ಜಲವರ್ತಮಾನ ಮತ್ತು ನಾಳಿನ ಭವಿಷ್ಯ/ ಮಾಧ್ಯಮ ಮಾತುಕತೆ
ರಾಜ್ಯದಲ್ಲಿ ಜಲಜಾಗೃತಿಗೆ ದುಡಿದ ಜಲ ಪತ್ರಕರ್ತರು, ಕೃಷಿಕರು, ಜಲಸಂರಕ್ಷಕರನ್ನು ಒಂದೆಡೆ ಸೇರಿಸಿ ‘ ಜಲ ವರ್ತಮಾನ ಹಾಗೂ ನಾಳಿನ ಭವಿಷ್ಯ’ ಕುರಿತು ವಾಟರ್ ಅಡಿಟ್ ಮಾದರಿಯಲ್ಲಿ ಮಾಧ್ಯಮ ಮಾತುಕತೆ ವಿಶೇಷ ಕಾರ್ಯಕ್ರಮ 2015ರ ಅಕ್ಟೋಬರ್ 3 ಶನಿವಾರ, 4 ರವಿವಾರ ಉತ್ತರ ಕನ್ನಡದ ಕಳವೆಯ ಕಾನ್ಮನೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ರಾಜ್ಯದ 28 ಪ್ರಮುಖ ಜಲ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕರ್ನಾಟಕ ತೀವ್ರ ಬರ ಎದುರಿಸುತ್ತಿದೆ, ಜಲಕ್ಷಾಮ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಮಳೆ ನೀರನ್ನು ಸಂರಕ್ಷಿಸುವ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಸಾಧ್ಯವೆಂದು ವಿಕೇಂದ್ರೀಕೃತ ಮಾದರಿಯಲ್ಲಿ ನಾವು ಜಲಜಾಗೃತಿ, ಸಂರಕ್ಷಣೆಯಲ್ಲಿ ಕಳೆದ 1996ರಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆ, ನೀರಿನ ಬಳಕೆ ಹೆಚ್ಚಳದಿಂದ ಸಮಸ್ಯೆ ಬೆಳೆದಿದೆ. ಕೋಲಾರದ ಕೆಲವು ಊರುಗಳಲ್ಲಿ ಕುಟುಂಬಕ್ಕೆ ದಿನಕ್ಕೆ ಐದು ಬಿಂದಿಗೆ ನೀರು ದೊರೆಯದ ಸ್ಥಿತಿಯಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಹೇಗೆ? ಎಲ್ಲರನ್ನು ಎಚ್ಚರಿಸುವ ಕೆಲಸ ನಡೆಯಬೇಕಿದೆ. ರಚನಾತ್ಮಕ ಕಾರ್ಯವನ್ನು ಪ್ರೋತ್ಸಾಹಿಸುವ ಮಾಧ್ಯಮ ಜಾಲ ಬೆಳೆಸುವ ನಮ್ಮ ಪುಟ್ಟ ಪ್ರಯತ್ನವಿದು. ರಾಜ್ಯದ ಜಲಕ್ಷಾಮದ ಹಿನ್ನಲೆಯಲ್ಲಿ ಸಂರಕ್ಷಣೆಯ ಜಾಗೃತಿಯ ಅವಲೋಕನ ನಡೆಸಲು ಕಾರ್ಯಕ್ರಮ ಏರ್ಪಡಿಸಿದ್ದಾರೆ ಹಿರಿಯ ಕೃಷಿ, ಪರಿಸರ ಬರೆಹಗಾರ ಶಿವಾನಂದ ಕಳವೆ.
ಎಲ್ಲರೂ ಈಗ ನೀರಿನಿಂದಲೇ ಮಾತು ಆರಂಭಿಸುತ್ತಾರೆ, ಜಲ ಸಂಕಟ ವಿವರಿಸಲು ಮುಂದಾಗುತ್ತಾರೆ. ನೀರು ಭೂಮಿಯಲ್ಲಿ ಬೇಕಾದಷ್ಟಿದೆಯೆಂದು ನಂಬಿ ಬಳಕೆ ವಿಸ್ತರಿಸಿದ ಪರಿಣಾಮ ನಮ್ಮದುರಿದೆ. ಮಳೆ ಕಡಿಮೆಯಾಗಿದೆ, ಕೆರೆಗಳು ಕಣ್ಮರೆಯಾಗಿವೆ. ಬ್ಯಾಂಕಿನಲ್ಲಿ ಹಣ ಠೇವಣಿಯಿಡದೇ ದಿನವೂ ಸಾಲ ಬೇಡುತ್ತಿದ್ದರೆ ಏನಾದೀತು? ಒಡ್ಡುಕಟ್ಟುವದು, ಕೆರೆ ಹೂಳು ತೆಗೆಯುವದು, ಕಾಡು ಉಳಿಸುವದನ್ನು ಕೈಬಿಟ್ಟೆವು. ಗ್ರಾಮದ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಮರೆತ ಫಲವಾಗಿ ಜಲಕ್ಷಾಮ ಅನುಭವಿಸುತ್ತಿದ್ದೇವೆ. ಕೊಳವೆ ಬಾವಿಯ ಆಳ ಹೆಚ್ಚಿಸುತ್ತ, ವಾಣಿಜ್ಯ ಬೆಳೆಗಳ ಹಿಂದೆ ಓಡುತ್ತ ನೆಲ ಜಲ ಸಂರಕ್ಷಣೆಯ ಸೂತ್ರ ಹದತಪ್ಪಿದೆ.
ಜಲಸಂರಕ್ಷಣೆ ಸಮಸ್ಯೆ ಇರುವದು ಮಾಹಿತಿ, ತಾಂತ್ರಿಕತೆಯಲ್ಲಲ್ಲ. ಸ್ವತಃ ಮಣ್ಣಿಗಿಳಿದು ಕಾರ್ಯನಿರ್ವಹಿಸುವದರಲ್ಲಿ ! ನೀರಿನ ಬಗ್ಗೆ ಎರಡು ತಾಸು ಮಾತಾಡಬಹುದು, ಕೇಳುವವರಿದ್ದರೆ ದಿನವಿಡೀ ಭಾಷಣ ಹೊಡೆಯಬಹುದು. ಒಂದು ಕೆರೆ, ಒಡ್ಡು ನಿರ್ಮಿಸಲು ಸ್ವತಃ ಹೊರಟರೆ ನಮ್ಮ ಇತಿಮಿತಿ ತಿಳಿಯುತ್ತದೆ, ನಿರ್ಮಾಣ ಕಷ್ಟದ ಅರಿವಾಗುತ್ತದೆ. ಟೀಕಿಸುವವರು, ಹಣ ಹೊಡೆಯುವ ತಂತ್ರವೆಂದು ಬೊಬ್ಬೆಹೊಡೆಯುವವರು ಗ್ರಾಮ ಬೀದಿಯಲ್ಲಿ ಕಾಣಿಸುವಷ್ಟು ದೊಡ್ಡ ಸಂಖ್ಯೆಯಲ್ಲಿ ಕೈಜೋಡಿಸುವವರು ಸಿಗುವದಿಲ್ಲ. ಮಾತಿನ ಮಂಟಪ ಹೇಗಿದೆಯೆಂದರೆ ಜೀವನದಲ್ಲಿ ಒಂದು ಕೆರೆ ನಿರ್ಮಿಸದವರೂ ದೊಡ್ಡ ದೊಡ್ಡ ಸಲಹೆ ನೀಡಬಹುದು. ಕೆಲಸಕ್ಕೆ ಸಮಯ ನೀಡಲು ಬಿಡುವಿಲ್ಲ. ಟೀಕೆ, ವಿಡಂಬನೆ, ಆರೋಪಗಳ ಬಿರುಗಾಳಿ ಎದುರಿಸುವಷ್ಟರಲ್ಲಿ ಎಂಥ ಕಾರ್ಯಕರ್ತನಿಗೂ ರಚನಾತ್ಮಕ ಕಾರ್ಯದ ಉತ್ಸಾಹವೇ ಮಾಯವಾಗುವ ಅಪಾಯವಿದೆ. ಇಂದಿನ ಗ್ರಾಮೀಣ ಜೀವನದಲ್ಲಿ ಸಾರ್ವಜನಿಕ ಕೆಲಸವೆಂದರೆ ಕಾಸಿ ಕುಣಿಯುವದೆಂಬ ಅಭಿಪ್ರಾಯವಿದೆ. ನಮ್ಮ ಗ್ರಾಮೀಣಾಭಿವೃದ್ಧಿ ವ್ಯವಸ್ಥೆಗಳು, ಅಧಿಕಾರಶಾಹಿ ವರ್ತನೆಗಳು, ಚುನಾವಣೆಗಳು ಇಂಥ ಕಹಿ ಚಿತ್ರಗಳನ್ನು ಸತತ ಬಿತ್ತರಿಸುತ್ತಿವೆ. ಊರಿನ ಕೆರೆಗಾಗಿ ಹಣ ತರುವದು, ಸಮರ್ಥವಾಗಿ ಕಾರ್ಯನಿರ್ವಹಿಸುವದು ಸವಾಲು. ನೀರು ಹಿಡಿದು ಬದಲಾವಣೆ ಘಟಿಸಿದಂತೆ ಟೀಕಿಸುವ ಜನಗಳೂ ನಿಧಾನಕ್ಕೆ ಬದಲಾಗಬಹುದು, ಎಲ್ಲವನ್ನೂ ಎದುರಿಸಿ ಕಾರ್ಯನಿರ್ವಹಿಸಲು ನಮಗೆ ಸಂಯಮ ಬೇಕು. ಜತೆಗೆ ಈ ಕುರಿತು ಗಂಭೀರ ಚಿಂತನ ಮಂಥನದ ತುರ್ತು ಅಗತ್ಯ ಇಂದಿನದಾಗಿದೆ. ಈ ಅಗತ್ಯತೆಯನ್ನು ಗಮನಿಸಿ ಈ ಮಾಧ್ಯಮ ಮಾತುಕತೆ ಆಯೋಜಿಸಲಾಗಿದೆ.ಖಂಡಿತವಾಗಿಯೂ ಈ ಮಾತುಕತೆ ಜಲಸಂರಕ್ಷಣೆಗಾಗಿ ಜನಜಾಗೃತಿ ನಿಟ್ಟಿನಲ್ಲಿ ಒಂದು ವಿನೂತನ ಯತ್ನದ ಜತೆಗೆ ಮಾರ್ಗಸೂಚಿಯಾಗಲಿದೆ.