ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ರಾಜಮನೆತನವೇ ಗಂಗರು. ಗಂಗರು ಸ್ಥಳೀಯರಾಗಿದ್ದು, ದಕ್ಷಿಣ ಕರ್ನಾಟಕದಲ್ಲಿ ಶಾತವಾಹನರ ನಂತರ ಅಧಿಕಾರಕ್ಕೆ ಬಂದರು. ಇವರು ಮೂಲತಃ ರೈತ ಸಮುದಾಯಕ್ಕೆ ಸೇರಿದವರು. ಈಗಿನ ಕೋಲಾರ, ಬೆಂಗಳೂರು, ತುಮಕೂರು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳು ಅವರ ಆಳ್ವಿಕೆಗೆ ಒಳಪಟ್ಟಿತ್ತು. ಸುಮಾರು 800 ವರ್ಷಗಳ ಸುದೀರ್ಘ ಆಳ್ವಿಕೆ ನಡೆಸಿದ ಖ್ಯಾತಿ ಅವರದ್ದು. ಧರ್ಮ ಮೊದಲು ಗಂಗರು ವೈದಿಕ ಧರ್ಮವನ್ನು ಪಾಲಿಸುತ್ತಿದ್ದರು. ಕ್ರಮೇಣ ಜೈನಧರ್ಮಕ್ಕೆ ಮತಾಂತರ ಹೊಂದಿದರು. ಶಿವಮಾರನು ಜೈನಧರ್ಮಕ್ಕೆ ಮತಾಂತರ ಹೊಂದಿದ ಮೊಟ್ಟ ಮೊದಲ ಗಂಗ ದೊರೆ. ಈ ಸಾಮ್ರಾಜ್ಯದ ದೊರೆಗಳ ಜಾತ್ಯತೀತ ಧೋರಣೆಯಿಂದಾಗಿ ಎಲ್ಲ ಧರ್ಮಗಳಿಗೂ ಉನ್ನತವಾದ ಸ್ಥಾನ ನೀಡಲಾಗಿತ್ತು. ಜೈನ ಧರ್ಮ ಪ್ರಸಾರಕ್ಕೂ ಹೆಚ್ಚು ಒತ್ತು ನೀಡಲಾಯಿತು. ರಾಚಮಲ್ಲನ ಮಂತ್ರಿಯಾದ ಚಾವುಂಡರಾಯನು ಶ್ರವಣಬೆಳಗೊಳದಲ್ಲಿ ಕ್ರಿ.ಶ. 980ರಲ್ಲಿ ಗೊಮ್ಮಟೇಶ್ವರನ ಏಕಶಿಲಾ ಮೂರ್ತಿಯನ್ನು ಕೆತ್ತಿಸಿದ. ಆಳಿದ ಪ್ರಮುಖ ದೊರೆಗಳು ಕೊಂಗುಣಿವರ್ಮ, ಮಾಧವ, ಆರ್ಯವರ್ಮ, ಅವಿನೀತ, ದುರ್ವಿನೀತ, ಶ್ರೀವಿಕ್ರಮ ಭೂವಿಕ್ರಮ, ಶ್ರೀಪುರುಷ, ಸೈಗೊಟ್ಟ ಶಿವಮಾರ, ರಾಚಮಲ್ಲ, ನೀತಿಮಾರ್ಗ ಎರೆಗಂಗ. ರಾಚಮಲ್ಲ, ಎರೆಗಂಗ, ಬೂತುಗ, ಮಾರಸಿಂಹ, ರಾಚಮಲ್ಲ. ಆಡಳಿತ ಅವಿನೀತನು ಪಟ್ಟಕ್ಕೆ ಬಂದ ನಂತರದ ದಾಖಲೆಗಳು ವಿಶ್ವಾಸಾರ್ಹವಾದ ಮಾಹಿತಿಗಳನ್ನು ನೀಡುತ್ತವೆ. ಈ ರಾಜರುಗಳಲ್ಲಿ ದುರ್ವಿನೀತ, ಭೂವಿಕ್ರಮ, ಶ್ರೀಪುರುಷ, ಸೈಗೊಟ್ಟ ಶಿವಮಾರ, ಮಾರಸಿಂಹ-2 ಮತ್ತು ಇಮ್ಮಡಿ ರಾಚಮಲ್ಲರು ಹೆಸರುವಾಸಿಯಾದವರು. ರಾಜ್ಯ ಸಂರಕ್ಷಣೆ ಮತ್ತು ವಿಸ್ತರಣೆಗಳಲ್ಲಿ ಅವರು ಮಹತ್ವದ ಪಾತ್ರ ವಹಿಸಿದರು. ಗಂಗರು ಸದಾ ಚೋಳರು, ಪಲ್ಲವರು, ರಾಷ್ಟ್ರಕೂಟರು ಮತ್ತು ಹೊಯ್ಸಳರ ಜತೆ ನಿರಂತರವಾದ ಯುದ್ಧಗಳಲ್ಲಿ ತೊಡಗಿದ್ದರು. ಪುನ್ನಾಟರಂತಹ ಚಿಕ್ಕ ಪುಟ್ಟ ರಾಜವಂಶಗಳು ಗಂಗರ ಸಂಗಡ ಮೈತ್ರಿಯಿಂದಲೇ ಇದ್ದವು. ದುರ್ವಿನೀತನು ಪಲ್ಲವರು ಹಾಗೂ ಕದಂಬರೊಂದಿಗೆ ಯುದ್ಧಗಳನ್ನು ನಡೆಸಿ ಜಯಶಾಲಿಯಾದ. ಅವನ ಸಾಮ್ರಾಜ್ಯವು ದಕ್ಷಿಣದಲ್ಲಿ ತಮಿಳುನಾಡಿನ ಕೊಯಮತ್ತೂರಿನಿಂದ ಮೊದಲಾಗಿ, ಉತ್ತರದಲ್ಲಿ ಬಳ್ಳಾರಿಯವರೆಗೆ ಹರಡಿತ್ತು ಭೂವಿಕ್ರಮನು ಪಲ್ಲವರೊಂದಿಗೆ ನಡೆಸಿದ ಯುದ್ಧಗಳಿಗಾಗಿ ಪ್ರಸಿದ್ಧನಾಗಿದ್ದ. ಗಂಗ ರಾಜರುಗಳಲ್ಲಿಯೇ ಹೆಸರಾಂತ ಶ್ರೀಪುರುಷನು ಬಹಳ ಪರಾಕ್ರಮಿಯಾಗಿದ್ದನು. ಅವನು ಒಂದು ಕಡೆ ನಂದಿವರ್ಮ ಪಲ್ಲವವರ್ಮನನ್ನು ಸೋಲಿಸಿದರೆ, ಇನ್ನೊಂದು ಗಡಿಯಲ್ಲಿ, ರಾಷ್ಟ್ರಕೂಟರನ್ನು ಬಳ್ಳಾರಿ ಜಿಲ್ಲೆಯ ಕಂಪ್ಲಿಯವರೆಗೆ ಹಿಮ್ಮೆಟ್ಟಿಸಿದನು. ಕೆರೆ ಕಾಲುವೆಗಳನ್ನು ನಿರ್ಮಿಸುವುದರ ಮೂಲಕ ಬೇಸಾಯಕ್ಕೆ ಉತ್ತೇಜನ ನೀಡಿದರು. ಆಯಾ ಕ್ಷೇತ್ರದಲ್ಲಿ ಸುಂಕ ವಿಧಿಸಿ, ಆರ್ಥಿಕ ಅಭಿವೃದ್ಧಿಗೂ ಅವಕಾಶ ಮಾಡಿಕೊಟ್ಟರು. ಸ್ರಾಮಾಜ್ಯ ಸ್ಥಾಪನೆ ಗಂಗರು ಸಮಕಾಲೀನರಾದ ಚಾಲುಕ್ಯ, ರಾಷ್ಟ್ರಕೂಟರಷ್ಟು ಪ್ರಬಲರಲ್ಲದಿದ್ದರೂ ಅವರೊಂದಿಗೆ ಸಂಬಂಧಗಳನ್ನು ಬೆಳೆಸುವಷ್ಟು ಸ್ವತಂತ್ರರಾಗಿದ್ದರು. ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿ (ಇಂದಿನ ಕೋಲಾರ)ಇತ್ತು. 8ನೇಯ ಶತಮಾನದಲ್ಲಿ ದೊರೆ ಶ್ರೀಪುರುಷ ತಲಕಾಡನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ. ಇದಲ್ಲದೆ ಮಾನ್ಯಪುರದಲ್ಲಿ (ಇಂದಿನ ನೆಲಮಂಗಲ ತಾಲೂಕಿನ ಮಣ್ಣೆ), ಚನ್ನಪಟ್ಟಣದ ಮಾಕುಂದ ಅವರ ಉಪ ರಾಜಧಾನಿಗಳಾಗಿದ್ದವು. ನಂದಿಬೆಟ್ಟ ಗಂಗರಾಜ್ಯದಲ್ಲಿದ್ದ ಪ್ರಮುಖ ಗಿರಿದುರ್ಗ. ಗಂಗ ನಾಡಿನ ತಿರುಳುಭಾಗವನ್ನು ಗಂಗವಾಡಿ ಎಂದು ಕರೆಯಲಾಗುತ್ತದೆ. ಶಾಸನವೊಂದು ಗಂಗವಾಡಿ ತೊಂಬತ್ತು ಸಾಸಿರ ಎಂದು ಉಲ್ಲೇಖಿಸಿದೆ. ಇದರನ್ವಯ 96 ಸಾವಿರ ಗ್ರಾಮಗಳಿದ್ದಿರಬಹುದು ಎಂದು ಅಂದಾಜಿಸಲಾಗಿದೆ
courtsey:prajavani.net
“author”: “ರೂಪಾ ಕೆ.ಎಂ.”,
https://www.prajavani.net/artculture/article-features/ganga-dynasty-653765.html