ಬದುಕಿಗೆ ಭಗವದ್ಗೀತೆ – ಕ್ಷಣಿಕ ಅಭಿವ್ಯಕ್ತಿಯನ್ನು ನೆಚ್ಚಿ ಶೋಕಿಸುವುದೇಕೆ?
ಆತ್ಮಕ್ಕಂತೂ ಹುಟ್ಟಿಲ್ಲ ಸಾವಿಲ್ಲ. ಮೂರ್ತಪ್ರಪಂಚದಲ್ಲಿ ಹುಟ್ಟು-ಸಾವುಗಳು ಅನಿವಾರ್ಯ. ಹಾಗಾಗಿ ಎರಡು ದೃಷ್ಟಿಗಳಿಂದ ಪರಿಗಣಿಸಿದರೂ, ‘ಶೋಕವು ಅನಗತ್ಯ’ ಎಂದು ಕೃಷ್ಣನು ಪಾರ್ಥನಿಗೆ ಮನಗಾಣಿಸುತ್ತಿದ್ದುದನ್ನು ನೋಡಿದ್ದೇವೆ. ಕೃಷ್ಣನು ಮುಂದುವರೆಸುತ್ತಾನೆ-
ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ I ಅವ್ಯಕ್ತನಿಧನಾನ್ಯೇವ ತತ್ರ ಕಾ ಪರಿವೇದನ II (ಭ, ೨, ೨೮)
-(ಜೀವಿಗಳು) ಹಿಂದೆ ಅವ್ಯಕ್ತವಾಗಿಯೇ ಇದ್ದವು, ಮುಂದೆ ನಿಧನದೊಂದಿಗೆ ಅವ್ಯಕ್ತವೇ ಆಗುತ್ತವೆ, ಮಧ್ಯದಲ್ಲಿ ಮಾತ್ರ ವ್ಯಕ್ತವಾಗಿವೆ, ಈ ವಿಷಯವಾಗಿ ವೇದನಯೇಕೆ?
ಸತ್ಯ-ಜ್ಞಾನ-ಆನಂದಮಯವಾದ ಆತ್ಮವಸ್ತುವೊಂದೇ ನಿತ್ಯವೂ ‘ಇದ್ದದ್ದು’, ‘ಇರುವುದು’ ಹಾಗೂ ‘ಮುಂದೆಯೂ ಇರಲಿರುವುದು’. ಭೂ-ಜಲ-ಅಗ್ನಿ-ವಾಯು-ಆಕಾಶತತ್ವಗಳಿಂದ ನಿರ್ಮಿತವಾದ ಭೌತಿಕ-ಪ್ರಪಂಚದ ಎಲ್ಲರೂ ಎಲ್ಲವೂ ಸೃಷ್ಟಿಯಾಗುವ ಮುನ್ನ ‘ಅವ್ಯಕ್ತ’ವಾಗಿದ್ದವು. ಈಗ ಹುಟ್ಟಿಬಂದು ‘ವ್ಯಕ್ತ’ವೆನಿಸಿವೆ. ಮುಂದೆ ಸಾವು/ಪ್ರಲಯಗಳೆಂಬ ಪ್ರಕ್ರಿಯೆಗಳಲ್ಲಿ ಸಿಲುಕಿ ಮತ್ತೆ ‘ಅವ್ಯಕ್ತ’ದಲ್ಲಿ ಲಯವಾಗಿಹೋಗುತ್ತವೆ. ಹೀಗೆ ‘ಹಿಂದೆ ಅವ್ಯಕ್ತವಾಗಿದ್ದ’ ಹಾಗೂ ಮುಂದೆಯೂ ಅವ್ಯಕ್ತವೇ ಆಗಿ ಉಳಿಯಲಿರುವ ಭೂತಗಳು ಮಧ್ಯದಲ್ಲಿ ತಾತ್ಕಾಲಿಕ ಅಸ್ತಿತ್ವ ಪಡೆದಿವೆ ಅಷ್ಟೆ. ಹಾಗಿರುವಾಗ ಸ್ವರೂಪತಃ ‘ತಾತ್ಕಾಲಿಕ’ವೆನಿಸಿರುವಂತಹದ್ದು ‘ಶಾಶ್ವತವಾಗಿ ಇರುತ್ತಿಲ್ಲ’ ಎಂದು ಗೋಳಿಡುವುದು ಹಾಸ್ಯಾಸ್ಪದವಲ್ಲವೆ? ನೀರಿನ ಮೇಲೆದ್ದ ನೀರ್ಗುಳ್ಳೆ ಕೆಲಕಾಲವಿದ್ದು ತೇಲಾಡಿ ಕಂಗಳಿಗೆ ಮುದವಿತ್ತು, ಯಾವುದೋ ಕ್ಷಣದಲ್ಲಿ ‘ಪಟ್‘ ಎಂದು ಒಡೆದು ಮಾಯವಾಗುತ್ತದೆ. ಅದು ಮಾಯವಾಯಿತೆಂದು ಅಳಲುವುದು ಬಾಲಬುದ್ಧಿಯೆನಿಸುತ್ತದೆ. ಮೂರ್ತಪ್ರಪಂಚದಲ್ಲಿ ಕಾಣಬರುವ ಎಲ್ಲವೂ ಒಂದಲ್ಲ ಒಂದು ರೂಪದಲ್ಲಿ ಬದಲಾಗುವುದು/ನಾಶವಾಗುವುದು ಅನಿವಾರ್ಯ. ಅದರ ಬಗ್ಗೆ ತುಂಬ ಆತಂಕಪಡದೆ, ಅಂಗೀಕಾರಭಾವವಿದ್ದಲ್ಲಿ ಸಹಜವಾಗಿಯೇ ಮನೋಬುದ್ಧಿಗಳು ಸ್ಥಿಮಿತವನ್ನು ಕಳೆದುಕೊಳ್ಳುವುದಿಲ್ಲ, ಎನ್ನುವುದು ಕೃಷ್ಣನ ಮಾತಿನ ಇಂಗಿತ.
ಹೀಗೆ, ‘ಭೌತಿಕಜೀವನದ ಕ್ಷಣಿಕತೆಯನ್ನು ಅಂಗೀಕರಿಸಿ, ಮೀರಿನಿಲ್ಲುವ, ಜಯಿಸುವ ಮನೋಭಾವವನ್ನೇ ಪುಷ್ಟೀಕರಿಸುತ್ತದೆ ದಾಸವರೇಣ್ಯ ಪುರಂದರದಾಸರ ಹಾಡಿನ ಈ ಸಾಲುಗಳು-
ಪಕ್ಷೀ ಅಂಗಳದಲ್ಲಿ ಬಂದು ಕೂತಂತೆ ಆ ಕ್ಷಣದಲ್ಲಿ ಹಾರೀ ಪೋದಂತೆ I ಹಾಂಗೇ ಇರಬೇಕು ಸಂಸಾರದಲ್ಲಿ—
ಮಕ್ಕಳು ಆಡಿ ಮನೆಕಟ್ಟಿದಂತೆ ಆಟಸಾಕೆಂದು ಅಳಿಸಿಪೋದಂತೆ I ಹಾಂಗೇ ಇರಬೇಕು ಸಂಸಾರದಲ್ಲಿ—-
ವಸತಿಕಾರನು ವಸತಿ ಕಂದಂತೆ ಹೊತ್ತಾರೆದ್ದು ಹೊರಟುಹೋದಂತೆI ಹಾಂಗೇ ಇರಬೇಕು ಸಂಸಾರದಲ್ಲಿ—-
ನಾನಾ ಪರಿಯಲಿ ಸಂತೇ ನೆರೆದಂತೆ ನಾನಾ ಪಂಥವ ಹಿಡಿದುಪೋದಂತೆ I ಹಾಂಗೇ ಇರಬೇಕು ಸಂಸಾರದಲ್ಲಿ—-
ಇಲ್ಲಿ ಒಂದು ಮೀಮಾಂಸೆ ಅಗತ್ಯ. ‘ಹೀಗೆಲ್ಲ ‘ಜಗತ್ತನ್ನು ‘ಅನಿತ್ಯ’ ಎಂದು ಬಗೆದರೆ, ನಾವು ಅದರಲ್ಲಿ ಬದುಕುವ ಉತ್ಸಾಹವನ್ನು ಕಳೆದುಕೊಳ್ಳುತ್ತೇವೆ, ನಿರಾಶಾವಾದಿಗಳಾಗುತ್ತೇವೆ’ ಎನ್ನುವ ವಾದ ಕೇಳಿಬರುತ್ತದೆ. ಇದೊಂದು ತಪ್ಪು ಕಲ್ಪನೆ. ಅಥವಾ ಗೊಂದಲದ ದೃಷ್ಟಿಕೋನ. ವಿಚಿತ್ರವೆನಿಸಿದರೂ ಸತ್ಯಸಂಗತಿಯೇನು ಗೊತ್ತೆ? ಯಾರು ಜಗತ್ತನ್ನು ಅನಿತ್ಯವೆಂದು ಅರ್ಥಮಾಡಿಕೊಳ್ಳುತ್ತಾರೋ, ಅವರು ಮಾತ್ರ ಈ ಜಗತ್ತಿನಲ್ಲಿ ಪ್ರಸನ್ನಚಿತ್ತರಾಗಿ ಚಾತುರ್ಯದಿಂದ ಬಾಳಬಲ್ಲರು!. ಮೋಹವಿಲ್ಲದ್ದರಿಂದ ಇವರು ಯಾವುದನ್ನೂ ’ಪಡೆದೆ’ ಎಂದು ಹಿಗ್ಗುವುದಿಲ್ಲ, ‘ಕಳೆದುಕೊಂಡೆ’ ಎಂದು ಕುಗ್ಗುವುದಿಲ್ಲ. ಸುಖದುಃಖಗಳನ್ನು ಸಕಾರಾತ್ಮಕ-ದೃಷ್ಟಿಕೋನದಿಂದ ಅಂಗೀಕರಿಸಿ ಶಾಂತಾರಾಗಿರುತ್ತಾರೆ. ಹಾಗಾಗಿ ಅವರ ಮನಸ್ಸು ಕುಗ್ಗದು, ಬುದ್ಧಿ ದಿಙ್ಮೂಢವಾಗದು. ಇದರಿಂದಾಗಿ ಅವರ ಕರ್ಮನೈಪುಣ್ಯ ವರ್ಧಿಸಿ, ಜೀವನ ಸಾಫಲ್ಯವೂ ದಕ್ಕುತ್ತದೆ. ’ಜೀವನವೆಂಬ ‘ಸಮುದ್ರ’ದಲ್ಲಿ ಅಲೆಗಳ ಏಳು-ಬೀಳುಗಳು ಅನಿವಾರ್ಯ! ಚಂಡಮಾರುತವೇ ಬೀಸಿದರೂ ಆಶ್ಚರ್ಯವಿಲ್ಲ! ದ್ವೀಪವೋ ದೋಣಿಯೋ ಆಸರೆಗೆ ಸಿಗಬಹುದು, ಸಿಗದೇ ಇರಬಹುದು! ಅಂತೂ ಇಲ್ಲಿರುವ ತನಕ ಈಜುವುದಂತೂ ತಪ್ಪದು’ ಎನ್ನುವ ‘ಅಂಗೀಕಾರ’ವಿರುತ್ತದಲ್ಲ, ಅದೇ ಅವರ ಬಲ! ಅದರಿಂದಾಗಿ ಅವರಲ್ಲಿ ಸ್ಥೈರ್ಯವೂ ನಿಶ್ಚಲಮತಿಯೂ ಸಮಷ್ಟಿದೃಷ್ಟಿಯವೂ ಬಲಿಯುತ್ತವೆ.
ಹಲವು ಮಹಾತ್ಮರ ಜೀವನೋದಾಹರಣೆಗಳನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ಅವರೆಲ್ಲ ಜೀವನದ ಅನಿತ್ಯಸ್ವರೂಪವನ್ನು ಮನಗಂಡವರು. ಜನಧನದ ಸಂಗದಲ್ಲಿದ್ದರೂ ಅಂಟದೇ ಮನುಕುಲದ ಹಿತವನ್ನು ಸಾಧಿಸಿದವರು. ಲೋಕದ ಬಗ್ಗೆ ವ್ಯಾಮೋಹ-ನಿರೀಕ್ಷೆ’ಗಳಿರಲಿಲ್ಲ, ಸುಖದುಃಖಗಳ ಬಗ್ಗೆ ಭಾವುಕತೆಯಿರಲಿಲ್ಲ. ವಿರಕ್ತರಾರಾಗಿರುತ್ತಲೇ ಲೋಕವನ್ನು ಪ್ರೀತಿಸಿ ಸೇವೆಗೈದರು. ಅಂತಹವರ ಸತ್ಸಂಗದಿಂದ ಅದೆಷ್ಟು ಜನರಿಗೆ ಶಾಂತಿ ಹಾಗೂ ಬೆಳಕು ಸಿಕ್ಕವು! ಇಂತಹವರ ಜೀವನವೇ ಅಲ್ಲವೆ ನಿಜವಾದ ‘ಜೀವನ’?! ಈ ನಿರ್ಲಿಪ್ತಿಯ ನೆಲೆಯ ವಿಶ್ವಾತ್ಮ ಭಾವವೆಲ್ಲಿ? ಜುಗುಪ್ಸಾ-ಭೀತಿ-ದ್ವೇಷಗಳಿಂದ ಹುಟ್ಟುವ ನಿರಾಶಾವಾದವೆಲ್ಲಿ? ಅಜಗಜಾಂತರ!!
ಆತ್ಮತತ್ವ ಹಾಗೂ ಭೌತಿಕತತ್ವಗಳ ನಿತ್ಯಾನಿತ್ಯಸ್ವರೂಪಗಳ ಅರಿವಿನಿಂದ ಮಾತ್ರ ನಿರ್ಲಿಪ್ತಿ ಮೂಡಲು ಸಾಧ್ಯ.
ಅಂತಹ ವಿವೇಕವನ್ನು ಮೂಡಿಸಲೆಂದೇ ಕೃಷ್ಣನು ಭೌತಿಕ ಪ್ರಪಂಚದ ‘ತಾತ್ಕಾಲಿಕ ವ್ಯಕ್ತಾವಸ್ಥೆ’ಯ ಬಗ್ಗೆ ಅರ್ಜುನನಿಗೆ ಈ ಶ್ಲೋಕದಲ್ಲಿ ವಿವರಿಸುತ್ತಿದ್ದಾನೆ.
ತತ್ವದ ನೆಲೆಯಲ್ಲಿ ನಿಂತು ನೋಡಿದರೇ ಆತ್ಮಸ್ವರೂಪಕ್ಕೆ ನಾಶವೇ ಇಲ್ಲ. ಹಾಗಾಗಿ ದುಃಖಕ್ಕೆ ಕಾರಣವೇ ಇರದು. ಭೌತಿಕ ಜಗತ್ತಿನ ಸ್ವರೂಪವನ್ನೇ ಪರಿಗಣಿಸಿ ನೋಡುವುದಾದರೆ, ಅದು ಸ್ವಭಾವತಃ ತಾತ್ಕಾಲಿಕವಾದದ್ದು. ಅಲ್ಲಿನ ಎಲ್ಲ ವಿವರಗಳೂ ಕಾಲಾಂತರದಲ್ಲಿ ಅವ್ಯಕ್ತದಲ್ಲಿ ಲಯವಾಗಿ ಹೋಗಿಬಿಡುವಂತಹದ್ದು. ಇದು ಅನಿವಾರ್ಯವೆಂದಮೇಲೆ ಅಳಲುವುದು ಅರ್ಥಹೀನ- ಹೀಗೆ ಎರಡು ದೃಷ್ಟಿಕೋನಗಳನ್ನು ಮುಂದಿಡುತ್ತಾನೆ ಶ್ರೀಕೃಷ್ಣ. ಈ ಎರಡೂ ದೃಷ್ಟಿಗಳಿಂದಲೂ ಭಾವುಕತೆ, ಧರ್ಮ ದಿಙ್ಮೂಢತೆಗಳು ಸರ್ವಥಾ ವರ್ಜ್ಯ ಎನ್ನುವುದನ್ನು ಅರ್ಜುನನಿಗೆ ಅರ್ಥಪಡಿಸುತ್ತಿದ್ದಾನೆ.
ಡಾ. ಆರತಿ ವಿ ಬಿ
ಕೃಪೆ : ವಿಜಯವಾಣಿ