ಬದುಕಿಗೆ ಭಗವದ್ಗೀತೆ – ಕರ್ಮಯೋಗಕ್ಕೆ ಕೃಷ್ಣನದೇ ನಿದರ್ಶನ
‘ಜ್ಞಾನಿಯು ಸುಕೃತ-ದುಷ್ಕೃತಗಳ ತನ್ನ ಬುತ್ತಿಯನ್ನು ಇಲ್ಲೇ ಅನುಭವಿಸಿ ಇಲ್ಲಿಯೇ ಬಿಟ್ಟು ಅಂತರ್ಮುಖನಾಗುತ್ತಾನೆ, ಮತ್ತೆಮತ್ತೆ ಸಂಕಲ್ಪಗಳ ಜನ್ಮಚಕ್ರಕ್ಕೆ ಸಿಲುಕುವುದಿಲ್ಲ, ಹೀಗೆ ಕರ್ಮಕೌಶಲದ ಮೂಲಕ ಜ್ಞಾನಿಯು ‘ಯೋಗ’ವನ್ನು ಪಡೆಯುತ್ತಾನೆ’ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದ.
ನಿಜಕ್ಕೂ ತಾನು ಮಾಡಿದ್ದರ ಫಲವೆಲ್ಲವನ್ನೂ ಹೀಗೆ, ಇಲ್ಲೇ ಬಿಡುವುದು ಸಾಧ್ಯವೆ? ಎಂದು ನಮಗನಿಸಬಹುದು. ‘ಇದು ಸಾಧ್ಯ, ಇದೇ ಸಾಧನವಾಗಬೇಕು’ ಎನ್ನುವುದನ್ನು ಮನಮುಟ್ಟಿಸುವುದಕ್ಕಾಗಿಯೇ ನಮ್ಮ ಪುರಾಣ-ಕಾವ್ಯೇತಿಹಾಸಗಳು ಅನೇಕಾನೇಕ ಉದಾಹರಣೆಗಳನ್ನು ನಮ್ಮ ಮುಂದಿಡುತ್ತ ಬಂದಿವೆ.
ಸ್ವಲ್ಪ ಕಣ್ದೆರೆದು ನೋಡಿದರೆ, ನಮ್ಮ ಈ ಭವ್ಯನಾಡಿನಲ್ಲಿ ಯುಗಯುಗದಲ್ಲೂ, ಹಳ್ಳಿಹಳ್ಳಿಯಲ್ಲೂ, ಕರ್ಮಕೌಶಲದ ಮೂಲಕ ಯೋಗವನ್ನೇರಿದ ಮಹಾನ್ನರನಾರಿಯರ ಜ್ವಲಂತ ಉದಾಹರಣೆಗಳು ಕಾಣಬರುತ್ತವೆ. ಅವರವರ ಕ್ಷೇತ್ರದಲ್ಲಿ ಅಪಾರ ಯಶಸ್ಸನ್ನು ಸಾಧಿಸಿಯೂ, ನಿರ್ಲಿಪ್ತ-ಬದುಕನ್ನು ನಡೆಸಿ, ತಮ್ಮ ಪುಣ್ಯ ಸುಕೃತವನ್ನು ಜಗಜನರಿಗೆ ಹಂಚಿಹೋದ ಮಹಾತ್ಮರ ಅಸಂಖ್ಯ ವೃತ್ತಾಂತಗಳಿಂದ ತುಂಬಿದೆ ನಮ್ಮ ನಾಡು!
ಜನಹಿತಕ್ಕಾಗಿ ತಮ್ಮ ತನುಮನಧನಗಳನ್ನೆಲ್ಲ ಧಾರೆಯೆರೆದು ಯೋಗದಲ್ಲೇ ಸ್ಥಿತರಾದಂತಹ ಪೃಥು-ಹರಿಶ್ಚಂದ್ರ-ರಾಮ-ರಿಷಭದೇವ-ಜನಕ-ಅನಸೂಯಾ-ಅದಿತಿಯರೇ ಮೊದಲಾದ ಪೌರಾಣಿಕ ಉದಾಹರಣೆಗಳು ಬೇಕೆ? ರಾಜಕೀಯ ಇತಿಹಾಸದಲ್ಲಿ ಅಭೂತಪೂರ್ವ ಪರಿವರ್ತನೆಗೇ ಕಾರಣೀಭೂತರಾಗಿದ್ದೂ, ರಾಜರುಗಳನ್ನೂ ರಾಜ್ಯಗಳನ್ನೂ ನಿರ್ಮಿಸಿದ ಅಪ್ರತಿಮ ಮೇಧಾವಿಗಳಾಗಿದ್ದೂ, ತಾವೂ ಮಾತ್ರ ಸಿಂಹಾಸನವನ್ನೇರದೇ, ಸರಳ-ವಿರಕ್ತ ತಾಪಸೀ ವೃತ್ತಿಯಲ್ಲೇ ನೆಲೆ ನಿಂತ ಚಾಣಕ್ಯ, ವಿದ್ಯಾರಣ್ಯಾದಿಗಳ ಐತಿಹಾಸಿಕ ಉದಾಹರಣೆಗಳು ಬೇಕೆ? ಇನ್ನು ಸಂತರೂ, ಹರಿದಾಸರೂ, ಶಿವಶರಣರೂ, ಹಳ್ಳಿಹಳ್ಳಿಯ ಅಸಂಖ್ಯ ದಾಸಯ್ಯರುಗಳೂ, ತಮ್ಮ ಕಾಯಕ ವೃತ್ತಿ ಹಾಗೂ ನಿಃಸ್ವಾರ್ಥ ಸೇವೆಗಳ ಮೂಲಕ ಜನರನ್ನೂ ಜನಾರ್ದನನನ್ನೂ ಸೇವೆಗೈಯುವಲ್ಲಿಯೇ ತಮ್ಮ ಸರ್ವಸ್ವವನ್ನೂ ಧಾರೆಯೆರೆದ ಉದಾಹರಣೆಗಳಿಗೆ ನಮ್ಮ ನಾಡಿನಲ್ಲಿ ಕೊನೆ ಮೊದಲೇ ಇಲ್ಲ!
ನಾಡರಕ್ಷಣೆಗಾಗಿ ವೀರಾವೇಶದಿಂದ ಹೋರಾಡಿ, ಮೃತ್ಯುವಿನೊಂದಿಗೆ ಸೆಣಸಾಡಿದ ನೂರಾರು ವೀರನರನಾರಿಯರು ಬಹಿರಂಗದ ಸಂಘರ್ಷದ ನಡುವೆಯೂ ಅಂತರಂಗದ ಯೋಗದಲ್ಲಿ ಶಾಂತಿಯಲ್ಲಿ ನೆಲೆ ನಿಂತ ಉದಾಹರಣೆಗಳಿಗೂ ನಮ್ಮ ಇತಿಹಾಸದಲ್ಲಿ ಕೊರತೆಯಿಲ್ಲ.
ಸ್ವತಃ ಶ್ರೀಕೃಷ್ಣನದ್ದೇ ಅನುಪಮ ನಿದರ್ಶನ ನಮ್ಮ ಮುಂದಿದೆಯಲ್ಲ! ತನ್ನ ಭವ್ಯ ಸುಂದರ ವ್ಯಕ್ತಿತ್ವದ ವರ್ಚಸ್ಸನ್ನು ಆತ ‘ತನಗಾಗಿ’ ಬಳಸಿದ್ದೇ ಇಲ್ಲ! ಅವನು ತನ್ನೆಲ್ಲವನ್ನೂ ಸರ್ವಜೀವರ ಹಿತಕ್ಕಾಗಿ ಬಳಸಿದ ಸಾಟಿಯಿಲ್ಲದ ಕರ್ಮಯೋಗಿ! ಸುಖ-ದುಖ-ಲಾಭಾಲಾಭಗಳಲ್ಲಿ ಆತ ತೋರಿದ ಸಮಚಿತ್ತತೆ ಆತನ ಸ್ಥಿತಪ್ರಜ್ಞತ್ವಕ್ಕೆ ಪ್ರಮಾಣವಾಗಿದೆ.
ರಾಜಕುಮಾರನಾಗಿ ಹುಟ್ಟಿಯೂ ದನಕಾಯಬೇಕಾಗಿ ಬಂದಾಗಲೂ ಆತನ ಮುಖದ ನಗುವು ಬಾಡಿದ್ದೇ ಇಲ್ಲ! ರಾಜಭೋಗಗಳಿಂದ ವಂಚಿತನಾದಾಗಲೂ, ಗೊಲ್ಲರ ಹಟ್ಟಿಯಲ್ಲೇ ಸಗ್ಗವನ್ನು ಕಂಡುಕೊಂಡ! ಗೋವಳರಿತ್ತ ತಂಗಳನ್ನವನ್ನೇ ರಾಜಭೋಗ್ಯ ಮೃಷ್ಟಾನ್ನವೆಂದು ಸವಿದ! ತನ್ನ ಪಾಲಿಗೆ ಬಂದ ದನಕಾಯುವ ಕೆಲಸವನ್ನೂ ಪವಿತ್ರ ಕರ್ತವ್ಯವೆಂದೇ ಆಸ್ಥೆಯಿಂದ ನಿರ್ವಹಿಸಿದ! ಗೊಲ್ಲಗೊಲ್ಲತಿಯರನ್ನೂ ಹಸು-ಕರು-ನವಿಲುಗಳನ್ನೂ ತನ್ನ ಸಾಮ್ರಾಜ್ಯವನಾಗಿಸಿಕೊಂಡು ಪ್ರೀತಿಸಿದ. ಗೋಪಿಯರ ಮುಗ್ಧಜಲ್ಪನವೂ, ಮುನಿ ಮಹಾತ್ಮರ ತತ್ವದೆತ್ತರದ ಚರ್ಚೆಗಳೂ ಆತನಲ್ಲಿ ಸಮವಾದ ಆದರವನ್ನು ಪಡೆದವು! ಶತ್ರುಕಾಟವೂ ಮೃತ್ಯುಗಂಡವೂ ಹುಟ್ಟಿದಾಗಿನಿಂದಲೂ ಅವನನ್ನು ಬೆಂಬಿಡದೆ ಕಾಡಿದರೂ ಆತ ಅಂಜಲಿಲ್ಲ, ಛಲಬಲಗಳಿಂದ ಎದುರಿಸಿ ಗೆದ್ದ! ರಾಜ್ಯವೇ ಕಾಲಿಗೇ ಬಂದು ಬಿದ್ದರೂ ಸಿಂಹಾಸನವನ್ನು ಬಿಟ್ಟು ಕೊಟ್ಟ! ತಾನು ಯಾವ ಸ್ತ್ರೀಯನ್ನು ಬಯಸಿ ಹೋಗಲಿಲ್ಲವಾದರೂ, ತನ್ನನ್ನೇ ಬಯಸಿ ಬಂದ ಕುಲವಧುಗಳನ್ನು ನಿರಾಶೆಗೊಳಿಸದೇ ಕೈಹಿಡಿದು ಆದರಿಸಿದ. ನರಕಾಸುರನ ಸೆರೆಯಲ್ಲಿ ತನು-ಮನ-ಧನ-ಮಾನಗಳೆಲ್ಲವನ್ನೂ ಕಳೆದುಕೊಂಡಿದ್ದ ಹದಿನಾರು ಸಾವಿರ ಸಂತ್ರಸ್ತೆಯರನ್ನು, ಸಮಾಜದ ಅಪಹಾಸ್ಯವನ್ನು ಲಕ್ಷಿಸದೇ, ಕೈಹಿಡಿದ; ಅವರನ್ನೂ ಅವರ ಮಕ್ಕಳನ್ನೂ ನೆಲೆಗಾಣಿಸಿದ. ತನ್ನ ಪ್ರಜೆಗಳೇ, ಶಮಂತಕ ಮಣಿಯ ವಿಷಯದಲ್ಲಿ ತನ್ನನ್ನು ಸಂಶಯಿಸಿದಾಗಲೂ ಖಿನ್ನನಾಗದೆ, ಶ್ರಮಿಸಿ ತನಗಂಟಿದ ಅಪವಾದವನ್ನು ತೊಳೆದುಕೊಂಡ. ಬಿಡುವಿಲ್ಲದ ರಾಜ್ಯಭಾರಗಳ ನಡುವೆಯೂ ಸಂತ್ರಸ್ತರನ್ನು ಹುಡುಕಿಕೊಂಡು ಹೋಗಿ ರಕ್ಷಿಸಿದ. ಧನ-ಕನಕ-ಸಮ್ಮಾನ-ಬಿರುದು-ಸತ್ಕಾರಗಳಿಂದ ತನ್ನನ್ನು ಕೊಂಡುಕೊಳ್ಳಲು ಯತ್ನಿಸಿದ ಯಾವ ದುರಾತ್ಮರಿಗೂ ಆತ ದಕ್ಕಲಿಲ್ಲ! ಸೇನಾಬಲ-ಐಶ್ವರ್ಯ-ಅಧಿಕಾರಗಳಿಂದ ಅಪ್ರತಿಮರೆನಿಸಿದ ಕೌರವರ ಪರ ನಿಲ್ಲಲಿಲ್ಲ- ಅವರು ಅಧರ್ಮಿಗಳೆಂಬ ಒಂದೇ ಕಾರಣಕ್ಕಾಗಿ. ರಾಜ-ಸುಖ-ಸಂಪದಗಳೆಲ್ಲವನ್ನೂ ಕಳೆದುಕೊಂಡಿದ್ದರೂ, ಧರ್ಮದಲ್ಲಿ ನಡೆದರೆಂಬ ಒಂದೇ ಕಾರಣಕ್ಕಾಗಿ ಕೃಷ್ಣನು ಪಾಂಡವರ ಪಕ್ಷದಲ್ಲೇ ನಿಂತ! ಕುರುಕ್ಷೇತ್ರದ ಯುದ್ಧದಲ್ಲಿ ಪಾಂಡವರ ಪಾಲಿಗೆ ಗಗನ ಕುಸುಮವೋ ಎಂಬಂತಿದ್ದ ಗೆಲುವನ್ನು ಸರ್ವೋಪಾಯಗಳ ಮೂಲಕ ದಕ್ಕಿಸಿಕೊಟ್ಟ, ಧರ್ಮವನ್ನು ಮೆರೆಸಿದ! ಮದಾಂಧರಾದ ತನ್ನ ಸ್ವಂತ ಮಕ್ಕಳು-ಮೊಮ್ಮಕ್ಕಳೂ ತಮ್ಮ ನೀಚ ವರ್ತನೆಯಿಂದ ಮುನಿಶಾಪಕ್ಕೊಳಪಟ್ಟಾಗ, ಅವರನ್ನು ’ತನ್ನ ಮಕ್ಕಳು’ ಎಂಬ ಮಮಕಾರದಿಂದ ರಕ್ಷಿಸಲು ಮುಂದಾಗಲಿಲ್ಲ! ಇಂತಹ ನಿರ್ಲಿಪ್ತಿ ಹಾಗೂ ಧರ್ಮವರಿತ ಪ್ರೇಮವೇ ಕೃಷ್ಣನಿಂದ ಲೋಕೋತ್ತರ ಕಾರ್ಯಗಳನ್ನು ಮಾಡಿಸಿತು! ಎಲ್ಲದರ ನಡುವೆ ಇದ್ದೂ ತನ್ನಾತ್ಮದಲ್ಲೇ ತಾನು ನೆಲೆ ನಿಂತಿದ್ದ ಯೋಗೇಶ್ವರನಾದ ಶ್ರೀಕೃಷ್ಣನ ನಿರ್ಲಿಪ್ತಿಯೇ ಆತನ ಬಲ, ಆತನ ಕರ್ಮಸಾಫಲ್ಯದ ಗುಟ್ಟು! ಅವನ ಆ ನಿರ್ಲಿಪ್ತ ಬದುಕಿನ ಪಾಕವೇ ಅವನ ಶ್ರೀಮುಖದಿಂದ ಗೀತಾಸಾರವಾಗಿ ಹರಿದು ಮಾನವಮತಿಯನ್ನು ಯುಗಯುಗಗಳಿಂದಲೂ ಪಾವನಗೊಳಿಸುತ್ತಿದೆ, ಶಾಂತವೂ ಶಕ್ತವೂ ಆಗಿಸುತ್ತಿದೆ! ಕೃಷ್ಣನ ಜೀವನ ಸಂದೇಶಗಳ ಪರಾಗಸ್ಪರ್ಶದಿಂದ ನಮ್ಮ ಜೀವನ ಕುಸುಮಗಳೂ ಯೋಗಮುಖವಾಗುವ ಸಾಮರ್ಥ್ಯವನ್ನು ಪಡೆಯುವಂತಾಗಲಿ!
ಡಾ ಆರತಿ ವಿ ಬಿ
ಕೃಪೆ : ವಿಜಯವಾಣಿ