ಗೆಳತಿಗೆ ತಂಗಿಯ ಸಾವು ದಿಕ್ಕೆಟ್ಟಿಸಿತ್ತು. ಸುಮಾರು ಎರಡು ವರ್ಷಗಳಿಂದಲೂ ಕಿಡ್ನಿ ಫೆಲ್ಯೂರ್ ಆಗಿ ಡಯಾಲಿಸಿಸ್ ಮೇಲಿದ್ದ ತಂಗಿ ಅಕ್ಷರಶಃ ಕೊನೆ ಕೊನೆಗೆ ನರಕ ಯಾತನೆಯನ್ನನುಭವಿಸಿ ಮರಣವನ್ನಪ್ಪಿದಳು.
ಅದೇನು ಅಂಥ ಸಾಯುವ ವಯಸ್ಸಲ್ಲ ಆಕೆಯದು. ಆಕೆಗೆ ಆಗ ಕೇವಲ ಐವತ್ತೆರಡರ ಹರೆಯ. ಇಂಥ ಅವೇಳೆಯಲ್ಲಿ ಅನಾರೋಗ್ಯ ಆಕೆಯನ್ನು ಪೀಡಿಸಿತ್ತು, ಕಂಗೆಡಿಸಿತ್ತು. ಆಕೆಯ ಜೀವನದಲ್ಲಿ ಜರುಗಿದ ಕಹಿ ಪ್ರಸಂಗಗಳು ಅಗಾಧ. ಹದಿನೈದರ ಹರೆಯದ ಮುದ್ದು ಮುಗ್ಧ ಮಗ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ್ದ. ತಾಯ ಹೃದಯದ ದುಃಖ ಆರುವ ಮುನ್ನವೇ ಅಂದರೆ ಒಂದು ವರ್ಷದಲ್ಲಿಯೇ ಆಕೆ ಪತಿಯನ್ನು ಕಳೆದುಕೊಂಡಿದ್ದಳು. ಕೆರೂರಿನಲ್ಲಿ ಪ್ರಸಿದ್ಧ ಡಾಕ್ಟರರಾಗಿದ್ದ ಅವರು ಸಾಕಷ್ಟು ಪರೋಪಕಾರವನ್ನು ಮಾಡಿದ್ದರು. ಅವರ ಹೆಸರಿನಲ್ಲಿ ಸ್ಕೂಲು ತೆಗೆಯಲು ಗಿರಿಜಾ ಹಿರೇಮಠ (ಗೆಳತಿಯ ತಂಗಿ) ಅವರು ಸುಮಾರು ೨೦ ಗುಂಟೆಯಷ್ಟು ಜಾಗವನ್ನು ಹೆಸರಾಂತ ಸಂಸ್ಥೆಗೆ ನೀಡಿದ್ದಳಂತೆ. ಸುಮಾರು ಇಪ್ಪತ್ತು ಲಕ್ಷದ ಮೇಲೆಯೇ ಆಗ ಅದರ ಬೆಲೆಯಾಗುತ್ತಿತ್ತಂತೆ. ಆದರೆ ಗಿರಿಜಾ ಅವರು ಅದೇ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೆಣಗುತ್ತಿದ್ದಾಗ ಯಾರೂ ಕೂಡ ಔಪಚಾರಿಕವಾಗಿಯಾದರೂ ಕೂಡ ಅವಳನ್ನು ಮಾತನಾಡಿಸಲಿಲ್ಲ. ಅಷ್ಟೇ ಅಲ್ಲ, ಸತ್ತ ಮೇಲೂ ಆಕೆಯಿಂದ ಎಲ್ಲ ಬಿಲ್ಲನ್ನೂ ವಸೂಲಿ ಮಾಡಿಯೇ ಬಾಡಿಯನ್ನು ನೀಡಿದರು. ಇಂಥ ಅಮಾನವೀಯತೆಯು ಅಕ್ಷಮ್ಯವಾದದ್ದು. ನಿಜವಾಗಿಯೂ ತೆಗೆದುಕೊಳ್ಳುವಾಗಿನ ಖುಷಿ ಕೊಡುವುದರಲ್ಲಿಯೂ ಮೆರೆಯಬೇಕಲ್ಲವೇ? ಯಾರ್ಯಾರು ದಾನ ಮಾಡಿರುತ್ತಾರೋ ಅಟಲಿಸ್ಟ್ ಅವರನ್ನಾದರೂ ಸ್ಮರಿಸಬೇಕಾದದ್ದು ಆ ಸಂಸ್ಥೆಯ ಧರ್ಮವಲ್ಲವೇ? ಅದೇ ದುಡ್ಡನ್ನು ಆಕೆ ಯಾರಾದರೂ ಬಡವನಿಗೆ ನೀಡಿದ್ದರೇ… ಕಣ್ಣಿಲ್ಲದವನಿಗೆ ಕಣ್ಣು ಬರಿಸಿದ್ದರೆ… ಇಡೀ ಜೀವನಮೂರ್ತಿ ನೆನೆಸಿ ತುತ್ತು ಉಣ್ಣುತ್ತಿದ್ದರಲ್ಲವೇ? ಅದಕ್ಕೆ ಹೇಳುವುದು ಅಪಾತ್ರ ದಾನ ಯಾವತ್ತಿದ್ದರೂ ಸಲ್ಲದು ಎಂದು. ಇರಲಿ, ಸಾವು ಎಲ್ಲರಿಗೂ ಒಂದಿಲ್ಲ ಒಂದಿನ ಬರುವಂಥದ್ದೇ. ‘ಜಾತಸ್ಯ ಹೀ ಮರಣಂ ಧ್ರುವಂ’ ಎಂಬ ಮಾತು ಸತ್ಯವಾದದ್ದು. ಆದರೂ ಕೂಡ ನಾವೆಲ್ಲರೂ ಒಂದು ಪುಟ್ಟ ವಸ್ತುವಿನಿಂದ ದೊಡ್ಡ ವಸ್ತುವಿನವರೆಗೂ ಎಷ್ಟೊಂದು ಅಟ್ಯಾಚ್ ಮೆಂಟ್ ಬೆಳೆಸಿಕೊಂಡಿರುತ್ತೇವೆಂದರೆ, ಆ ವಸ್ತುಗಳನ್ನು ನಾವು ಕೊನೆಯವರೆಗೂ ತಮ್ಮದನ್ನಾಗಿಸಲು ಹೆಣಗಾಡುತ್ತೇವೆ. ಅಲ್ಲದೇ ಅದಕ್ಕಾಗಿ ಜಗಳ, ಮನಸ್ತಾಪ, ಪರಸ್ಪರ ದ್ವೇಷಾಸೂಯೆಗಳು ಹೊತ್ತಿ ಉರಿಯುತ್ತವೆ. ಇದೆಲ್ಲ ನೀರ ಮೇಲಣದ ಗುಳ್ಳೆ ಎಂಬುದು ಅರಿವಿಗೇ ಬರುವುದಿಲ್ಲ. ಬಂದರೂ ಅಲ್ಲಿಯ ಅಹಂ ನಮ್ಮನ್ನು ಬಿಟ್ಟುಕೊಳ್ಳಲೂ ಬಿಡುವುದಿಲ್ಲ.
ಸಾವು ಎಂದರೆ ಏನು? ಅದು ಯಾಕೆ ಬರುತ್ತದೆ? ಅದರ ನಂತರ ಏನು? ಇತ್ಯಾದಿಗಳಿಗೆ ಉತ್ತರ ವಿಜ್ಞಾನ ಕೂಡ ಕೊಡಲಾರದು. ನಮ್ಮ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಸ್ಪಷ್ಟವಾಗಿಯೇ ಹೇಳಿದ್ದಾನೆ. ಸಾವು ಎನ್ನುವುದು ಕೇವಲ ಬಟ್ಟೆಯನ್ನು ಬದಲಾಯಿಸಿದಂತೆ, ದೇಹವನ್ನು ಬದಲಾಯಿಸುವುದು. ಆತ್ಮ ನಶ್ವರವಾದದ್ದು. ನಮ್ಮ ಕರ್ಮಗಳಿಗನುಸಾರವಾಗಿ ನಾವು ವಿವಿಧ ಯೋನಿಗಳಲ್ಲಿ ಜನ್ಮ ತಾಳುತ್ತೇವೆ. ಮತ್ತೆ ಜೀವನಚಕ್ರ ಪ್ರಾರಂಭ. ಆದರೆ ಸಾವಿನಿಂದ ನಮಗೆ ದುಃಖ ಉಂಟಾಗುತ್ತದೆ. ವ್ಯಾಕುಲತೆ ಉಂಟಾಗುತ್ತದೆ. ಯಾಕೆ? ಯಾಕೆಂದರೆ ನಾವು ಅವರೊಂದಿಗೆ ಬೆಳೆಸಿಕೊಂಡ ಅಟ್ಯಾಚ್ ಮೆಂಟ್, ಆತ್ಮೀಯ ಭಾವ ಹಾಗೆ ವರ್ತಿಸುವಂತೆ ಮಾಡುತ್ತದೆ. ಸೋ, ಅದೇ ಭಾವ ಜಗತ್ತು ನಮಗೆ ದುಃಖ ಎನ್ನುವುದನ್ನು ಕಡಿಮೆಗೊಳಿಸಬಹುದೇ ಅಥವಾ ಈ ಸಾವು ಎನ್ನುವುದು ಕೂಡ ನಮ್ಮ ನಡಾವಳಿಗೆ ಎಚ್ಚರಿಕೆಯ ಘಂಟೆಯೂ ಆಗಿರಬಹುದಲ್ಲ. ‘ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ’ ಎಂದೆನ್ನುವಾಗ ಮನಸ್ಸು ಒಳಿತನ್ನೂ ಕೆಡುಕನ್ನೂ ಒಂದೇ ರೀತಿ ನೋಡುತ್ತದೆಯೇನೋ ಅಥವಾ ಮನಸ್ಸು ವಿಶಾಲವಾಗಿ ಎಂಥ ಪ್ರಸಂಗವೇ ಬಂದರೂ ಎದುರಿಸುವ ಸ್ಥೈರ್ಯ ಮೂಡುತ್ತದೆಯೇನೋ….