ಮದುವೆ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣ
“ಮದುವೆಯ ಈ ಬಂಧ
ಅನುರಾಗದ ಅನುಬಂಧ…….”
ಚಿತ್ರಗೀತೆಯೊಂದು ರೇಡಿಯೋದಿಂದ ಅಲೆಅಲೆಯಾಗಿ ತೇಲಿ ಬರುತ್ತಿದ್ದರೆ ಮನಸ್ಸಿನಲ್ಲಿ ನೂರೆಂಟು ಮಧುರ ಭಾವನೆಗಳು ಹುಟ್ಟಿ ಮರೆಯಾಗುತ್ತಿದ್ದವು.
ಈಗ ಮದುವೆಗಳ ಕಾಲ, ಹೆಂಗಳೆಯರಲ್ಲಿ ಗಡಿಬಿಡಿ, ಸಂಭ್ರಮ ಹೇಳತೀರಲಾಗದು. ಒಳಗಿಟ್ಟ ರೇಷ್ಮೆಸೀರೆಗಳು ಇತ್ತ ಹೊರಗಿಣುಕುತ್ತವೆ. ಬಂಗಾರದ ಆಭರಣಗಳೆಲ್ಲ ಪೆಟ್ಟಿಗೆಯಿಂದ ಆಚೆ ಬಂದು ಮೈಯನ್ನೆಲ್ಲ ಅಲಂಕರಿಸುತ್ತವೆ. ಎಲ್ಲೆಲ್ಲೂ ಅತ್ತರಿನ ಘಮಲು, ಉತ್ಸಾಹ ಹೇಳತೀರಲಾಗದು, ಮನೆಗೆ ಹಚ್ಚಿದ ಹೊಸ ಪೇಂಟಿನಿಂದ ಅವ್ಯಕ್ತವಾದ ಆನಂದ ಉಂಟಾಗುವುದು. ಕಾಣಿಕೆಗಳ ಖರೀದಿ, ನಾನಾ ನಮೂನೆಯ ತಿಂಡಿಗಳ ತಯಾರಿಕೆ ಒಳ್ಳೇ ಹುರುಪನ್ನುಂಟು ಮಾಡುವಂಥವು.
ಮದುವೆ ಎನ್ನುವುದು ಗಂಡು ಹೆಣ್ಣಿನ ಮಿಲನದ ಪ್ರತೀಕ. ಇಬ್ಬರಲ್ಲೂ ಮಧುರ ಅನುಭೂತಿಯನ್ನುಂಟು ಮಾಡುವಂಥದು. ಎರಡು ಕುಟುಂಬಗಳನ್ನು ಸನಿಹ ತರಿಸಿ ಸಂಬಂಧಗಳನ್ನು ಹೊಸೆಯುವ ಹೊಣೆಯುಳ್ಳದ್ದಾಗಿದೆ. ಆದರೆ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಶೋಚನೀಯವೆನಿಸುವುದು.
ಮದುವೆ ಎನ್ನುವ ವ್ಯವಸ್ಥೆ ನಮ್ಮ ಸಮಾಜದಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಹೊಣೆ ಹೊತ್ತಿದೆ ಎಂದು ಹೇಳಬಹುದು. ಪ್ರತಿಯೊಂದು ಗಂಡಿಗಾಗಲೀ, ಹೆಣ್ಣಿಗಾಗಲೀ ಜೊತೆಯ ಅವಶ್ಯವಿದೆ. ಅದನ್ನು ನಮ್ಮ ಪೂರ್ವಿಕರು ಮದುವೆ ಎನ್ನುವ ಅನುಬಂಧವೇರ್ಪಡಿಸಿ ಇಬ್ಬರನ್ನೂ ಸೇರಿಸುವ ನಂತರ ವಂಶಾಭಿವೃದ್ಧಿಯಾಗುವಂತೆ ನೋಡಿಕೊಂಡಿರುತ್ತಾರೆ. ಅದು ಈಗಲೂ ಚಾಲ್ತಿಯಲ್ಲಿದೆ.
ಆದರೆ ಇಂದು ಶಹರ ಪ್ರದೇಶಗಳಲ್ಲಿ ಪರಿಸ್ಥಿತಿ ಹೇಗಿದೆಯೆಂದರೆ ಹೆಣ್ಣು ಹೊಸ್ತಿಲು ದಾಟಿದ್ದಾಳೆ. ಆರ್ಥಿಕವಾಗಿ ಪ್ರಬಲಳಾಗಿದ್ದಾಳೆ. ಅದರಿಂದ ಅವಳು ಹೊಂದಾಣಿಕೆ ಎಂಬ ಭ್ರಮೆಯಲ್ಲಿ ನರಳದೇ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಂಡಿದ್ದಾಳೆ. ಇಷ್ಟು ದಿನಗಳವರೆವಿಗೂ ವಿದೇಶಿಯರು ನಮ್ಮ ಮದುವೆ ಪದ್ಧತಿಯನ್ನು, ಜೀವನಪರ್ಯಂತ ಏಕಪತ್ನೀ ಅಥವಾ ಏಕಪತೀ ವ್ಯವಸ್ಥೆಯನ್ನು ಆಶ್ಚರ್ಯಚಕಿತರಾಗಿ ನೋಡುತ್ತಿದ್ದರೋ ಇಂದು ನಾವು ವಿದೇಶೀ ಸಂಸ್ಕೃತಿಯನ್ನು ನಮ್ಮದಾಗಿಸಿಕೊಳ್ಳುತ್ತಿದ್ದೇವೆ. ಅಲ್ಲಿ ದಿನಕ್ಕೆ ನೂರಾರು ವಿಚ್ಛೇದನಗಳಾಗುತ್ತವೆ. ಮನೆ ಮನಸ್ಸು ಛಿದ್ರಗೊಂಡಿವೆ. ಪ್ರೇಮದಿಂದ ಇರಬೇಕಾದ ಹೃದಯ ಬಿರುಕು ಮೂಡಿಸಿಕೊಂಡಿದೆ. ಇದೆಲ್ಲದರ ಪರಿಣಾಮ ಭಾವನಾರಹಿತವಾದ ಮಕ್ಕಳು, ಛಿದ್ರ ವಿಚ್ಛಿದ್ರಗೊಂಡ ಮಾನಸಿಕತೆಯನ್ನು ಹೊಂದಿಕೊಳ್ಳುತ್ತಿವೆ. ಇದೆಲ್ಲದರ ಪರಿಣಾಮ ಅಸ್ಥಿರತೆಯ ಸಮಾಜ.
ಮದುವೆ ಎನ್ನುವುದು ಅವಶ್ಯಕವೇ ಎಂಬ ಪ್ರಶ್ನೆ ಇಂದಿನ ಯುವಜನಾಂಗದ ಮುಂದಿದೆ. ಯಾವಾಗ ಬೇಕಾದರೂ ಕೂಡಿ ಇದ್ದು ಬೇಕಾದಾಗ ಪಾರ್ಟನರ್ ಗಳನ್ನು ಬದಲಾಯಿಸುವ ಹೊಸ ವ್ಯವಸ್ಥೆ ಮೆಟ್ರೋ ಸಿಟಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗೇ ಮುಂದುವರೆದರೆ ಮುಂದಿನ ಪೀಳಿಗೆಗೆ ಮದುವೆ ಎನ್ನುವ ವ್ಯವಸ್ಥೆಯ ಬಗ್ಗೆ ವಿವರಿಸಬೇಕಾಗುತ್ತಿದೇನೋ. ಇಬ್ಬರೂ ಕಲಿತವರಾದ್ದರಿಂದ ಸಮಾನತೆ, ಹಕ್ಕುಗಳೆಂಬ ಹಮ್ಮಿನಿಂದ ಮದುವೆಯ ಮಧುರ ಬಂಧದಿಂದ ಮುಕ್ತಿ ಪಡೆದುಕೊಳ್ಳುತ್ತಿರುವ ಜೋಡಿಗಳೆಷ್ಟೋ ಜನರಿದ್ದಾರೆ. ಮೊದಲಿನ ಕಾಲದಲ್ಲಿ ಆದರೆ ಪತಿ ಹೊರಗಡೆ ದುಡಿದು ಬರುತ್ತಿರಬೇಕಾದರೆ ಪತ್ನಿ ಮನೆಯ ಜವಾಬ್ದಾರಿಯನ್ನೆಲ್ಲ ಅಚ್ಚುಕಟ್ಟಾಗಿ ನಿಭಾಯಿಸುವವಳು ಆದರೆ ಇಂದು ಇಬ್ಬರೂ ಹೊರಗೆ ದುಡಿಯುವವರಾದ್ದರಿಂದ ಭಾವ ನಶಿಸಿ ಹೋಗುತ್ತಿದೆ. ಮದುವೆಯ ಉದ್ದೇಶ ಏನು ಎಂಬುದನ್ನು ಅರಿತುಕೊಳ್ಳಬೇಕಾದದ್ದು ಅವಶ್ಯಕವಾಗಿದೆ. ಪರಸ್ಪರ ಅವಲಂಬನೆ, ಹೊಂದಾಣಿಕೆ, ತಿಳುವಳಿಕೆ ಹಾಗೂ ವಿಶಾಲ ಹೃದಯ ಇಬ್ಬರಲ್ಲೂ ಅವಶ್ಯಕವಾಗಿರುತ್ತದೆ. ದಂಪತಿಗಳಾದ ಮೇಲೆ ಮಕ್ಕಳನ್ನು ಹೆರುವುದಷ್ಟೇ ಕೆಲಸವಾಗದೇ ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಅವರಲ್ಲಿ ಬಿಂಬಿಸಬೇಕಾದದ್ದು ಅವಶ್ಯಕವಾಗಿದೆ. ನಾವು ಹಣ ಆಗಲೀ ಮನೆ ಆಗಲೀ ಮಾಡುವುದಾದರೂ ಯಾತಕ್ಕೆ? ಆಫ್ ಕೋರ್ಸ್ ನಮ್ಮ ಮಕ್ಕಳಿಗೇ ಅಲ್ಲವೇ? ಆದರೆ ಮಕ್ಕಳ ಇಂದಿನ ಅವಶ್ಯಕವಾದ ನಾವು ಅವರಿಗೆ ಲಭ್ಯವಾಗದೇ ಒಳಗಿನ ಹೊರಗಿನ ಉಸಿರು ಒಂದು ಮಾಡುತ್ತಾ ದುಡಿದು ಹಣ ಗಳಿಸುವುದರಲ್ಲಿ ಅರ್ಥವಿದೆಯೇ? ಹಾಗಾಗಿ ಆರೋಗ್ಯವಂತ ಸಮಾಜವನ್ನು ರೂಪಿಸುವಲ್ಲಿ ದಂಪತಿಗಳ ಹೊಣೆ ಅಪೂರ್ವಕವಾಗಿದೆ. ಹಾಗೇ ಮದುವೆಗೆ ವಿಶಾಲ ತಳಹದಿಯಿದೆ.