿತ ವೃದ್ಧೆಯ ಹತ್ತಿರ ಸರಿದೆ ನಿಧಾನವಾಗಿ, ನನ್ನನ್ನು ನೋಡುತ್ತಿದ್ದಂತೆಯೇ ಆಕೆಯ ಕಣ್ಣಂಚಿನಲ್ಲಿ ನೀರು ಜಿನುಗಿದಂತೆ ನನಗೆ ಭಾಸವಾಯಿತು. ಆಕೆಯ ಹೆಸರು ಲಕ್ಷ್ಮೀಬಾಯಿ ಮಾನಶೇಟ ಎಂದು ಹೇಳಿದಳು. ಅವಳ ವಿವರಗಳನ್ನು ನಾನು ಕೆದಕಲು ಪ್ರಯತ್ನಿಸಿದರೆ ನನಗೆ ಅವಳಿಂದ ವಿವರ ಪಡೆಯಲಿಕ್ಕೆ ಬಹಳ ಕಷ್ಟವೇನಾಗಲಿಲ್ಲ. ಆಕೆಯ ಮಾತೃಭಾಷೆ ಮರಾಠಿ. ಆಕೆಯ ವಯಸ್ಸು ೯೬ ವರ್ಷ, ಬೆಳ್ಳಗೆ ತೆಳ್ಳಗೆ ಸುಂದರವಾಗಿದ್ದಳು.
‘ಈಗ ಹೀಂಗಿರಬೇಕಾದ್ರೆ ವಯಸ್ಸಿನಲ್ಲಿ ನೀವು ಎಷ್ಟು ಸುಂದರವಾಗಿರಬಹುದು’ ಎಂದು ಮರಾಠಿಯಲ್ಲಿಯೇ ಕೇಳಿದೆ. ಆಗ ಆಕೆಯ ಕಣ್ಣುಗಳು ಮಿಂಚಿದಂತಾದವು.
ಮತ್ತೇ ನಾನೇ, “ನೀವು ಮೂಲತಃ ಯಾವೂರಿನವರು?”
“ನಾನು ಸುಪಾ ಊರಿನವಳು”,
“ಸುಪಾದಿಂದ” ಆಶ್ಚರ್ಯಚಕಿತಳಾಗಿ ಕೇಳಿದೆ.
“ಹೌದು, ಸುಪಾ ಆಣೆಕಟ್ಟಿನಿಂದಾಗಿ ನಮ್ಮ ೩೫ ಎಕರೆ ಜಮೀನು, ಮನೆ, ಜಾನುವಾರುಗಳೆಲ್ಲ ನೀರಿನಲ್ಲಿ ಮುಳುಗಿ ಹೋದ್ವು, ೩ ಚಿಕ್ಕ ಮಕ್ಕಳು ಗಂಡ ಎಲ್ಲ ಬೆಳಗಾಂವಿಗೆ ಬಂದು ನೆಲಸಿದೆವು. ಮಕ್ಕಳಿಗೆಲ್ಲ ಮದುವೆಯಾಗಿ ಗೂಡು ಮಾಡಿಕೊಂಡ್ವು, ಗಂಡ ತೀರಿಯಾದ ಮೇಲೆ ನನ್ನನ್ನೂ ಹೊರಗಟ್ಟಿ ಬಿಟ್ವು. ಅಮೇರಿಕೆಯಲ್ಲಿಯ ಮಗ ಬಂದು ಇಲ್ಲಿ ಇರಲು ವ್ಯವಸ್ಥೆ ಮಾಡಿ ಹೋದಾ ಅಂತ ನಾನಿವತ್ತು ಜೀವಂತನಾದ್ರೂ ಇದ್ದೇನೆ ಎಂದು ಹೇಳಿ ಭಾರವಾದ ಉಸಿರನ್ನು ಹೊರಬಿಟ್ಟಳು.”
“ಆ ಅಮೇರಿಕೆಯ ಮಗನ ಹತ್ತಿರವೇ ಹೋಗ್ಬೇಕಾಗಿತ್ತಲ್ಲ ಅಜ್ಜಿ”
“ಅಲ್ಲೇ ಎರಡು ವರ್ಷ ಇದ್ದೆ. ಅಲ್ಲಿ ಥಂಡಿ ಬಹಳೇ ಇತ್ತು, ಅಲ್ಲದೇ ನನಗೆ ಕಿಡ್ನಿ ಪ್ರಾಬ್ಲಮ್ಮು ಶುರುವಾಯಿತು. ಅಲ್ಲಿ ಆಸ್ಪತ್ರೆಯ ಖರ್ಚು ವಿಪರೀತ ದುಬಾರಿ. ಅದಕ್ಕೇ ಆತನೇ ಇಲ್ಲಿ ಬಂದು ನನ್ನನ್ನು ಇಟ್ಟು ಹೋಗಿದ್ದಾನೆ. ಇಲ್ಲಿಯವರೂ ನನ್ನನ್ನು ಬಹಳೇ ಕಾಳಜೀ ಪೂರ್ವಕವಾಗಿ ನೋಡಿಕೊಳ್ಳುತ್ತಾರೆ.” ಕಣ್ಣಿನಿಂದ ನೀರು ಧಾರಾಕಾರವಾಗಿ ಸುರಿಯುವಂತಿತ್ತು. ಅವಳನ್ನು ಸಮಾಧಾನಪಡಿಸಿದೆ. ಪಕ್ಕದಲ್ಲೇ ಕುಳಿತ ಎಂ.ಎ. ಗ್ರ್ಯಾಜುಯೇಟ್ ಆದ, ಬೆನನ್ಸ್ಮಿಥ್ ಹೈಸ್ಕೂಲಿನಲ್ಲಿ ಟೀಚರ್ ಆಗಿ ಕೆಲಸ ಮಾಡಿ ರಿಟೈರಾದ ಅವಿವಾಹಿತ ಮಹಾನಂದಾ ನಾಯಿಕ್ ರನ್ನು ಮಾತನಾಡಿಸಿದೆ. ಈಗ ಆಕೆಗೆ ೮೫ ವರ್ಷ. ರಿಟೈರಾದ ಮೇಲೆ ಅವಳ ಸಂಬಂಧಿಕರು ಗೋವಾದಲ್ಲಿಯೇ ಬಂದಿರಲು ಒತ್ತಾಯಿಸಿದ್ದರಿಂದ ತನ್ನೆಲ್ಲ ಗಂಟುಮೂಟೆಗಳೊಂದಿಗೆ ಅಲ್ಲಿಯೇ ತೆರಳಿದರು. ಆದರೆ ಅಲ್ಲಿಗೆ ಹೋದ ಮೇಲೆ ಸಂಬಂಧಿಕರ ಅಪ್ಯಾಯತೆ ಕರುಣೆ ಎಲ್ಲ ಬೊಗಳೆ ಎಂಬ ಅರಿವು ಈಕೆಗಾಯಿತು. ಈಕೆಯೊಂದಿಗೆ ಸಿಹಿ ಮಾತನಾಡಿ ಈಕೆಯ ಒಂದೊಂದೇ ಒಡವೆಗಳನ್ನೋ ಮತ್ತೊಂದೋ ಇಸಿದುಕೊಂಡು ಹೋಗಲಾರಂಭಿಸಿದರು. ಈಕೆಯ ಮುಂದೆ ಸಿಹಿ ಮಾತನಾಡಿ ಹಿಂದೆ ಈಕೆಯ ಬಗ್ಗೆಯೇ ಬೇರೆಯ ತೆರನಾಗಿ ಮಾತನಾಡಲಾರಂಭಿಸಿದಾಗ ಈ ಇಬ್ಬಗೆಯ ನೀತಿಯಿಂದಾಗಿ ರೋಸಿಹೋದ ಈಕೆ ತನ್ನೆಲ್ಲ ವಸ್ತುಗಳನ್ನೂ ಮಾರಿ, ತನ್ನೆಲ್ಲ ಆಸ್ತಿಯನ್ನು ಕ್ಯಾಶ್ ಆಗಿ ಪರಿವರ್ತಿಸಿ ಘರಕುಲಕ್ಕೆ ಆಗಮಿಸಿ ಎಲ್ಲವನ್ನೂ ವೃದ್ಧಾಶ್ರಮದ ಹೆಸರಿಗೇ ಬರಿದು ತಾನೂ ಇಲ್ಲಿ ನಿಶ್ಚಿಂತೆಯ ಬದುಕು ಸಾಗಿಸುತ್ತಿರುವಳು. ಆಕೆ ಬಿಡುವಿದ್ದಾಗಲೆಲ್ಲ, ಸಾಕಷ್ಟು ಮರಾಠಿ ಕವನಗಳನ್ನೂ, ನಾಟಕಗಳನ್ನೂ ಬರೆದಿದ್ದಾಳೆ. ಎಲ್ಲವನ್ನೂ ಅತ್ಯಂತ ಖುಷಿಯಾಗಿ ತೋರಿಸುತ್ತಿದ್ದರೆ ನನಗೆ ಇಷ್ಟು ವಯಸ್ಸಿನಲ್ಲೂ ಇವಳ ಅದಮ್ಯ ಉತ್ಸಾಹ, ಚೈತನ್ಯವನ್ನು ಕಂಡು ಮೂಕವಿಸ್ಮತಳಾದೆ. ಇವರೆಲ್ಲರಿಗೂ ಆಶ್ರಯತಾಣವನ್ನು ಒದಗಿಸಿದ ಪೋದ್ದಾರ ದಂಪತಿಗಳಿಗೆ ಮನದಲ್ಲಿಯೇ ವಂದಿಸಿದೆ. ಎಲ್ಲಿಯೋ ಬಾಡಿ ಹೋಗುವಂತಿದ್ದ ಹೂವು ತನ್ನೆಲ್ಲ ಪರಿಮಳವನ್ನು ಹೊರಸೂಸುತ್ತ ಪಸರಿಸುತ್ತಿರುವುದನ್ನು ಕಂಡು ದಂಗಾದೆ.
ಇದೇ ರೀತಿ ಸುಶೀಲಾಬಾಯಿ ತೆಂಡೂಲ್ಕರ ಅವರದು ಇನ್ನೊಂದು ಕಥೆ ವ್ಯಥೆ. ಸೋಮವಾರ ಪೇಟೆಯಲ್ಲಿ ಸುಂದರವಾದ ಬಂಗ್ಲೆಯನ್ನು ಹೊಂದಿದ ಎರಡು ಗಂಡುಮಕ್ಕಳ ತಾಯಿ ಈಕೆ ೧೦೧ ವರ್ಷದವಳು. ಅವಳನ್ನು ನಾನು “ಇಷ್ಟು ದೊಡ್ಡ ಮನೆ ಬಿಟ್ಟು ಇಲ್ಲಿ ಯಾಕೆ ಬಂದ್ರಿ?” ಎಂದೆ. “ಏನ ಮಾಡಾಕ ಬರ್ತದ್ರೀ ದಿನಾಲೂ ಮನ್ಯಾಗ ಜಗಳಾ ಮಾಡಿಕೊಂಡು ಸೊಸೆಯರ ಕಡೆಯಿಂದ ತುಚ್ಛವಾಗಿ ಏನಾದರೂ ಅನ್ನಿಸಿಕೊಂಡು ಇರೂಕ್ಕಿಂತ ಇಲ್ಲಿ ನನ್ನ ಸ್ವಾಭಿಮಾನದಿಂದಲಾದ್ರೂ ಇರ್ತೇನಲ್ಲ” ಎಂದು ತನ್ನ ಮನದಿಂಗಿತವನ್ನು ನಿರ್ಭಿಡೆಯಿಂದ ಹೇಳಿದಳು. ಆಕೆಯ ಸೊಸೆ ನನಗೆ ಅಲ್ಪಸ್ವಲ್ಪ ಪರಿಚಯ ಸೋಶಿಯಲ್ ಗ್ಯಾಧರಿಂಗ್ ನಲ್ಲಿ ಮುಂದಾಳು. ಅದಕ್ಕೆ ನಾನು ಕೇಳ್ದೆ. ‘ಆ ಮನೆ ನಿಮ್ಮ ಮಕ್ಳು ಕಟ್ಟಿಸಿದ್ದಾ?’ ಅದಕ್ಕೆ ಆಕೆ ತನ್ನ ತಲೆ ಚಚ್ಚಿಕೊಳ್ಳುತ್ತಾ ‘ನನ್ನ ಯಜಮಾನರು ಹಾಗೂ ನಮ್ಮ ಮೈದುನ ಆ ಮನೆಯನ್ನು ಕಟ್ಟಿಸಿದ್ದು ನಾವೆಲ್ಲ ಕೂಡಿ ಇರುತ್ತಿದ್ದೆವು. ಆಗ ನಮ್ಮ ಮನೆ ನಂದಗೋಕುಲದಂತ್ತಿತ್ತು. ದಿನಾಲೂ ಐವತ್ತು ಜನ ಆದ್ರೂ ಊಟ ಮಾಡುವವರು. ಇವತ್ತೇನಾಗೈತಿ ನೋಡ್ರಿ, ಇರುವೆ ಕಟ್ಟಿದ ಗೂಡನ್ಯಾಗ ಹಾವು ಬಂದು ಸೇರ್ಕೊಂಡೈತಿ. ನಾನು ಅಲ್ಲಿ ಅವರಿಗೆಲ್ಲ ಬ್ಯಾಡಾಗೀನಿ, ಇರಲಿ ಬಿಡ್ರಿ ಇಲ್ಲಿ ನನಗೆ ಇನ್ನೂ ಆರಾಮ ಐತಿ’ ಎಂದಾಗ ಭಾರವಾದ ಉಸಿರೊಂದು ಹೊರಬಂತು. ಪಿಂಟೋ ಎನ್ನುವ ಇನ್ನೊಬ್ಬ ಹಿರಿಯಳು ಕ್ರಿಶ್ಚಿಯನ್ ಧರ್ಮದವಳು. ಮಕ್ಕಳೂ ಸೊಸೆಯಂದಿರೂ ನೌಕರಿಗೆ ಹೋಗುತ್ತಿದ್ದುದ್ದರಿಂದ ಆಕೆ ಒಬ್ಬಂಟಿಯಾಗಿ ಮನೆಯಲ್ಲಿ ಇರ್ಬೇಕಾಗುತ್ತಿತ್ತು. ಅದಕ್ಕೇ ಬಂದೆ ಎಂದಳು. ಆಕೆ ಕ್ರಿಶ್ಚಿಯನ್ ಆದರೂ ಕೂಡ ಇಲ್ಲಿ ನಡೆಯುವ ಧಾರ್ಮಿಕ ಕಾರ್ಯದಲ್ಲಿ ಯಾವಾಗ್ಲೂ ಕೈಜೋಡಿಸಿತ್ತಾಳೆ. ರಾಮರಕ್ಷಾ ಸ್ತೋತ್ರವನ್ನೇ ಆಗಲೀ, ಭಗವದ್ಗೀತೆಯ ಶ್ಲೋಕಗಳನ್ನೇ ಆಗಲೀ, ಕಂಠಪಾಠ ಮಾಡಿ ನಿರರ್ಗಳವಾಗಿ ಹೇಳುತ್ತಾಳೆ ಎಂದು ಪೋದ್ದಾರವರು ಆಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿನಾಬಾಯಿ ಪಾಟೀಲ, ಸುನಂದಾ ಕುಲಕರ್ಣಿ, ಜೋಶಿ ಮಾಸ್ತರ ಆಗಲೀ ಒಟ್ಟು ೨೧ ಹಿರಿಯರ ಸಮಾವೇಶ ಅಲ್ಲಿತ್ತು. ಇವರನ್ನೆಲ್ಲ ನೋಡಿಕೊಳ್ಳಲು ೮ ಜನ ಆಯಾಗಳು ಹಾಗೂ ಒಬ್ಬಳು ಅಡಿಗೆಯವಳಿದ್ದಾಳೆ ಹಾಗೂ ಶರದ ಜಿಮ್ನಾಳ್ಕರ ಎಂಬ ಮ್ಯಾನೇಜರ್ ಕಮ್, ಕೇರಟೇಕರ ಇದ್ದಾರೆ. ಅವರು ತಮ್ಮ ಉನ್ನತ ಉದ್ಯೋಗವೊಂದನ್ನು ಬಿಟ್ಟು ಇಲ್ಲಿಯೇ ಸಮಾಜಸೇವೆ ಮಾಡುತ್ತಾ ಅವರಲ್ಲಿಯೇ ಒಂದಾಗಿ ಉಳಿದಿದ್ದಾರೆ.
ಇವರನ್ನೆಲ್ಲ ನೋಡುತ್ತಿದ್ದಂತೆ ನನಗೆ ಒಮ್ಮೆಲೇ ‘ಹಣ್ಣೆಲೆ ಉದುರಿದಾಗ ಚಿಗುರೆಲೆ ಬಿದ್ದು ಬಿದ್ದು ನಗುತ್ತಿತ್ತಂತೆ’ ಎಂಬ ಉಕ್ತಿ ನೆನಪಾಯಿತು.
ಮನುಷ್ಯನ ಬಾಳಿನಲ್ಲಿ ಬಾಲ್ಯ, ಯೌವ್ವನ, ವೃದ್ಧಾಪ್ಯ ಅವಸ್ಥೆಗಳು ಬರಲೇಬೇಕು. ಅವುಗಳನ್ನು ತಪ್ಪಿಸಲು ಸಾಧ್ಯವಿಲ್ಲ. ಬಾಲ್ಯದಲ್ಲಿ ತಂದೆ-ತಾಯಿಗಳ ಸಹಾಯ ಹಸ್ತ ಇದ್ದೇ ಇರುತ್ತದೆ. ಮಗು ಅತ್ತಾಗ, ರಾತ್ರಿಯೆಲ್ಲ ನಿದ್ದೆಕೆಡಿಸಿದಾಗ, ಹಠ ಮಾಡಿದಾಗ, ಸಾಮಾನು ಒಡೆದಾಗಲೋ, ಹಾಳು ಮಾಡಿದಾಗಲೋ ಯಾವ ತಾಯಿಯಾಗಲೀ ಆ ಮಗುವನ್ನು ಎಲ್ಲಿಯಾದರೂ ಬಿಟ್ಟುಬರಬೇಕೆನ್ನುವ ವಿಚಾರ ಯಾವತ್ತೂ ಮಾಡುವುದಿಲ್ಲ. ಆಗಷ್ಟೇ ಬೈಯ್ದು ಮತ್ತೆ ಆ ಮಗುವನ್ನು ಎದೆಗವಚಿ ಬೆಳೆಸುತ್ತಾರೆ. ಅಲ್ಲಿ ಕ್ಷಮೆಗೆ ದೊಡ್ಡ ಪಾತ್ರವಿದೆ.
ಮುಂದೆ ಯೌವ್ವನಾವಸ್ಥೆಯಲ್ಲಿ ಹೆಂಡತಿಯಾದವಳು ಅಥವಾ ಗಂಡನಾದವನು ಮಾಡಿದ ತಪ್ಪು ಅವಾಂತರಗಳನ್ನೆಲ್ಲ ಹೊಟ್ಟೆಗೆ ಹಾಕಿಕೊಂಡು ಸಂಸಾರ ಪಥವನ್ನು ಮುನ್ನಡೆಸುತ್ತಾರೆ. ಅಲ್ಲಿ ಪತಿ-ಪತ್ನಿ ಪರಸ್ಪರ ಆಧಾರವಾಗಿರುತ್ತಾರೆ. ಗಂಡ ಕುಡಿದು ಬರುತ್ತಾನೆ, ಬಡಿಯುತ್ತಾನೆ ಎಂಬೆಲ್ಲ ಕಾರಣಗಳು ಗಂಡನನ್ನು ತೊರೆದು ಹೋಗುವಂತೆ ಹೆಂಡತಿಯಾದವಳಿಗೆ ಪುಸಲಾಯಿಸಿ ಕೊಡುವುದಿಲ್ಲ. ಅಥವಾ ಅದಕ್ಕೆ ಸಮಾಜವೂ ಸಮ್ಮತಿಸುವುದಿಲ್ಲ. ಅದೇ ರೀತಿ ಹೆಂಡತಿ ಜಗಳಗಂಟಿ, ಅಡಿಗೆ ಮಾಡುವುದಿಲ್ಲ ಎಂಬ ಇತ್ಯಾದಿ ಕಾರಣಗಳೂ ಅವಳನ್ನು ತೊರೆಯುವಂತೆ ಮಾಡಲು ಯಶಸ್ವಿಯಾಗುವುದಿಲ್ಲ.
ಆದರೆ ದುರ್ಭರದ ಅವಸ್ಥೆ ಎಂದರೆ ವೃದ್ಧಾಪ್ಯವೇ. ವೃದ್ಧಾಪ್ಯದಲ್ಲಿ ಆರೋಗ್ಯ ಕೈಕೊಟ್ಟಿರುತ್ತದೆ. ವಿಚಾರಗಳು ಹೊಂದಾಣಿಕೆಯಾಗುತ್ತಿರುವುದಿಲ್ಲ. ಕೈಯಿಂದ ಕೆಲಸವಾಗುತ್ತಿರುವುದಿಲ್ಲ. ಕೆಲವೊಂದು ಸಲ ದುಡ್ಡೂ ಇರುವುದಿಲ್ಲ. ಅಸಹಾಯಕತೆ ಅಸಹನೀಯವಾಗಿರುತ್ತದೆ. ಇಂಥ ಸನ್ನಿವೇಶಗಳಲ್ಲಿ ವೃದ್ಧಾಶ್ರಮಗಳು ವರವೆಂದೇ ನನ್ನ ಅಭಿಪ್ರಾಯ. ಕನಿಷ್ಠಪಕ್ಷ ಅಲ್ಲಿ ತನ್ನ ಸ್ವಾಭಿಮಾನದಿಂದ, ಗೌರವದಿಂದಲಾದರೂ ಬದುಕಿನ ಕೊನೆಯ ಘಟ್ಟವನ್ನು ಕಳೆಯಬಹುದು.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ತಾಯಿ, ತಂದೆ, ಮಕ್ಕಳು, ಚಿಕ್ಕಮ್ಮ, ಚಿಕ್ಕಪ್ಪ, ಅಜ್ಜ, ಅಜ್ಜಿ, ಎಲ್ಲರೂ ಕೂಡಿ ಬಾಳುವುದು ಆದಿಯಾಗಿಯೂ ನಡೆದುಕೊಂಡು ಬಂದಿದೆ. ಜಗತ್ತಿನಲ್ಲಿ ಎಲ್ಲಿಯೂ ಇಂಥ ಕೂಡಿಬಾಳುವ ಪದ್ಧತಿ ನೋಡಲೂ ಸಿಗುವುದಿಲ್ಲ. ಅಂಥ ಅಪರೂಪದ ಈ ಪದ್ಧತಿ ಇಂದಿನ ನ್ಯೂಕ್ಲಿಯಸ್ ಕುಟುಂಬ ಪದ್ಧತಿಯಿಂದಾಗಿ ಅಳಸಿಹೋಗುತ್ತಿದೆ.
ಇಂದಿನ ತುಟ್ಟಿಯ ದಿನಮಾನದಲ್ಲಿ ಗಂಡ-ಹೆಂಡತಿ ಇಬ್ಬರೂ ದುಡಿಯಬೇಕಾಗಿರುವುದು ಅನಿವಾರ್ಯವಾಗಿದೆ. ಮಕ್ಕಳನ್ನೇ ನೋಡಿಕೊಳ್ಳಲು ಹೆಣಗುವ ಇಂದಿನ ತಂದೆ-ತಾಯಿ ಇನ್ನು ತಮ್ಮ ತಂದೆ-ತಾಯಿಗಳನ್ನು ನೋಡುವುದು ದೂರದ ಮಾತೇ ಸರಿ. ಇದಕ್ಕೆಲ್ಲಾ ಕಾರಣವನ್ನು ಹುಡುಕುತ್ತಾ ಹೋದರೆ ಸ್ವಾರ್ಥಪರತೆ, ಅತೀಯಾಸೆ ಎಂದು ಹೇಳಬಹುದು. ತಾನು ತನ್ನ ಗಂಡ ಹಾಗೂ ತನ್ನ ಮಕ್ಕಳು ಎಂಬ ಸಂಕುಚಿತ ಮನೋಭಾವದಿಂದಾಗಿ ಮಕ್ಕಳೂ ಕೂಡ ಸ್ವಾರ್ಥಿಗಳಾಗುತ್ತಿದ್ದಾರೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳಲ್ಲವೇ, ಅದಕ್ಕಾಗೇ ಇಡೀ ಸಮಾಜವೇ ಸ್ವಾರ್ಥಿಯಾದಾಗ ಯಾರಿಗೆ ಏನೇನ್ನಬೇಕು.
ನಮ್ಮ ಸಂಸ್ಕೃತಿಯ ಉದಾತ್ತತೆ, ಕೂಡಿ ಬಾಳುವುದು, ಪರಸ್ಪರರನ್ನು ಅರಿತು ಸಹಿಸಿಕೊಳ್ಳುವ ಮೂಲಭೂತ ಗುಣಗಳು ಗಾಳಿಗೆ ತೂರಿದಂತಾಗಿವೆ. ಸುಸಂಸ್ಕಾರವನ್ನರಿಯದ ಮಕ್ಕಳು ದಾರ ಕಿತ್ತು ಗಾಳಿಪಟದಂತಾಗಿವೆ. ಅವಕ್ಕೆ ಒಳ್ಳೆಯ ಮಾರ್ಗದರ್ಶನದ ಕೊರತೆ ಇದೆ ಎಂದು ಹೇಳಬಹುದು.
ಮೊದಲಿನ ಇಪ್ಪತ್ತು ಮೂವತ್ತು ದಶಕದ ಹಿಂದಷ್ಟೇ ತಿರುಗಿದಾಗ ಅಲ್ಲಿ ಗಂಡನಾದವನು ಹೊರಗಡೆ ದುಡಿದು ಬರುತ್ತಿದ್ದರೆ, ಹೆಂಡತಿಯಾದವಳು ಮನೆಯ ವ್ಯವಹಾರವನ್ನೆಲ್ಲ ಅಚ್ಚು-ಕಟ್ಟಾಗಿ ನಿಭಾಯಿಸುತ್ತಿದ್ದಳು. ಅನೆಯ ಆಗುಹೋಗುಗಳು, ಬಂದು ಹೋಗುವವರ ಆತಿಥ್ಯ, ಮಕ್ಕಳ ಮೇಲ್ವಿಚಾರಣೆ, ಮನೆಯ ಹಿರಿಯರ ಆರೈಕೆ, ಹೀಗಾಗಿ ಆಕೆ ಯಾವುದೇ ಒತ್ತಡಗಳಿಂದ ಬೇಯದೇ ಸಮಾಧಾನ ಚಿತ್ತಳಾಗಿ ಮನೆಯ ವ್ಯವಹಾರಗಳನ್ನೆಲ್ಲ ನಿಭಾಯಿಸುತ್ತಿದ್ದಳು. ಮನೆಯಲ್ಲಿಯೇ ಋತುಮಾನಕ್ಕನುಗುಣವಾದ ರುಚಿಶುಚಿಯಾದ ಆಹಾರವನ್ನು ತಯಾರಿಸಿ ಆರೋಗ್ಯ ಕಾಪಾಡುತ್ತಿದ್ದಳು. ಸಮಯ ಉಳಿದಾಗ ವರ್ಷಕ್ಕಾಗುವ ಸಂಡಿಗೆ, ಹಪ್ಪಳ, ಪುಡಿಗಳು, ಉಪ್ಪಿನಕಾಯಿಗಳನ್ನು ತಯಾರಿಸಿಕೊಳ್ಳುತ್ತಿದ್ದಳು. ಅಲ್ಲಿ ಆಕೆಗೆ ಒತ್ತಡ ೦%, ಉತ್ಸಾಹ ೧೦೦%, ಆದರೆ ಇಂದೇನಾಗಿದೆ ನೋಡಿ, ಮನೆಯ ಲೆಕ್ಕಾಚಾರ ಸರಿದೂಗಿಸಲು ತಾನೂ ಗಂಡನ ಜೊತೆಗೂಡಿ ಹೊರಗೆ ದುಡಿಯುತ್ತಿರುವಳು. ಆದರೆ ಅವಳಿಗೆ ಮನೆಯ ಕೆಲಸಕ್ಕೆ ರಜೆ ಇಲ್ಲ. ಹೊರಗೂ ಒಳಗೂ ದುಡಿದ ಆಕೆ ಹೈರಾಣಾಗಿರುತ್ತಾಳೆ. ಮಕ್ಕಳ ಬೇಡಿಕೆ ಏನೇ ಇದ್ದರೂ ತನ್ನ ಮನದಾಳದ ಗಿಲ್ಟನ್ನು ಕಮ್ಮಿ ಮಾಡಲೋ, ಸುಮ್ಮನಿರಿಸಲೋ ಕೊಡಿಸಿ ಕೈತೊಳೆದುಕೊಳ್ಳುತ್ತಾಳೆ. ಹೀಗಾಗಿ ಮಕ್ಕಳಿಗೆ ದುಡ್ಡಿನ ಮಹತ್ವ ಗೊತ್ತಾಗುವುದಿಲ್ಲ ಒಂದು. ಇನ್ನೊಂದೇನೆಂದರೆ, ಮಕ್ಕಳೆಡೆಗಿನ ಅಸಡ್ಡೆಯಿಂದ ಅವು ದಾರಿ ತಪ್ಪುವ ಸಾಧ್ಯತೆಯೂ ಉಂಟು. ಆದ್ದರಿಂದ ಕೇವಲ ದುಡ್ಡಿನಿಂದ ಮಕ್ಕಳನ್ನು ಒಲಿಸಿದರೆ ಸಾಲದು, ಪ್ರೀತಿ ವಿಶ್ವಾಸವೆಂಬ ಭದ್ರಬುನಾದಿ ಮಕ್ಕಳಿಗೆ ಬೇಕು. ಸ್ವಾಭಿಮಾನದ ಕೆಚ್ಚನ್ನು ಅವುಗಳಲ್ಲಿ ತುಂಬಿರಬೇಕು. ಸಚ್ಚಾರಿತ್ರ್ಯದ ನಡತೆಯ ಹಿರಿಯರು ಮಕ್ಕಳಿಗೆ ಆದರ್ಶಪ್ರಾಯವಾಗಿರಬೇಕು. ನಮ್ಮ ಸಂಸ್ಕೃತಿ ಸಂಸ್ಕಾರಗಳು ಕೇವಲ ಬಾಯಿಮಾತಿನಲ್ಲಿರದೆ ಶುದ್ಧ ಆಚರಣೆಯಲ್ಲಿರಬೇಕು. ಅಂದಾಗಲೇ ಇಂದಿನ ಮಕ್ಕಳು ನಾಳೆಯ ಪ್ರಜೆಯಾಗಿ ಸಮಾಜಕ್ಕೆ ಹೊರೆ ಆಗದೆ ಆಸ್ತಿಯಾಗಬಲ್ಲವು. ತಮ್ಮ ಜವಾಬ್ದಾರಿಯನ್ನರಿತು ಹಿರಿಯರ ಮಾರ್ಗದರ್ಶನದಲ್ಲಿ ಅವರ ಆರೈಕೆ, ಸಾಂತ್ವನ ಮಾಡುತ್ತಾ ಅವರೊಂದಿಗೆ ಬೆರೆಯುತ್ತಾ ಇರಬಲ್ಲರು.
ಈ ವೃದ್ಧಾಶ್ರಮದ ಪರಿಕಲ್ಪನೆ ನಮ್ಮದಲ್ಲ. ಇದು ಪಾಶ್ಚಾತ್ಯರಿಂದ ಬಳುವಳಿಯಾಗಿ ಬಂದಿದ್ದು ಪಾಶ್ಚಾತ್ಯ ದೇಶಗಳಲ್ಲಿ ತಾಯಿ, ತಂದೆ-ಮಕ್ಕಳು ಎಂಬ ಸುಮಧುರ ಬಾಂಧವ್ಯಕ್ಕಿಂತ ಹಣಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಹೀಗಾಗಿ ಅತೀ ಚಿಕ್ಕಮಕ್ಕಳಿದ್ದಾಗಲೇ ಅವುಗಳನ್ನು ಬೇಬಿ ಸಿಟ್ಟಿಂಗಿನಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಾರೆ. ಇಲ್ಲಿಯ ತಾಯಂದಿರ ಹಾಗೆ ಅವರು ಅಷ್ಟೊಂದು ಆತ್ಮೀಯತೆ ಬೆಳೆಸಿಕೊಳ್ಳುವುದೇ ಇಲ್ಲ. ಆ ಮಕ್ಕಳು ೧೮ ವರ್ಷ ಆಗುತ್ತಿದ್ದಂತೇ ತಂದೆ-ತಾಯಿಯ ಜವಾಬ್ದಾರಿ ಮುಗಿಯಿತು. ಅವರು ತಮ್ಮ ಕಾಲಮೇಲೆ ತಾವು ನಿಂತುಕೊಳ್ಳಬೇಕು. ಹೀಗಾಗಿ ಆ ಮಕ್ಕಳು ಹಣಗಳಿಸುವ ತರಾತುರಿಯಲ್ಲಿ ಶಿಕ್ಷಣವನ್ನು ಪೂರ್ತಿಗೊಳಿಸುವುದಿಲ್ಲ. ಅದಕ್ಕೆಲ್ಲ ಅವರ ತಂದೆ ತಾಯಂದಿರು ತಲೆಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ಪರಸ್ಪರರಲ್ಲಿ ಯಾವುದೇ ಬಾಂಧವ್ಯದ ಸೆಳೆತವಿಲ್ಲದಂತಾಗಿರುತ್ತದೆ. ತಂದೆ-ತಾಯಿಗಳೂ ವೃದ್ಧರಾದಾಗ, ಮಕ್ಕಳು ಕೂಡ ಅವರ ಜವಾಬ್ದಾರಿಯನ್ನು ತಾವು ಹೊರುವುದಿಲ್ಲ. ಅದಕ್ಕಾಗೇ ಅಲ್ಲಿ ವೃದ್ಧಾಶ್ರಮಗಳು ಸಾಕಷ್ಟು ತಲೆ ಎತ್ತಿವೆ. ಅದೇ ರೀತಿಯ ಸಂಸ್ಕೃತಿಯನ್ನು, ನಮ್ಮದಲ್ಲದ ಈ ರೀತಿಯ ವಿಚಾರವನ್ನು ನಾವಿಂದು ಅಪ್ಪಿಕೊಂಡು ಬೆಳೆಸುತ್ತಿದ್ದೇವೆ. ಆದರೆ ಅಲ್ಲಿಯ ರೀತಿಯ ತಾಯಿ ತಂದೆಗಳು ನಮ್ಮಲ್ಲಿ ಇಲ್ಲ. ನಮ್ಮಲ್ಲಿಯ ತಾಯ್ತಂದೆಯರು ಉದಾತ್ತ ಧ್ಯೇಯದೊಂದಿಗೆ ಮಕ್ಕಳನ್ನು ಬೆಳೆಸುತ್ತಾರೆ. ತಮಗೆ ಕಡಿಮೆ ಮಾಡಿಕೊಂಡಾದರೂ, ತಾವು ಅರೆಹೊಟ್ಟೆ ಉಂಡು, ತಾವು ಯಾವುದೋ ಬಣ್ಣ ತೆಗೆದ ಧರಿಸಿ ಮಗುವು ಬೆಳೆದು ದೊಡ್ಡದಾಗಲೀ, ಆ ಮಗುವು ಚೆನ್ನಾದ ಬಟ್ಟೆ ಧರಿಸಿ ಶೋಭಿಸಲಿ ಎಂದು ಆಶಿಸುತ್ತಾರೆ. ಎಲ್ಲೇ ಇರು, ಹೇಗೇ ಇರು ಕಂದ ನೀ ಮಾತ್ರ ನಗುನಗುತ್ತಾ ಇರು ಎಂದು ಮನಸಾರೆ ಹಾರೈಸುತ್ತಾಳೆ ತಾಯಿ. ತ್ಯಾಗದ ಪ್ರತಿಮೆ ಇಲ್ಲಿಯ ತಾಯಿ. ತಂದೆ ಕೂಡ ಯಾವತ್ತಿಗೂ ಹಿಂದೆ ಬೀಳುವುದಿಲ್ಲ. ತಾನು ಬೇಕಾದರೆ ಹರಿದ ಚಪ್ಪಲಿ ಮೆಟ್ಟುತ್ತಾನೆ. ಶರ್ಟಿನ ಕಿತ್ತಿದ ಬಟನ್ನನ್ನು ಹೊಲಿದುಕೊಂಡು ಸರಿ ಮಾಡಿ ಹಾಕಿಕೊಂಡು ಹೋಗುತ್ತಾನೆಯೇ ಹೊರತು ಹೊಸತೊಂದು ತೆಗೆದುಕೊಳ್ಳುವ ವಿಚಾರ ಮಾಡುವುದಿಲ್ಲ. ಆದರೆ ಮಗು ಕೇಳಿದಾಕ್ಷಣವೇ ತಾನು ಕೂಡಿಟ್ಟ ಹಣದಿಂದ ಕೊಡಿಸಿಬಿಡುತ್ತಾನೆ. ಹೀಗಾಗಿ ಮಗುವಿಗೆ ನಿಜವಾಗಿಯೂ ಕಷ್ಟದ ಅರಿವು ಆಗುವುದಿಲ್ಲ. ಅದು ತನ್ನ ಪರಿಧಿಯಲ್ಲಿಯೇ ಯೋಚಿಸುತ್ತಾ ಸೆಲ್ಫ್ ಸೆಂಟರ್ಡ್ ಆಗಿ ಬೆಳೆಯುತ್ತದೆ. ತಾಯಿ ತಂದೆಯ ತ್ಯಾಗದ ಮಹತ್ವದ ಬಗ್ಗೆ ಅದಕ್ಕೆ ಅರಿವೇ ಆಗುವುದಿಲ್ಲ. ಮುಂದೆ ಕಷ್ಟನೋ ಸುಖನೋ ಅಂತ ಅವನಿಗೊಂದು ಅಥವಾ ಅವಳಿಗೊಂದು (ಮಕ್ಕಳ) ಇಂಜನೀಯರಿಂಗೋ ಡಾಕ್ಟರೋ ಮಾಡಿ ಗೆದ್ದೇ ಎಂದುಕೊಳ್ಳುತ್ತಾನೆ ಅಪ್ಪ. ಆದರೆ ಕನ್ ಫ್ಲಿಕ್ಟ್ ಶುರುವಾಗುವುದೇ ಇಲ್ಲಿಂದ ಚಿಕ್ಕ ವಯಸ್ಸಿನಲ್ಲಿಯೇ ಅಪ್ಪನ ಸಂಬಳದ ಎರಡರಷ್ಟು ಸಂಬಳ ಗಿಟ್ಟಿಸಿಕೊಂಡಾಗ ಅಪ್ಪನ ಅಥವಾ ಅವ್ವನ ಬಗೆಗೆ ಒಂದು ಥರದ ಕೀಳರಿಮೆ ಹಾಗೂ ತನ್ನ ಬಗ್ಗೆ ಅತೀವ ಹೆಮ್ಮೆಪಟ್ಟುಕೊಳ್ಳುತ್ತಾನೆ. ಇಂಥ ವರ್ತನೆಯಿಂದ ಅಪ್ಪ ಅಮ್ಮ ನಿಜವಾಗಿಯೂ ಕಂಗಾಲಾಗುತ್ತಾರೆ. ತಮ್ಮ ತ್ಯಾಗಕ್ಕೇ ಮಹತ್ವ ಇಲ್ಲವೆಂದೆನಿಸುತ್ತದೆ. ಮುಂದೆ ಸ್ವಾರ್ಥಿಯಾದ ಮಗ ತನಗೆ ಒಪ್ಪಿಕೆಯಾದ ಹುಡುಗಿಯೊಂದಿಗೆ ಮದುವೆಯಾಗಲು ಬಯಸುತ್ತಾನೆ. ಆಗ ತಂದೆ ತಾಯಿ ಒಪ್ಪದೇ ಹೋದಾಗ ಮುಂದಿನ ಜೀವನವೆಲ್ಲ ಸಂಘರ್ಷದಿಂದಲೇ ಸಾಗುತ್ತದೆ. ಹೊಸದಾಗಿ ಬರುವ ಸೊಸೆ ತನ್ನ ಮಗನನ್ನು ತನ್ನಿಂದ ಕಸಿಯುತ್ತಾಳೆ ಎಂಬ ಭಾವನೆಯೇ ಪೀಳಿಗೆಗಳ ಅಂತರವನ್ನು ಸೃಷ್ಟಿಸಬಲ್ಲದು. ಮುಂದೆ ಇದೇ ಕಾರಣ ಒಡ್ಡಿ ಅಪ್ಪ ಅಮ್ಮನನ್ನು ಅವರೇ ಪೈಸೆ ಪೈಸೆ ಕೂಡಿಸಿ ಕಟ್ಟಿದ ಮನೆಯಿಂದ ಹೊರಗಟ್ಟಲೂ ಹಿಂದುಮುಂದು ನೋಡುವುದಿಲ್ಲ. ಆಗ ಇವರು ಹೋಗಬೇಕಾದರೂ ಎಲ್ಲಿ? ಮನೆಯಲ್ಲಿ ಇರುವಂತೆಯೂ ಇಲ್ಲ. ದಿನವೂ ಜಗಳ, ಮನಸ್ತಾಪ ತುಚ್ಛತೆಯಿಂದ ಸ್ವಾಭಿಮಾನ ಕಳೆದುಕೊಂಡು ಇರಬೇಕಷ್ಟೇ. ತಾನೇ ಹುಟ್ಟಿಸಿದ ಮಗ ತಾನೇ ಕಟ್ಟಿಸಿದ ಮನೆಯನ್ನು ಕಸಿಯುತ್ತಾನೆ ಎಂದರೆ ಎಂತಹ ಅಧಃಪತನ ಎಂದೆನಿಸುವುದಿಲ್ಲವೇ. ಇಂಥ ಸಮಯದಲ್ಲಿ ಪತಿ ಪತ್ನಿ ಜೊತೆಯಾಗಿದ್ದರೆ ಹೇಗಾದರೂ ಬಂದ ಕಷ್ಟವನ್ನು ಸಹಿಸಬಹುದೇನೋ. ಆದರೆ ಪತ್ನಿಯಾಗಲೀ ಪತಿಯಾಗಲೀ ವಿಯೋಗಗೊಂಡರೆ ಅಂಥ ವೇಳೆಯಲ್ಲಿ ಮಗನ ಅಪರಾಧ ಅಕ್ಷಮ್ಯವಾಗುತ್ತದೆ. ತನ್ನನ್ನು ಹೆತ್ತು ಹೊತ್ತು ಸಾಕಿದ ತಂದೆ ಅಥವಾ ತಾಯಿ ಏಕಾಂಗಿಯಾದಾಗ ತಾನು ಅವರ ಜೊತೆಯಲ್ಲಿರದೇ ಹೊರಹಾಕಿದರೆ ಅವನಂಥ ಕೃತಘ್ನ ಬೇರೇ ಯಾರೂ ಇಲ್ಲ. ಇಂಥ ವೇಳೆಯಲ್ಲಿ ವೃದ್ಧಾಶ್ರಮಗಳು ವೃದ್ಧರ ಬಾಳಿಗೆ ಜ್ಯೋತಿಯೇ ಸರಿ, ವರವೇ ಸರಿ. ಅದಕ್ಕಾಗೇ ಇಂದು ಪಾಶ್ಚಾತ್ಯಾರ ಅನುಕರಣೆಯಿಂದಾಗಿ ಮಕ್ಕಳೆಲ್ಲ ಸ್ವಾರ್ಥಿ ಕೃತಘ್ನವಾಗುತ್ತಿದ್ದರೆ ವೃದ್ಧಾಶ್ರಮಗಳು ಸಾಕಷ್ಟು ಸಂಖ್ಯೆಯಲ್ಲಿ ಬೆಳೆಯುತ್ತಿವೆ.
ಇಂದು ವೃದ್ಧಾಶ್ರಮಗಳು ವೃದ್ಧಿಸಿವೆ ನಿಜ. ಮನೆಯಲ್ಲಿ ದೊರೆಯದ ಆದರ ವಿಶ್ರಾಂತಿ ಇಲ್ಲಿ ದೊರಕಬಹುದು. ಕೆಲವಾರು ವೃದ್ಧಾಶ್ರಮಗಳು ಅವರಿಂದ ದುಡ್ಡನ್ನಿಸಿದುಕೊಂಡು ಅವರಿಗೆ ಸೌಕರ್ಯವನ್ನು ಒದಗಿಸುತ್ತವೆ. ಇನ್ನೂ ಕೆಲವು ಸರ್ಕಾರದಿಂದ ಗ್ರ್ಯಾಂಟನ್ನು ಪಡೆದು ಪುಕ್ಕಟೆಯಾಗಿ ಸೌಕರ್ಯವನ್ನು ಒದಗಿಸುತ್ತವೆ. ಒಟ್ಟಿಗೆ ವೃದ್ಧರಿಗೆ ತಮ್ಮ ಕೊನೆಯ ಕಾಲದಲ್ಲಿ ಸುಖದಿಂದ, ವಿಶ್ರಾಮದಿಂದ ಕಾಲಕಳೆಯಬೇಕೆನ್ನುವುದೇ ವೃದ್ಧಾಶ್ರಮ ನಡೆಸುವವರ ಉದ್ದೇಶ. ವೃದ್ಧರಿಗೂ ಒಂದು ಜೀವನ ಎಂದು ಇರುತ್ತದೆ. ತನ್ನ ಬದುಕಿನ ಕೊನೆಯ ಅವಧಿಯಲ್ಲಿ ತನ್ನ ಪತಿಯೇ ಅಥವಾ ಪತ್ನಿಯೇ ವಿಯೋಗಗೊಂಡಾಗ ಅವರು ದಿಗಿಲುಗೊಂಡಿರುತ್ತಾರೆ. ಆ ವೇಳೆಯಲ್ಲಿ ಅವರಿಗೆ ದುಡ್ಡು ಬಂಗಾರ ಅಂತ ಏನೂ ಬೇಡ. ಆದರೆ ಅವರಿಗೆ ಮಾನಸಿಕವಾಗಿ ಸುರಕ್ಷಿತವಾದ ನೆಲೆಯ ಅವಶ್ಯಕತೆಯಿದೆ. ಅವರಿಗೆ ಬಲವಾದ ತೋಳಿನಾಸರೆ ಬೇಕಾಗಿದೆ. ಮಕ್ಕಳು ವಿದೇಶಕ್ಕೆ ತೆರಳಿದಾಗ ಅಥವಾ ಮಗ ಸೊಸೆ ಇಬ್ಬರೂ ನೌಕರಿಯಲ್ಲಿದ್ದಾಗ ಏಕಾಂಗಿತನದಿಂದ ಒಬ್ಬರೇ ಮನೆಯಲ್ಲಿರುವುದಕ್ಕಿಂತ ತನ್ನಂತೆಯೇ ನೋವನನುಭವಿಸುತ್ತಿರುವ, ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿರುವ ಸಂಗಾತಿಗಳ ಜರೂರಿ ಇರುತ್ತದೆ. ಹೀಗಾಗಿ ವೃದ್ಧಾಶ್ರಮಗಳು ಕೇವಲ ಆಸರೆ ಒದಗಿಸದೇ ವೃದ್ಧರಿಗೆ ಅವಶ್ಯಕವಾಗಿರುವ ಮನರಂಜನೆಯನ್ನು, ಸತ್ಸಂಗ, ಧ್ಯಾನ, ಯೋಗಗಳಿಂದ ಅವರ ಮನಸ್ಸನ್ನು ಪ್ರಫುಲ್ಲಿತಗೊಳಿಸಬಲ್ಲವು. ಅಲ್ಲಿ ಒಂದು ಪುಟ್ಟ ಗ್ರಂಥಾಲಯಗಳನ್ನೇ ಇಟ್ಟಿರುತ್ತಾರೆ. ವಿವಿಧ ಭಾಷೆಯ ಪುಸ್ತಕಗಳು, ವೃತ್ತಪತ್ರಿಕೆಗಳು ಅಲ್ಲಿ ದೊರೆಯುತ್ತಿರುತ್ತವೆ. ಟಿ.ವಿ.ಯಲ್ಲಿ ಬರುವ ಕಾರ್ಯಕ್ರಮಗಳನ್ನು ನೋಡಿ ಮನ ತಣಿಸಬಹುದು. ಸಾಯಂಕಾಲ ಭಜನೆ ಸತ್ಸಂಗದ ವೇಳೆ, ಅಲ್ಲಿ ರಾಮರಕ್ಷಾ ಸ್ತೋತ್ರ, ವಿಷ್ಣು ಸಹಸ್ರನಾಮಾವಳಿಗಳಿಂದಲೂ ವೃದ್ಧರು ಸಂತುಷ್ಟರಾಗುತ್ತಾರೆ. ಅಲ್ಲಿ ಎಲ್ಲವೂ ಸರಿಯಾದ ವೇಳೆಯಲ್ಲಿ ನಡೆಯುತ್ತಿರುತ್ತದೆ. ಬೆಳಿಗ್ಗೆ ಎದ್ದಾಕ್ಷಣ ಚಹ, ಕಾಫಿ, ನಂತರ ೯ ಘಂಟೆಗೆ ಸರಿಯಾಗಿ ಟಿಫನ್, ಚಹ, ಕಾಫಿ, ನಂತರ, ೧ ಘಂಟೆಗೆ ಬಿಸಿಯಾದ ಊಟ, ೪ ಘಂಟೆಗೆ ಚಹ, ರಾತ್ರಿ ೮ ಘಂಟೆಗೆ ಊಟ, ಉಳಿದ ವೇಳೆಯಲ್ಲಿ ಅವರು ಏನೂ ಮಾಡಬಹುದು. ತಮ್ಮ ಕೌಶಲ್ಯದ ಪ್ರದರ್ಶನ ಮಾಡಬಹುದೆಂದು ಇಲ್ಲವೇ ಬೇರೆಯವರನ್ನು ಮನರಂಜಿಸಬಹುದು ಇಲ್ಲವೇ ಮನರಂಜನೆಯನ್ನು ಸವಿಯಲೂಬಹುದು.
ಒಟ್ಟಿನಲ್ಲಿ ಇಂದಿನ ತರಾತುರಿ ಜೀವನದಲ್ಲಿ ವೃದ್ಧಾಶ್ರಮಗಳು ಅವಶ್ಯಕವಾಗಿವೆ. ನಮ್ಮದಲ್ಲದ ಈ ವೃದ್ಧರನ್ನು ವೃದ್ಧಾಶ್ರಮದಲ್ಲಿಡುವ ಸಂಸ್ಕೃತಿಯನ್ನು ನಾವಿಂದು ಒಪ್ಪಿಕೊಂಡಿದ್ದೇವೆ. ಅದಕ್ಕಾಗಿ ವಿಷಾದಿಸಿ ಕುಳಿತುಕೊಳ್ಳುವ ಅಗತ್ಯವಿಲ್ಲ.
ವೃದ್ಧಾಶ್ರಮಗಳು ವೃದ್ಧರಿಗೆ ನಿಜವಾಗಿಯೂ ಅವರು ತಮ್ಮ ಕೊನೆಯ ದಿನಗಳನ್ನಾದರೂ ಸಹ್ಯವಾಗಿಸಲು ನೆರವಾಗುತ್ತವೆ. ನೆಮ್ಮದಿಯಿಂದ ಸ್ವಾಭಿಮಾನದಿಂದ, ಯಾವುದೇ ಕೀಳರಿಮೆಗೆ ಅವಕಾಶವಿಲ್ಲದಂತೆ ಬದುಕಲು ಅವಕಾಶ ದೊರಕಿಸಿಕೊಡುತ್ತವೆ. ತಾನೊಬ್ಬರೇ ಈ ಪ್ರಪಂಚದಲ್ಲಿ ದುಃಖಿತರಲ್ಲ, ತನ್ನಂತೆಯೇ ಅನೇಕರಿರುವರು ಎನ್ನುವುದನ್ನು ಸಾಬೀತುಪಡಿಸುತ್ತವೆ. ಅವರ ದುಃಖವನ್ನು ಕಡಿಮೆಗೊಳಿಸಿ ಆನಂದದಿಂದ ಇರುವಲ್ಲಿ ಸಹಕರಿಸುತ್ತವೆ ಎಂದು ಹೇಳಬಹುದು. ತಮ್ಮ ಮನದಾಳದ ದುಃಖವನ್ನು ತನ್ನಂತೆಯೇ ಇರುವವರೊಂದಿಗೆ ಹಂಚಿಕೊಂಡಾಗ ದುಃಖದ ತೀವ್ರತೆ ಕಡಿಮೆಯಾಗಬಹುದು.