ಹಕ್ಕೆಮನೆ

ಹಕ್ಕೆಮನೆ
ಮಲೆನಾಡಿನಲ್ಲಿ ಗದ್ದೆ ತೋಟ ಇರುತ್ತಿದ್ದುದೇ ಕಾಡಿನ ನಡುವೆ, ಹೀಗಾಗಿ ಕಾಡುಪ್ರಾಣಿಗಳ ಉಪಟಳ ಸರ್ವೇ ಸಾಮಾನ್ಯ. ಅದರಲ್ಲೂ ಫಸಲು ಕೈಗೆ ಬರುವ ಹೊತ್ತಿನಲ್ಲಿ ಬೆಳೆಗೆ ಕಾವಲು ಅನಿವಾರ್ಯ, ಮೃಗಗಳು ಹಕ್ಕುಗಳು ರೈತನ ಶ್ರಮವನ್ನು ವ್ಯರ್ಥವಾಗಿಸುತ್ತದೆ. ಬಹುಕಾಲ ಅಲ್ಲೇ ಇರಬೇಕಾದ ಪರಿಸ್ಥಿತಿಯಿರುತ್ತದೆ. ಹೀಗಾಗಿ ಬಿಸಿಲು, ಮಳೆಯಿಂದ ರಕ್ಷಣೆ ಪಡೆಯಲು ಕೃಷಿಕರು ತಮ್ಮ ಜಮೀನಿನಲ್ಲಿ ತಾತ್ಕಾಲಿಕವಾಗಿ ಕಟ್ಟಿಕೊಳ್ಳುವ ಪುಟ್ಟ ಹುಲ್ಲಿನ ಮನೆಯೇ “ಹಕ್ಕೆ ಮನೆ”
ಜಮೀನಿನ ತುಸು ಎತ್ತರದ ಪ್ರದೇಶದಲ್ಲಿ ನಾಲ್ಕು ಕಂಬಗಳನ್ನು ಹುಗಿದು ಏಳೆಂಟು ಅಡಿಯಷ್ಟು ಉದ್ದ ಅಗಲದ ಜಾಗದಲ್ಲಿ ನಿರ್ಮಾಣವಾಗುವ ಈ ಹಕ್ಕೆಮನೆಯ ಮಾಡಿಗೆ ಸೋಗೆ ಇಲ್ಲವೇ ಒಣ ಹುಲ್ಲನ್ನು ಹೊದ್ದಿಸುವರು. ಒಳಗೆ ಕೂರಲು, ಮಲಗಲು ಅನುಕೂಲವಾಗುವಂತೆ ಅಡಿಕೆ ದಬ್ಬೆಯದೋ, ಇಲ್ಲಾ ಬಿದಿರಿನ ಬೊಂಬಿನದ್ದೋ ಚಿಕ್ಕ ಅಟ್ಟಣಿಗೆ ಇರುತ್ತದೆ. ಅಲ್ಲಿ ನಿಂತರೆ, ಸುತ್ತೆಂಟು ಜಾಗವೂ ಕಾಣಿಸುವುದರಿಂದ ಯಾವ ಪ್ರಾಣಿ ಯಾವ ಮೂಲೆಯಿಂದ ಬಂದರೂ ತಿಳಿದುಬಿಡುತ್ತದೆ. ರಾತ್ರಿಯ ವೇಳೆ ‘ಹೂಡಚಲು’ (ಬೆಂಕಿ) ಹಾಕಿಕೊಂಡು ಕಾಡುಮೃಗಗಳಿಂದ ಬೆಳೆ ರಕ್ಷಿಸಿಕೊಳ್ಳುವ ಅನ್ನದಾತನ ‘ಕಾವಲು’ ಗೋಪುರವಾಗಿ (ಬೆಳೆ ಕಾಯುವ ಸೌಧ) ಕೂಡಾ ಈ ಹಕ್ಕೆ ಮನೆ ಬಳಕೆಯಾಗುತ್ತದೆ. ಹಕ್ಲು (ಬಯಲು) ಭತ್ತದ ಗದ್ದೆಗಳು ಸೈಟುಗಳಾಗಿ ಬದಲಾಗುವ ಉಮೇದಿಯಲ್ಲಿರುವ ಈ ಹೊತ್ತಿನಲ್ಲಿ ‘ಹಕ್ಕೆಮನೆ’ ಇನ್ನು ಕೇವಲ ನೆನಪಷ್ಟೇ…!

Leave a Reply