ದಾಸ ಸಾಹಿತ್ಯದ ಮುಖ್ಯ ತತ್ವ ಭಕ್ತಿ, ಮೂಲ ಸತ್ಯ ಭಗವಂತ. ದಾಸ ಶಬ್ದ ಹೇಳುವುದೇ, ಒಡೆಯ ಮತ್ತು ದಾಸರ ಸಂಬಂಧವನ್ನು. ಒಡೆಯನಿರದಿದ್ದರೆ ದಾಸ ಎಂಬ ಶಬ್ದಕ್ಕೆ ಅರ್ಥವೇ ಇಲ್ಲ. ದಾಸರು ಭಕ್ತಿಯ ದಾರಿಯಲ್ಲಿ ಭಗವಂತನೆಂಬ ಮೂಲ ಸತ್ಯವನ್ನು ಹುಡುಕಲು ಹೊರಟವರು. ಹಾಗೆ ಅವರು ಹೊರಟಾಗ ಭಕ್ತಿಯ ದಾರಿಗೆ ತಮ್ಮನ್ನಷ್ಟೇ ತೆರೆದುಕೊಳ್ಳಲಿಲ್ಲ. ಅದನ್ನು ಇಡೀ ಸಮುದಾಯಕ್ಕೆಯೇ ತೆರೆದಿಟ್ಟರು. ಅದುವೆ ಇಲ್ಲಿಯ ವಿಶೇಷ. ಹಾಗೆ ತೆರೆದಿಡುವಾಗ ಬದುಕೆಂದರೇನು? ಹೇಗೆ ಬದುಕಬೇಕು ? ಎಂಬುದನ್ನು ತಿಳಿಸುತ್ತ ಹೋದರು.
ಕನ್ನಡ ದಾಸ ಸಾಹಿತ್ಯ ಶ್ರೀ ನರಹರಿತೀರ್ಥರಿಂದ [ಕ್ರಿ ಶ ೧೩೨೪-೧೩೩೪] ಪ್ರಾರಂಭವಾಯಿತೆಂದು ಹೇಳಲಾಗುತ್ತ್ತದೆ. ಆದರೆ ಅದು ಖಚಿತ ರೂಪ ಪಡೆದದ್ದು, ಶ್ರೀ ಶ್ರೀಪಾದರಾಯರು, [ಕ್ರಿ ಶ ೧೪೦೬-೧೫೦೪] ಮತ್ತು ಅವರ ಶಿಷ್ಯ ಶ್ರೀ ವ್ಯಾಸರಾಯರಿಂದ [ಕ್ರಿ ಶ ೧೪೭೬-೧೫೩೯]. ಶ್ರೀ ಶ್ರೀಪಾದರಾಯರು ತಮಿಳು ನಾಡಿನ ಶ್ರೀರಂಗದಲ್ಲಿದ್ದವರು. ಅವರ ಆರಾಧ್ಯ ದೈವ ತಮಿಳುನಾಡಿನ ಶ್ರೀರಂಗ. ‘ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ’ ಎಂದು ಹೇಳಿದ್ದು ಶ್ರೀರಂಗದ ರಂಗನಾಥನ ಕುರಿತಾಗಿ. ಅವರ ಅಂಕಿತ ‘ರಂಗವಿಠಲ’. ಆ ವಿಠಲ ಇಂದಿನ ಮಹಾರಾಷ್ಟ್ರದಲ್ಲಿದ್ದವನು. ಮರಾಟೀ ಸಂತ ನಾಮದೇವನು ಹೇಳುವಂತೆ, ವಿಠಲನು, ‘ಕಾನಡಾ ವಿಠಲ ವೋ, ಉಭಾ ಭೀವರೇ ತೀರೀ’, ಅಂದರೆ, ಭೀಮಾತೀರದಲ್ಲಿ ನಿಂತವನು ಕನ್ನಡ ವಿಠಲ ! ತಮಿಳುನಾಡಿನ ಶ್ರೀರಂಗದಿಂದ ಮಹಾರಾಷ್ಟ್ರದ ಗಡಿಭಾಗದ ಪಂಢರಪುರದವರೆಗೂ ಕನ್ನಡದ ವಿಠಲನ ದರಬಾರು!. ಇದು ಕನ್ನಡ ದಾಸ ಸಾಹಿತ್ಯದ ವಿಸ್ತಾರ. ಭಕ್ತರಿಗೆ ಭಗವಂತನನ್ನು ಹುಡುಕಲು ಭಾಷೆಗಳ, ಪ್ರದೇಶಗಳ ಗಡಿ ಇರಲಿಲ್ಲ, ಇಲ್ಲ ಕೂಡ.
ಸಂಸ್ಕೃತದ ಘಟಪಟಗಳ ಮಧ್ಯ ಒದ್ದಾಡುತ್ತಿದ್ದ ಪಂಡಿತರ ದೇವರನ್ನು. ಧರ್ಮದ ತಿರುಳನ್ನು ಮನೆ ಮಾತುಗಳಲ್ಲಿ ಹೇಳಿದವರು ದಾಸರು. ‘ಇಟ್ಹಾಂಗೆ ಇರುವೆನೋ ಹರಿಯೇ ಎನ್ನ ಧೊರಿಯೇ’ ಎಂದು ಶ್ರೀಪಾದರಾಯರು ಕನ್ನಡ ಭಾಷೆಯಲ್ಲೇ ಮೊರೆ ಇಟ್ಟದ್ದನ್ನು ಕೇಳಿ ಪಂಡಿತ-ಪಾಮರರಿಬ್ಬರೂ ಅಚ್ಚರಿ ಪಡುವಂತಾಯಿತು. ಪಾಮರರ ಮನ ಮುಟ್ಟಿತು. ಕನ್ನಡ ಭಾಷೆಯಲ್ಲಿ ಹೇಳಿದರೂ ದೇವರು ಕೇಳುತ್ತಾನೆ ಎಂದುಕೊಂಡರು. ಅದು ವಿಶೇಷವಾಗಿ ಬಹು ಸಂಖ್ಯಾತ ಪಾಮರರ ಮನ ಗೆದ್ದಿತು. ಮುಂದಿನ ೫ ನುಡಿಗಳಲ್ಲಿ ಹೇಳುವ ಅವರ ಮಾತುಗಳು ಇಂದಿಗೂ, ಎಂದಿಗೂ ಪ್ರಸ್ತುತವಾಗಿವೆ ಎಂಬುದು ಮಹತ್ವದ್ದಾಗಿದೆ. ಒಂದು ನುಡಿ ಕೇಳುವುದಾದರೆ,
‘ಸಣ್ಣ ಶಾಲ್ಯೋದನ ಬೆಣ್ಣೆ ಕಾಸಿದ ತುಪ್ಪ | ಚಿನ್ನದ ಹರಿವಾಣದಲ್ಲಿ ಭೋಜನ
ಘನ್ನ ಮಹಿಮ ನಿನ್ನ ಕರುಣ ತಪ್ಪಿದ ಮ್ಯಾಲೆ ಕ | ದನ್ನ ಕಾಣಿಸದೆ ಬಾಯ್ಬಿಡಿಸುವಿ ಹರಿಯೇ ||’
ಎಂಬುದಾಗಿ ಈ ಜಗದಲ್ಲಿಯ ಜೀವನದ ಅನಿಶ್ಚತತೆ ಮತ್ತು ಭಗವಂತನ ನಿಯಂತ್ರಣ ಶಕ್ತಿಯನ್ನು ಅರ್ಥಪೂರ್ಣವಾಗಿ ನಿರೂಪಿಸಿದ್ದಾರೆ. ಅದು ಯಾರ ಮನವನ್ನಾದರೂ, ಯಾವ ಕಾಲದಲ್ಲಾದರೂ ತಟ್ಟುತ್ತದೆ, ಮತ್ತು ಇದುವೆ ದಾಸ ಸಾಹಿತ್ಯದ ವೈಶಿಷ್ಟ್ಯವೆನಿಸಿದೆ.
ಸಾವಿರಕ್ಕೂ ಆಧಿಕ ವರುಷದ ಇತಿಹಾಸವಿರುವ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ, ಜೈನ ಯುಗ, ವೀರಶೈವ ಯುಗ ಮತ್ತು ಬ್ರಾಹ್ಮಣ ಯುಗ ಎಂದು ಮೂರು ಭಾಗಗಳನ್ನು ಮಾಡಿ, ಈ ಶೀರ್ಷಿಕೆಗಳು ಆಯಾ ವರ್ಗದ ಸಾಹಿತ್ಯವನ್ನು ಪ್ರತಿನಿಧಿಸುತ್ತವೆ ಎಂದು ಕನ್ನಡ ಸಾಹಿತ್ಯ ಚರಿತ್ರಕಾರರು ಹೇಳಿದರು. ಸಾಹಿತ್ಯದ ಅಭ್ಯಾಸಿಗಳ ಹೊರತು ಪಡಿಸಿ ಈ ಸಾಹಿತ್ಯ, ಆಯಾ ವರ್ಗದ ಅರಮನೆ ಗುರುಮನೆಗಳಿಗೆ ಮಾತ್ರ ಸೀಮಿತವಾದುವು.
ಆದರೆ ದಾಸ ಸಾಹಿತ್ಯ ಒಂದು ವರ್ಗಕ್ಕೆ ಸೀಮಿತವಾಗಲಿಲ್ಲ. ಅದು ಎಲ್ಲ ವರ್ಗಗಳ ಅರಮನೆ, ಗುರುಮನೆ ಮತ್ತು ಜನ ಸಾಮಾನ್ಯರನ್ನೂ ಮುಟ್ಟಿ, ಎಲ್ಲ ಕಾಲದಲ್ಲಿಯೂ ಸ್ವೀಕೃತವಾಗಿರುವುದು ಅದರ ವಿಶೇಷವಾಗಿದೆ. ಹಿಂದುಳಿದವರು, ದಲಿತರಿಂದ ಹಿಡಿದು ಸಮಾಜದ ಅತ್ಯಂತ ಮುಂದುವರಿದ ಜನರ ಸಮುದಾಯಗಳಲ್ಲಿ, ಮಠ-ಮಾನ್ಯಗಳಲ್ಲಿ, ಗುಡಿ-ಗುಂಡಾರಗಳಲ್ಲಿ ದಾಸ ಸಾಹಿತ್ಯ ಸ್ವೀಕಾರವಾಗಿದೆ. ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ, ದ್ಯಾಮವ್ವ, ದುರ್ಗವ್ವ, ಬೀರಪ್ಪನ ಗುಡಿಗಳ ಭಜನೆಗಳಲ್ಲಿ ಶೈವ, ವೀರಶೈವರ ಭಜನೆಗಳಲ್ಲಿ, ಅತ್ಯಂತ ಮಡಿ ಮಾಡುವ ವೈಷ್ಣವರ ಮಠಗಳಲ್ಲಿ ದಾಸರ ಪದಗಳು ಪ್ರವೇಶ ಪಡೆದಿವೆ. ಅಲ್ಲಿ ದಾಸರ ಜಾತಿ ಮತ ಪಂಥ ಮುಖ್ಯವಾಗಲಿಲ್ಲ. ಕುರುಬರ ಕನಕದಾಸ, ತೀರ ಇತ್ತೀಚಿನ ಮುಸ್ಲೀಮ ಬಡೇಸಾಬ, ರಾಮದಾಸರಾಗಿ ರಚಿಸಿದ ಕೀರ್ತನೆಗಳು ಸ್ವೀಕೃತವಾಗಿವೆ. ಸಾಹಿತ್ಯದ ಬಹು ಮುಖ್ಯ ಉದ್ದೇಶ, ಅದು ಜನರ ಮನಸ್ಸನ್ನು ಮುಟ್ಟಬೇಕು. ತಟ್ಟಬೇಕು. ದಾಸ ಸಾಹಿತ್ಯ ಜನರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ.
ಅವರವರ ಧರ್ಮದ ಅಸ್ತಿತ್ವವನ್ನು, ಅವರವರ ನಂಬುಗೆಗಳನ್ನು, ಶ್ರದ್ಧೆಯನ್ನು ಉಳಿಸಿ ಜನರ ಮನಸ್ಸನ್ನು ಧರ್ಮದಲ್ಲಿ ನಡೆಯುವಂತೆ ಮಾಡಿದ ಬಹುಪಾಲು ಶ್ರೇಯಸ್ಸು ದಾಸ ಸಾಹಿತ್ಯಕ್ಕೆ ಸಲ್ಲುತ್ತದೆ. ವಿಶೇಷವಾಗಿ ಅರ್ಥವಿಲ್ಲದ ಆಚಾರ ವಿಚಾರಗಳನ್ನು, ಅಂಧಾನುಕರಣೆಯನ್ನು ಖಂಡಿಸುತ್ತ ಮುಕ್ತಿಗೆ ಸಾಧನೆಯಾಗಿ, ವಿಶೇಷವಾಗಿ ಸ್ತ್ರೕಯರಿಗೂ, ಹಿಂದುಳಿದ ಸಮುದಾಯಕ್ಕೂ ಆಧ್ಯಾತ್ಮದ ದಾರಿಯನ್ನು ಒದಗಿಸಿ ಕೊಡುವಲ್ಲಿ ಮುಂದಾದದ್ದು ದಾಸ ಸಾಹಿತ್ಯದ ಅದ್ಭುತ ಸಾಧನೆಯಾಗಿದೆ.
ಕನ್ನಡದಲ್ಲಿ ದಾಸ ಸಾಹಿತ್ಯವನ್ನು ರಚಿಸಿದ ಮೊದಲ ಮೂವರು, ಅಗ್ರಗಣ್ಯರಾದ ಶ್ರೀ ಶ್ರೀಪಾದರಾಯರು, ಶ್ರೀ ವ್ಯಾಸರಾಯರು ಮತ್ತು ಶ್ರೀ ವಾದಿರಾಜರು, ಬ್ರಾಹ್ಮಣರ ಮಠಗಳ ಪೀಠಾಧಿಪತಿಗಳಾಗಿದ್ದವರು. ಸಂಸ್ಕೃತದಲ್ಲಿ ಆಳವಾದ ಪಾಂಡಿತ್ಯವನ್ನು ಹೊಂದಿದವರು, ಸಿದ್ಧಾಂತದ ಖಂಡನೆ, ಮಂಡನೆಗಳಲ್ಲಿ ಉದ್ದಾಮ ಗ್ರಂಥಗಳನ್ನು ರಚಿಸಿದವರು. ಅಂಥವರು ಪಾಂಡಿತ್ಯಕ್ಕಿಂತ ಪರಮಾತ್ಮನ ಹತ್ತಿರ ಹೋಗುವುದು ದೊಡ್ಡ ಸಾಧನೆ ಎಂದರು. ಅದು ಭಗವಂತನಲ್ಲಿಯ ಅನನ್ಯ ಭಕ್ತಿ ಮತ್ತು ಆತನಿಗೆ ಶರಣಾಗುವುದರಿಂದ ಮಾತ್ರ ಸಾದ್ಯ ಎಂದು ತಿಳಿದರು. ತಮಗೆ ತಿಳಿದದ್ದನ್ನು ಸರಳ ಆಡುಮಾತಿನಲ್ಲಿ ಹೇಳಿದರು. ಮನುಷ್ಯ ಜನ್ಮದ ಸಾರ್ಥಕತೆಯನ್ನು ಪಡೆಯಲು ತಾವು ಕಂಡ ದಾರಿಯನ್ನು ಜನ ಸಾಮಾನ್ಯರಿಗೆ ತೆರೆದು ಇಟ್ಟರು. ಅಲ್ಲಿ ಮಡಿ, ಮೈಲಿಗೆ, ಜಾತಿ, ಕುಲ, ಲಿಂಗಗಳ ಭೇದವಿರಲಿಲ್ಲ.
ದಾಸ ಸಾಹಿತ್ಯದ ವಿಚಾರ ಮುಂದಿನ ಲೇಖನದಲ್ಲಿ ಮತ್ತೆ ಚರ್ಚಿಸೋಣ…
ಚಿತ್ರ: ಗೂಗಲ್