ಕಲ್ಪವೃಕ್ಷದ ಕಲಾಕೃತಿ….!
ಕಲಾತ್ಮಕ ಮನೋಭಾವವಿದ್ದರೆ ಯಾವುದೇ ಚಿಕ್ಕ ಪುಟ್ಟ ವಸ್ತುಗಳಲ್ಲಿಯೂ ಕಲೆ ಅರಳಿಸಬಹುದು. ನಾವು ನಿತ್ಯವೂ ಕಾಣುವ ಎಷ್ಟೋ ಸಾಮಾನ್ಯ ವಸ್ತುಗಳಲ್ಲಿಯೇ ಸುಂದರ ಕಲಾಕೃತಿಯನ್ನು ತಯಾರಿಸಲು ಸಾಧ್ಯವಿದೆ. ಇವುಗಳಲ್ಲಿನ ತೆಂಗಿನ ಗರಿಯೂ ಒಂದು. ಬಹಳ ಹಿಂದಿನಿಂದಲೂ ತೆಂಗಿನ ಉತ್ಪನ್ನಗಳನ್ನು ಬಳಸಿ ಅನೇಕ ಕಲಾಕೃತಿಗಳನ್ನು ತಯಾರಿಸುತ್ತಿದ್ದರು. ಈ ಕಲಾ ಪ್ರಕ್ರಿಯೆಯು ತುಂಬಾ ಸರಳವಾಗಿದ್ದು, ಕಲಾಕಾರರ ನುರಿತ ಕೈಗಳಿಂದ ಅಲಂಕಾರಿಕ ಪರದೆಗಳು, ಬುಟ್ಟುಗಳು, ಟೋಪಿಗಳು, ಬಿಸಣಿಕೆ, ಚಾಪೆ ಹಾಗೂ ಆಟಿಕೆ ಇತ್ಯಾದಿಗಳು ತಯಾರಾಗುತ್ತವೆ. ಈ ಚಿತ್ರದಲ್ಲಿರುವ ಟೋಪಿ ಹಾಗೂ ಬುಟ್ಟಿ ತೆಂಗಿನ ಗರಿಯಿಂದಲೇ ತಯಾರಾಗಿದ್ದು, ವಸ್ತುವಿನ್ಯಾಸದಲ್ಲಿ ಅಚ್ಚು ಕಟ್ಟು ಎದ್ದು ಕಾಣಿಸುತ್ತಿದೆ. ಈ ರೀತಿಯ ನೈಸರ್ಗಿಕ ಉತ್ಪನ್ನಗಳನ್ನು ತಯಾರಿಸಲು ವಿಶೇಷವಾದ ಯಾವ ಉಪಕರಣಗಳೂ ಬೇಡ, ಇದಕ್ಕೆಲ್ಲಾ ಬೇಕಿರುವುದು ಕೊಂಚ ತಾಳ್ಮೆ, ಅದರ ಎರಡು ಪಟ್ಟು ಕ್ರಿಯಾಶೀಲತೆ ಅಷ್ಟೇ. ಮಕ್ಕಳಿಗೆ ಕಲಿಸಲು ಅಥವಾ ಮನರಂಜನೆಯ ಚಟುವಟಿಕೆಯಾಗಿಯೂ ಕೂಡಾ ತೆಂಗಿನ ಗರಿಗಳನ್ನು ‘ಕ್ರಾಫ್ಟ್’ ಸಮಯಕ್ಕೆ ಸೇರಿಸಿಕೊಳ್ಳಬಹುದು. ಯಾವುದೇ ದುಷ್ಪರಿಣಾಮಗಳಿಲ್ಲದ ಆರೋಗ್ಯಕ್ಕೆ ಮಾರಕವಲ್ಲದ ತೆಂಗಿನ ಗರಿಯ ವಸ್ತುಗಳು ನೋಡಲು ಸುಂದರವಾಗಿರುವುದರ ಜೊತೆಗೆ ಪರಿಸರ ಸ್ನೇಹಿಯಾಗಿದೆ.
ಹೊಸ್ಮನೆ ಮುತ್ತು