‘ವಿಧೇಯ’ ವಿವಿ ವಿಧೇಯಕ
ನಮ್ಮ ರಾಜ್ಯದಲ್ಲಿ ಹೊಸದಾಗಿ ವಿಶ್ವವಿದ್ಯಾನಿಲಯಗಳ ಕಾನೂನು ಯಾವುದೇ ಚರ್ಚೆಯಿಲ್ಲದೇ, ಎರಡೂ ಜವಾಬುದಾರಿಯುತವಾದ ವಿರೋಧ ಪಕ್ಷಗಳು ಬಹಿಷ್ಕಾರ ಹಾಕಿ ಹೊರನಡೆದಾಗ, ಇಂತಹ ಕಾನೂನು ಬೇರೆ ರಾಜ್ಯದಲ್ಲಿ ಇರದೇ ಇರುವಾಗ, ಮುಂಚಿತವಾದ ಯಾವುದೇ ಚರ್ಚೆಗಳಲ್ಲದೇ ಧ್ವನಿ ಮತದಿಂದ ಸ್ವೀಕೃತವಾಯಿತು. ಹಿಡಿದ ಹಠ ಸಾಧಿಸಿದೆ ಎಂದು ಕೆಲವರು ಬೀಗಿದರು ಇನ್ನೂ ಕೆಲವರು ಈ ವಿಧೇಯಕ ನಮ್ಮ ಪಕ್ಷದ್ದು ಅಂತ ಆ ಫ್ರೀಡಮ್ ಪಾರ್ಕನಲ್ಲಿ ಕುಳಿತವರೆಲ್ಲರೂ ಒಕ್ಕೊರಲಿನಿಂದ ಕೂಗುವ ಹಾಗೆ ಧ್ವನಿಮತ ನೀಡಿದರು. ಯಾವ ಕುಲಪತಿಗಳು ಹುದ್ದೆಯ ಭಿಡೆಯಿಂದ ಶಾಂತ ಮುದ್ರೆಯಿಂದ ಕೂತರು. ಆಹಾರ ಸಂಸ್ಕೃತಿಯ ಬಗ್ಗೆ ಬಡಬಡಿಸುವ, ದಲಿತರು ಮುಖ್ಯಮಂತ್ರಿಗಳು ಆಗಲೇಬಾರದು ಎನ್ನುವರು. ತಮಗೊಂದು ಯು.ಜಿ.ಸಿ. ವೇತನ ಶ್ರೇಣಿ ಸಿಕ್ಕರೆ ಸಾಕು ಅನ್ನುವ ಯುವ ಜನತೆ ಇಂತವರ ಮಧ್ಯೆ ಎಂಥಹ ವಿಧೇಯಕಗಳು ಪಾಸಾಗುವ ಬೌದ್ಧಿಕ ಜಡತ್ವ ತುಂಬಿದ ಸನ್ನಿವೇಶ ಈಗ ನಮಗೆ ಹೊಸತಲ್ಲ. ಇಲ್ಲಿಯವರೆಗೆ ನಮ್ಮ ವಿಶ್ವವಿದ್ಯಾಲುಗಳು ಹೇಗಿದ್ದವು. ಈಗ ಕಳೆದ 10-15 ವರ್ಷಗಳಲ್ಲಿ ಕಾಂಚನ ಮೃಗದ ಬೆನ್ನು ಹತ್ತಿ ಕಾಡಿನಲ್ಲಿ ಅದೃಶ್ಯನಾದ ರಾಮನಂತೆ ಕುಲಪತಿಗಳು ಅಂತರ್ಧಾನವಾಗಿದ್ದರೇ, ಕ್ವಾಲಿಟಿ ಅನ್ನುವ ಸೀತೆಯನ್ನು ರಾವಣನಮತವರು ರಾಜಕೀಯ ವ್ಯವಸ್ಥೆಯಲ್ಲಿ ಎತ್ತಿಕೊಂಡು ಹೋಗಿ ಅಶೋಕ ವನದಲ್ಲಿ ನನ್ನ ಮಾತು ಕೇಳು, ನನ್ನ ಮದುವೆಯಾಗು ಅಂತ ಹಠ ಹಿಡಿದ ಹಾಗೆ Qualityಯ ಪ್ರಶ್ನೆ. ಯಾಕೆ ರಾವಣ ಸೀತೆಯನ್ನು ಎತ್ತಿಕೊಂಡು ಹೋದ ಅನ್ನುವ ಪ್ರಶ್ನೆ ಈಗ ಈ ವಿಧೇಯಕ/ಕಾನೂನು ಅವಶ್ಯಕತೆ ಯಾಕೆ ಬಂತು ಅಂತ.
ವಿಶ್ವವಿದ್ಯಾನಿಲಯಗಳಲ್ಲಿ ಗುಣಮಟ್ಟ ಕಡಿಮೆಯಾಗಿದೆ. ಕುಲಪತಿಗಳಿಂದ ಹಿಡಿದು ವಿದ್ಯಾರ್ಥಿಗಳವರೆಗೆ ಆಂತರಿಕ ಸೌಲಭ್ಯಗಳಿಂದ ಹಿಡಿದು, ಸಂಶೋಧನ ಸೌಲಭ್ಯಗಳವರೆಗೆ ವಿದ್ಯಾರ್ಥಿಗಳ ಪ್ರವೇಶದಿಂದ ಹಿಡಿದು, ಸಿಬ್ಬಂದಿ ನೇಮಕಾತಿವರೆಗೆ ಜಾಗತಿಕ ರ್ಯಾಂಕಿಂಗ್ನಿಂದ ಹಿಡಿದು ವಿದ್ಯಾರ್ಥಿಗಳ ಪ್ಲೇಸ್ಮೆಂಟನವರೆಗೆ ಆದಾಯ ತರುವ ಪ್ರವೇಶ ಫೀಯಿಂದ ಕೊಡುವ ವೇತನ ವೆಚ್ಚದವರೆಗೂ ಎಲ್ಲವೂ ಅದ್ವಾನವಾಗಿರುವಾಗ, ಈ ಒಮ್ಮಿಂದೊಮ್ಮಲೆ ಸುಧಾರಣೆಯ ಪರ್ವವಾಗಿ ಎಲ್ಲವೂ ಸಮರೋಪಾದಿಯಲ್ಲಿ ನಡೆಯುತ್ತಿರುವದು ಚುನಾವಣೆ ಸಮೀಪಿಸುತ್ತಿರುವಾಗ ಅನ್ನುವದು, ಕಾಕತಾಳೀಯವಾದರೂ ಅದೂ ಸತ್ಯವೇ ಸರಿ.
‘ಸ್ವಾಯುತ್ತತೆ’ Autonomy ಅನ್ನುವದು ಮರೀಚಿಕೆಯ ಹಾಗಿದೆ. ಅಟೋನಮಿ ಅಂದರೇನು? ಒಂದು ರೀತಿಯ ಡ್ರೈವಿಂಗ್ ಲೈಸೆನ್ಸ್ ಒಂದು ರೀತಿ ಮದುವೆಯಾಗಿ ಸ್ವತಂತ್ರವಿರುವ ಸಂದರ್ಭದಲ್ಲಿ ಅತ್ತೆ ಮಾವ ಅವ್ವ ಅಪ್ಪ ಎಲ್ಲರೂ ಮಕ್ಕಳ ವೈವಾಹಿಕ ಜೀವನದಲ್ಲಿ ಮೂಗು ಹಾಕುವದು ಎಷ್ಟರ ಮಟ್ಟಿಗೆ ಸ್ವಾತಂತ್ರ್ಯವನ್ನು ಕಸಿದುಕೊಡು ಹಾಗೆ ಸ್ವಾಯುತ್ತತೆ ಕಸಿದು ಕೊಳ್ಳುವದು. ಸ್ವತಂತ್ರವಾದ ಸಂಸ್ಥಾನಗಳಲ್ಲಿ ಅದನ್ನು ಮಾಡಬಾರದು ಇದನ್ನು ಮಾಡಬಾರದು ಅಂತಾ ಬ್ರಿಟಿಷ್ ಸರ್ಕಾರ ಹೇರಿದ ಹಾಗೆ ಸ್ವತಂತ್ರ ಭಾರತದಲ್ಲಿ ನಮ್ಮ ಸರ್ಕಾರಗಳೇ ಯಾವದೋ ನೆಪ ಹಿಡಿದುಕೊಂಡು ಚಿಕ್ಕಪುಟ್ಟ, ವಿದ್ವತ್ ಸಂಸ್ಥಾನಗಳ ಮೇಲೆ ಇಲ್ಲದ ಕಾನೂನು ಮಾಡಿದ ಹಾಗೆ. ನಮ್ಮ ದೇಶದಲ್ಲಿ ಅಟಾನಮಿ ಅಂದರೆ ಸ್ವಾಯುತ್ತತೆಗೆ ಅರ್ಥವಿಲ್ಲದ ಹಾಗೆಯೆ. IITಗಳಲ್ಲಿ, NITಗಳಲ್ಲಿ, ISROಗಳಲ್ಲಿ ಹೇಗೆ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪಗಳಿಲ್ಲವೊ ಹಾಗೆ ಅಟಾನಮಿ ಕೂಡಾ ವಿಶ್ವವಿದ್ಯಾನಿಲಯಗಳಿಗೆ ಅನ್ವಯಿಸಬೇಕು. ಇಂದು ವಿಶ್ವಮಟ್ಟಕ್ಕೆ ಬಂದಾಗ ಅಲ್ಲಿ ಯಾವ ಮುಖ್ಯಮಂತ್ರಿ, ಶಾಸಕ, ಸಂಸದ ಪರವೇಶ, ಆಡಳಿತ ಹಸ್ತಕ್ಷೇಪ ಮಾಡಲು ಬರುವದಿಲ್ಲ. ನಿರೀಕ್ಷಿತ ಮಟ್ಟ ಬರದಿದ್ರೆ ಅದರದೇ ಆದ ಮಾರ್ಗಸೂಚಿ ಸಂವಿಧಾನ ಪ್ರಕಾರ ಮಾಡಬಹುದಾಗಿದೆ. ಅಧಿಕಾರಸ್ಥರು ಯಾವಾಗಲೂ ಅಧಿಕಾರ ಬಿಟ್ಟು ಕೊಡುವದಿಲ್ಲ. ಕೆಳಗಿನವರನ್ನು ಅಧಿಕಾರ ಹಸ್ತಾಂತರಕ್ಕೂ ತಯಾರು ಮಾಡುವುದಿಲ್ಲ. ಅವರ ಪ್ರಕಾರ ಒಳ್ಳೆಯವರು ಸಿಗುವದೇ ಇಲ್ಲ. Trial error ಮಾಡಲೂ ಸಿದ್ಧರಿರುವದಿಲ್ಲ. ಇದು ಸಂಸ್ಥೆ, ಕಚೇರಿ ಮನೆ ಯಾವದಕ್ಕೂ ಅನ್ವಯಿಸುತ್ತದೆ. ಅದರಲ್ಲಿ ಪರೋಕ್ಷ ಅಥವಾ ಅಪರೋಕ್ಷವಾಗಿ ಧನ ಲಾಭವಿದ್ದರಂತೂ ಮುಗಿದುಹೋಯಿತು. ಇನ್ನೂ ಕೆಲವರಿಗೆ ಎಲ್ಲವೂ ಸಾಯುವ ತನಕ ತಮ್ಮ ಕೈಯಲ್ಲಿರಬೇಕು. ಅವರಿಗೆ ವಾನಪ್ರಸ್ಥಾಶ್ರಮವಿರುವದೇ ಇಲ್ಲ.
ಇನ್ನೂ ಕೇಂದ್ರ ಸರ್ಕಾರದಲ್ಲಿ ಉನ್ನತ ಶಿಕ್ಷಣದ ಬಗ್ಗೆನೇ ಹಲವು ಗೊಂದಲಗಳು ಇವೆ. UGC/AICTE ಹೀಗೆ ಹಳೇಯ ಕಾಲದ ಚೌಕಟ್ಟಿನಲ್ಲಿ ಬೇರೂರಿದ ಹಲವು ಸಂಸ್ಥೆಗಳನ್ನು ಏನು ಮಾಡುವದು. ಜಾಗತಿಕ ಸವಾಲಿನ ದಾರಿಯಲ್ಲಿ ದಿಟ್ಟ, ನೇರವಾದ ವ್ಯವಸ್ಥೆಯನ್ನು ಹೇಗೆ ರೂಪಿಸುವದು ಅನ್ನುವ ಗೊಂದಲದ ಪರಿಸ್ಥಿತಿಯಲ್ಲಿ ದೇಶದ ಒಂದು ಭಾಗವಾದ ರಾಜ್ಯಕ್ಕೆ ಎಲ್ಲ ಸುಧಾರಣೆ ತನಗೆ ಬಂದಂತೆ ಮಾಡುವ ತರಾತುರಿ ಯಾಕೆ ಅನ್ನುವ ಪ್ರಶ್ನೆ. ರಾಜ್ಯದಲ್ಲಿ ಬರುತ್ತಿರುವ ಚುನಾವಣೆಗಳು ಹಾಗೂ 1 ಕೋಟಿಗೂ ಮೀರಿ ವೆಚ್ಚದ ಕಟ್ಟಡಗಳು ಎಲ್ಲವೂ ತಮ್ಮ ಸುಪರ್ದಿಗೆ ಬಂದಾಗ ಕೆಲವಾದರೂ ವ್ಯಕ್ತಿಗಳಿಗೆ, ಪಕ್ಷಕ್ಕೆ ಮತ ಕ್ರೋಡಿಕರಣಕ್ಕೆ ಅನುಕೂಲವಾಗುವದು ಬೇಡವಾದ ಸತ್ಯ. ಇಲ್ಲಿ ಯಾಕೆ ಮಾತು ಬರುತ್ತದೆ ಅಂದರೆ, ಎಷ್ಟು ಸರ್ಕಾರಿ ಕಾಲೇಜುಗಳಿಗೆ, ಕಟ್ಟಡಗಳು ಬೇಗ ತಯಾರಾಗುತ್ತವೆ. ಆದರೆ ಮುಖ್ಯವಾಗಿ ಬೇಕಾಗುವ ಪ್ರಾಧ್ಯಾಪಕರು, ಉಪಕರಣಗಳು, ಆಂತರಿಕ ಸೌಲಭ್ಯಗಳೇ ಇರುವದಿಲ್ಲ. ಫೀ ಕಡಿಮೆ ಆದರೆ ಟ್ಯೂಶನ್ ಖರ್ಚು ಹೆಚ್ಚು ಅನ್ನುವ ಹಾಗೆ ಒಂದು ಚುನಾವಣೆ ಅವಧಿಯಲ್ಲಿ ಕಟ್ಟಡ ರೆಡಿಯಾಗಿ ಬಿಡುತ್ತದೆ. ನಾಲ್ಕು ಚುನಾವಣೆಯಾದರೂ ಪೂರ್ತಿ ಪ್ರಾಧ್ಯಾಪಕರು, ಆಂತರಿಕ ಸೌಲಭ್ಯ ಬರುವದೇ ಇಲ್ಲ. ಇದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಏನೂ ಇಲ್ಲದೇ, ಬ್ಯಾಚ್ ಮೇಲೆ ಬ್ಯಾಚ್ ಪಾಸಾಗಿ ಹೋಗುತ್ತವೆ. ಬರೀ ವಿಧಾನಸಭೆಯಲ್ಲಿ ಪಾಸಾದರೇ, ವಿಧೇಯಕ ಸ್ವೀಕೃತವಾಗುವದಿಲ್ಲ. ಎರಡೂ ಸಭೆ ಪಾಸು ಮಾಡಿದರೂ ರಾಜ್ಯಪಾಲರು ಸಹಿ ಮಾಡದೇ ಮತ್ತೆ ಚರ್ಚೆ ಮಾಡಿ ಅಂತಾ ಕಳುಹಿಸಬಹುದು. ಅಷ್ಟರಲ್ಲಿ ಕೇಂದ್ರ ಸರ್ಕಾರ ಹೊಸದಾದ ಕಾನೂನು, ಉನ್ನತ ಶಿಕ್ಷಣ ಪಾಲಿಸಿ ನೀಡಬಹುದು.
ನಮ್ಮ ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಮಟ್ಟ ಹೆಚ್ಚಿನ ಪಾಲು ಅಲ್ಲಿರುವ ತಜ್ಞ ಪ್ರಾಧ್ಯಾಪಕರ ಮೇಲೆ ನಿಂತಿರುತ್ತದೆ. ಅವರ ಗುಣಮಟ್ಟವೇ ಸಂಶೋಧನೆಯ ಗುಣಮಟ್ಟವನ್ನು ಹೇಳುತ್ತದೆ. ಎಷ್ಟು ಸಮಾಜಮುಖಿ ಮತ್ತು ಜನಮುಖಿ, ವಾಣಿಜ್ಯಾತ್ಮಕ ಸಂಶೋಧನೆಗಳಾಗಿವೆ? ಎಷ್ಟು ಪೇಟೆಂಟ್ ಎಷ್ಟು ಪೋಸ್ಟ್ ಡಾಕ್ಟರಲ್ ಸಂಶೋಧನೆ ನಡೆದಿವೆ ಅನ್ನುವದೇ ಇನ್ನೊಂದು ಯಕ್ಷ ಪ್ರಶ್ನೆ. ಒಳ್ಳೆಯಗುಣಮಟ್ಟವೆಂದರೇ ಕನಿಷ್ಟ ಪಕ್ಷ ನಮ್ಮದೇ ದೇಶದ IITಅಥವಾ IISC ಯಷ್ಟಾದರೂ ಇರಬೇಕಾಗಿತ್ತು. ಅದು ಯಾಕೆ ಆಗಿಲ್ಲ? ಆ ಇನ್ಸ್ಟಿಟ್ಯೂಟ್ಗಳಲ್ಲಿ ಇರದ ರಾಜಕೀಯ ಹಸ್ತಕ್ಷೇಪ ಇರುವದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ವಿಶ್ವವಿದ್ಯಾನಿಲಯಗಳು ಜಾಗತಿಕ ಮಟ್ಟಕ್ಕೆ ಬರಲು ಸಾಧ್ಯವಿಲ್ಲ. ಕುಲಪತಿಗಳಿಗೆ ಅರ್ಹತೆಗಳು ಇರಬೇಕೆಂದರೆ ಕನಿಷ್ಟವಾಗಿಯೂ, ಸರಕಾರದ ಮುಖ್ಯಮಂತ್ರಿಗಳು, ಶಿಕ್ಷಣ ಮಂತ್ರಿಗಳ ಅಂತಹವೇ ಅರ್ಹತೆಗಳು ಇರಲೇಬೇಕಾದುದು ಅನಿವಾರ್ಯವಲ್ಲವೇ? ಲಾರ್ಡ ಮೆಕಾಲೆಯವರು 1835ರಲ್ಲಿ ಬ್ರಿಟಿಶ್ ಸರಕಾರಕ್ಕೆ ಈಸ್ಟ್ ಇಂಡಿಯಾ ಕಂಪನಿಗೆ ಬೇಕಾಗುವ ಕಾರಕಾನ ಶಾಹಿಯನ್ನು ತಯಾರು ಮಾಡುವದಕ್ಕಾಗಿ ಹಾಕಿಕೊಂಡ ಪದ್ಧತಿಯ ಉತ್ಪನ್ನಗಳಾದ ತಾವು ಸ್ವತಃ ಬುದ್ಧಿಯಿಂದ ನಮ್ಮ ವ್ಯವಸ್ಥೆ ನಮಗಾಗಿ, ಮುಕ್ತವಾಗಿ ಹೇಗಿರಬೇಕೆಂದು ವಿಚಾರ ಮಾಡಲು, ಅಭಿವ್ಯಕ್ತಿಗೊಳಿಸಲು ಸಹಾಯಕಾರಿ ಆಗಿರುತ್ತಿತ್ತೊ ಏನೊ? ಅದೆಲ್ಲ ಇರದ ಕಾರಣವೆನೆಂದರೆ, ವಸಾಹತುಶಾಹಿ ನಮ್ಮನ್ನು ಬಿಟ್ಟರು ನಾವು ವಸಾಹತು ಶಾಹಿಯನ್ನು ಬಿಟ್ಟಿಲ್ಲ. ಅದೇ ಪರಂಪರೆ, ನಾವು ಹೇಳಿದ ಹಾಗೆ ಕೇಳಬೇಕು. ಸಂಸ್ಥನಿಕರೆಲ್ಲ ಬ್ರಿಟಿಶ್ ವೈಸರಾಯಗೆ ಕಾಣಿಕೆ ಸಲ್ಲಿಸಬೇಕು. ಏನು ಸ್ವಾತಂತ್ರ್ಯ ಕ್ರಾಂತಿ ಆದರೇನಾಯಿತು? ಕೊಡುವದು ಕೂಡಲೇ ಬೇಕು. ಕಟ್ಟುವದನ್ನು ಕಟ್ಟಲೇಬೇಕು. ವಿಚಾರಕ್ಕೊಂದು ಬಂಧನ. ಕ್ರಿಯೆಗೂ ಬಂಧನ, ಚಂದ್ರಶೇಖರ ಕಂಬಾರ ನಾಟಕ.
ಕೃಪೆ : ಸಂಯುಕ್ತ ಕರ್ನಾಟಕ