ರೂಪಕಚಕ್ರವರ್ತಿ ಕುಮಾರವ್ಯಾಸ
“ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿಯುವುದು
ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು…”
ಇದು ಯುಗದ ಕವಿಯೊಬ್ಬ ಜಗದ ಕವಿಯ ಬಗ್ಗೆ ತೆಗೆದ ಉದ್ಗಾರ! ಕುವೆಂಪುರವರ ಈ ಹೇಳಿಕೆಯಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ .. ಕುಮಾರವ್ಯಾಸನ ದೇಶೀ ಸ್ಟೈಲ್ನಲ್ಲಿ ಆ ರೀತಿಯ ಶೌರ್ಯೋಚಿತ ರೂಪಕಗಳದೇ ಸಾಮ್ರಾಜ್ಯ!
ವಾಲ್ಮೀಕಿಯ ರಾಮಾಯಣದ ನಂತರ ಅನೇಕ ರಾಮಾಯಣಗಳನ್ನೂ ಸಂಸ್ಕೃತ, ಹಳೆಗನ್ನಡಗಳಲ್ಲಿ ಅನೇಕ ಕವಿಗಳು ಬರೆದರು. ಆದರೆ ಕುಮಾರವ್ಯಾಸನು ಮಹಾಭಾರತವನ್ನೇ ಆಯ್ದುಕೊಂಡ. ತಾನು ಅದನ್ನು ಆಯ್ದುಕೊಂಡುದಕ್ಕೆ ಕಾರಣವನ್ನೂ ಕುಮಾರವ್ಯಾಸನು ಪೀಠಿಕೆಯಲ್ಲೇ ಹೇಳುತ್ತಾನೆ.
‘ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ
ತಿಂಥಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ’
ಕುಮಾರವ್ಯಾಸನ ಭಾರತವೆಂದೇ ಹೆಸರಾದ ಕರ್ಣಾಟ ಭಾರತ ಕಥಾಮಂಜರಿಯು ವಾಸ್ತವದಲ್ಲಿ ಕೃಷ್ಣ ಕಥೆಯೇ. ಇವನು ಭಕ್ತ ಕವಿ. ಶ್ರೀ ಕೃಷ್ಣನು ಅವತಾರವೆತ್ತಿದುದೇ ಮಾನವಕಲ್ಯಾಣಕ್ಕಾಗಿ ಎಂಬುದು ಕುಮಾರವ್ಯಾಸನ ಅಚಲನಂಬಿಕೆ.
ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕುಮಾರವ್ಯಾಸನ ಮೂಲ ಹೆಸರು ನಾರಾಯಣಪ್ಪ. “ಗದುಗಿನ ನಾರಾಯಣಪ್ಪ” ಎಂದು ಕೂಡ ಈ ನಮ್ಮ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯು ಬರೆದ ಸಂಸ್ಕೃತದ ಮಹಾಭಾರತವನ್ನು ಕನ್ನಡದಲ್ಲಿ ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನು ಎಂಬ ಆತ್ಮೀಯ ಭಾವದಿಂದ ನಾರಣಪ್ಪನು ಕುಮಾರವ್ಯಾಸನಾಗಿದ್ದಾನೆ. ಕುಮಾರವ್ಯಾಸನು ಗದುಗಿನ ವೀರನಾರಾಯಣ ದೇಗುಲದಲ್ಲಿನ ಒಂದು ಕಂಬದ ಅಡಿಯಲ್ಲೇ ಕುಳಿತು ಈ ಮಹಾಭಾರತವನ್ನು ರಚಿಸಿದನಂತೆ. ಅಷ್ಟೇ ಅಲ್ಲದೆ, ಈಗಲೂ ಅದೇ ದೇವಸ್ಥಾನದ ಆವರಣದಲ್ಲಿ ಇರುವ ಬಾವಿಯಲ್ಲಿ ಸ್ನಾನ ಮಾಡಿ, ಒದ್ದೆ ಪಂಜೆಯಲ್ಲಿಯೇ ಬಂದು ರಚಿಸಿದನೆಂದೂ ಹೇಳುತ್ತಾರೆ. ಆ ಒದ್ದೆ ಆರುವ ವರೆಗೂ ಅವನಿಗೆ ಭಾರತವನ್ನು ರಚಿಸುವುದಕ್ಕೆ ನಿರರ್ಗಳ ಸ್ಫೂರ್ತಿ ಹೊಮ್ಮುತ್ತಿತ್ತಂತೆ!
ಕುಮಾರವ್ಯಾಸನ ಕಾಲವು ಸುಮಾರು 15 ನೆಯ ಶತಮಾನ. ‘ಪ್ರಭುಲಿಂಗಲೀಲೆ’ ಬರೆದ ಚಾಮರಸನ ತಂಗಿಯ ಗಂಡನೆಂದೂ, ಇದರ ಪ್ರಕಾರ ಇವನ ಕಾಲ ಸುಮಾರು ೧೪೩೯ ಆಗುತ್ತದೆಂದು ಕವಿಚರಿತಾಕಾರರು ಅಭಿಪ್ರಾಯ ಪಟ್ಟಿದ್ದಾರೆ. ಆದ್ದರಿಂದ ಕುಮಾರವ್ಯಾಸನ ಕಾಲವನ್ನು ಕ್ರಿ.ಶ. ೧೩೫೦-೧೪೦೦ ಎಂದು ವಿದ್ವಾಂಸರು ನಿರ್ಣಯಿಸಿರುತ್ತಾರೆ.
ಇವನು ಹುಟ್ಟಿದುದು ಗದಗಿನ ಕೋಳಿವಾಡವೆಂಬ ಗ್ರಾಮವೆಂದೂ ಅವನ ವಂಶಸ್ಥರು ಈಗಲೂ ಅಲ್ಲಿ ವಾಸಿಸುತ್ತಾರೆಂದೂ ಹೇಳಲಾಗಿದೆ. ಒಟ್ಟಿನಲ್ಲಿ ಕವಿ ನಾರಾಯಣಪ್ಪ ಕೋಳಿವಾಡದ ಶಾನುಭೋಗ. ಗದುಗಿನ ವೀರನಾರಾಯಣ ಇವನ ಆರಾಧ್ಯದೈವ.
ಇವನಿಗೆ ವೇದವ್ಯಾಸ ಮತ್ತು ಅಶ್ವತ್ಥಾಮರ ಅನುಗ್ರಹವಾಗಿತ್ತೆಂದು ಹೇಳಲಾಗುತ್ತದೆ. ಅದಕ್ಕೂ ಕೂಡ ಒಂದು ದಂತಕಥೆಯಿದೆ. ನಾರಣಪ್ಪ ಮೊದಲು ಒಬ್ಬ ಸಾಧಾರಣ ಮನುಷ್ಯ. ಅನಕ್ಷರಸ್ಥನಲ್ಲದಿದ್ದರೂ ಪಂಡಿತನೇನಲ್ಲ. ಅವನು ಓರ್ವ ಕರಣಿಕ. ಆದರೆ ಅವನ ಮನದಲ್ಲಿ ತನ್ನ ಆರಾಧ್ಯ ದೈವ ಶ್ರೀ ಕೃಷ್ಣನ ಬಗೆಗಿನ ಗ್ರಂಥ ರಚನಾಸಕ್ತಿ ಅತೀವವಾಗಿತ್ತು. ಅದನ್ನು ಅರಿತ ವೀರನಾರಣಪ್ಪ ಅವನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ಆಣತಿಯನ್ನಿತ್ತನು. ಅದರಂತೆ ನಾರಣಪ್ಪನು ಹತ್ತಿರದ ಊರಿನಲ್ಲಿ ನಡೆಯುತ್ತಿದ್ದ ಲಕ್ಷ ಬ್ರಾಹ್ಮಣ ಸಂತರ್ಪಣೆಗೆ ಹೋದ. ಅಲ್ಲಿ ಒಬ್ಬ ಹುಡುಗ ಆ ದೊನ್ನೆ ಈ ದೊನ್ನೆ ಎಂದು ಹಟ ಹಿಡಿದಾಗ ಬಡಿಸುವವನೊಬ್ಬ “ನಿನಗೆ ದುರ್ಯೋಧನನಿಗಿಂತಲೂ ಹೆಚ್ಚಿನ ಹಟ” ಎಂದು ಗದರುತ್ತಾನೆ. ಅದನ್ನು ಕೇಳಿದ ಒಬ್ಬ ಬ್ರಾಹ್ಮಣನ ಕಣ್ಣಲ್ಲಿ ನೀರು ಚಿಮ್ಮುತ್ತದೆ. ನಾರಣಪ್ಪನು ಅದನ್ನು ಗಮನಿಸುವುದರೊಂದಿಗೇ ಇವನೇ ಹಿಂದಿನ ದಿನ ತನ್ನ ಕನಸಿನಲ್ಲಿ ಬಂದಿದ್ದವನೆಂದೂ ಗುರುತಿಸಿ ಅವರ ಅವನ ಬೆನ್ನು ಹತ್ತುತ್ತಾನೆ. ಅವನ ಆಣತಿಯಂತೆ ಒದ್ದೆಯುಟ್ಟು ಅದು ಒಣಗುವವರೆಗೂ ಮಹಾಭಾರತದ ರಚನೆ ಮಾಡುತ್ತಾನೆ.
ಕನ್ನಡಸಾಹಿತ್ಯದಲ್ಲಿ ಮೇರುಕೃತಿಯಾಗಿ ಪರಿಗಣಿತವಾಗಿರುವ ಈ ಕನ್ನಡ ಭಾರತವು ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು, ೧೪೭ ಸಂಧಿ, ೭೯೭೧ ಪದ್ಯಗಳನ್ನು ಒಳಗೊಂಡಿದೆ. (ತಿದ್ದುಪಡಿ:೧೫೨ ಸಂಧಿಗಳು, 8244ಪದ್ಯಗಳು) ‘ಕುಮಾರವ್ಯಾಸ ಭಾರತ’ದ ಭಾಷೆ ನಡುಗನ್ನಡ. (ಕುಮಾರವ್ಯಾಸ ಭಾರತ-ಆದಿಪರ್ವ)
ಸಂಪೂರ್ಣ ಕಾವ್ಯವು ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಕಾವ್ಯ ಪ್ರತಿಭೆ ಓದುಗರನ್ನು ದಂಗುಬಡಿಸುತ್ತದೆ. ಅವನ ಕಾವ್ಯಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ಅವನ ರೂಪಕಗಳಲ್ಲಿ. ಕುಮಾರವ್ಯಾಸನ ರೂಪಕಗಳ ವೈವಿಧ್ಯತೆ ಮತ್ತು ಆಳ ಅಪಾರವಾದದ್ದು. ಇದೇ ಕಾರಣಕ್ಕಾಗಿ ಕುಮಾರವ್ಯಾಸನ ಹೆಸರು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದೆ.
“ಬವರವಾದರೆ ಹರನ ವದನಕೆ ಬೆವರ ತಹೆನು” (ಅಭಿಮನ್ಯುವಿನ ವೀರೋಕ್ತಿ!)”ನರಶರದ ಜುಂಜುವೊಳೆಯಲಿ ಜಾರುವನೆ ಜಾಹ್ನವೀಧರ” (ಕಿರಾತಾರ್ಜುನೀಯ ಪ್ರಸಂಗದಲ್ಲಿ)”ಜವನ ಮೀಸೆಯ ಮುರಿದನೋ” (ಉತ್ತರನ ಪೌರುಷದಲ್ಲಿ)”ಅರಿವಿನ ಸೆರಗು ಹಾರಿತು” ಇವೇ ಮೊದಲಾದವು ಅವನ ಶಕ್ತಿಶಾಲಿ ರೂಪಕಗಳಿಗೆ ಉದಾಹರಣೆಗಳು.
ರೂಪಕಗಳೊಂದಿಗೆ ಕುಮಾರವ್ಯಾಸನ ಇನ್ನೊಂದು ಸಾಮರ್ಥ್ಯ ಮಾನವಪ್ರಕೃತಿಯ ವರ್ಣನೆ. ಕುಮಾರವ್ಯಾಸನ ಪಾತ್ರಗಳು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟ. ಶ್ರೀ ಕೃಷ್ಣನ ವರ್ಣನೆ ಅವನ ಕಾವ್ಯರಚನೆಯ ಮೂಲೋದ್ದೇಶಗಳಲ್ಲಿ ಒಂದು. (“ತಿಳಿಯ ಹೇಳುವೆ ಕೃಷ್ಣ ಕಥೆಯನು”) ಅವನ ಮಹಾಭಾರತ ಕಥೆ ಕೃಷ್ಣನ ಸುತ್ತಲೂ ಸುತ್ತುತ್ತದೆ. ಕುಮಾರವ್ಯಾಸ ಕೃಷ್ಣನ ಭಕ್ತ. ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಹತ್ತರ (ಗದಾಪರ್ವ) ವರೆಗೆ. ಬರೆದು ದುರ್ಯೋಧನನ ಅವಸಾನದ ನಂತರ, ಕುಮಾರವ್ಯಾಸನು ಮುಂದೆ ಸಂಕ್ಷಿಪ್ತವಾಗಿ, ಶ್ರೀಕೃಷ್ಣನು ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿಸಿ ದ್ವಾರಕೆಗೆ ಹಿಂದಿರುಗುವವರೆಗೆ ಬರೆದಿದ್ದಾನೆ.
ಒಟ್ಟಾರೆ ಹೇಳಬೇಕೆಂದರೆ ಕುಮಾರವ್ಯಾಸನು ಕನ್ನಡ ಸಾಹಿತ್ಯದ ಮೇರುಕವಿ, ಕಾಳಿದಾಸನ ಸಮಸಮಕ್ಕೆ ನಿಲ್ಲುವ ಕವಿ ಎಂದೇ ಹೇಳಬಹುದು.
ನಮೋನ್ನಮಃ ಕುಮಾರವ್ಯಾಸ!