ಆತ್ಮಸ್ಥನೊಬ್ಬನೇ ಕರ್ಮಾತೀತ
‘ತನಗೂ ಜಗತ್ತಿಗೂ ಹಿತಸಾಧಕ ‘‘ಯಜ್ಞನೀತಿ’’ ಅನುಸರಿಸದೆ ಭೋಗಾತುರದಲ್ಲಿ ಪಾಪಾಯುವಾಗಿ ಬದುಕುವ ವ್ಯಕ್ತಿಯ ಜೀವನ ವ್ಯರ್ಥ’ ಎಂಬ ಕೃಷ್ಣೋಕ್ತಿ ಮನನ ಮಾಡಿದ್ದೆವಷ್ಟೆ.
ನಮ್ಮ ಮನೋಬುದ್ಧಿಗಳಲ್ಲಿ ಲೇಶಮಾತ್ರವಾದರೂ ಭೋಗಾಸಕ್ತಿ ಇದ್ದರೂ ನಾವು ಕರ್ಮದಲ್ಲಿ ತೊಡಗುವುದು ಅನಿವಾರ್ಯ. ‘ಕರ್ಮ’ವೆಂದರೆ ಕೇವಲ ವೇದೋಕ್ತ ಕರ್ಮಕಾಂಡವೂ, ಭೌತಿಕ ಕ್ರಿಯಾಕಲಾಪಗಳಷ್ಟೇ ಅಲ್ಲ. ನಮ್ಮ ಮನೋಬುದ್ಧಿಗಳ ಸ್ಥೂಲ-ಸೂಕ್ಷ್ಮ-ವ್ಯಾಪಾರಗಳೂ ‘ಕರ್ಮ’ವೇ. ಹಾಗಾಗಿ ‘ನಾವು ‘‘ಜ್ಞಾನಿ’’ಗಳು, ನಮಗೆ ಕರ್ಮವಿಲ್ಲ’ ಎಂದು ಹೇಳಿ ನುಣುಚಿಕೊಳ್ಳುವಂತಿಲ್ಲ! ಕೃಷ್ಣನು ‘ಮಾ ತೇ ಸಂಗೊsಸ್ತ್ವಕರ್ಮಣಿ’ (ಕರ್ಮವನ್ನು ಬಿಡುವಂತಿಲ್ಲ) ಎಂದು ಕಿವಿಮಾತು ಹೇಳಿದ್ದನ್ನೂ ನೆನೆಯಬಹುದು. ವಸ್ತುತಃ ‘ಕರ್ಮಾತೀತ’ವಾಗುವುದು ಎಂದರೆ ‘ಕರ್ಮವನ್ನು ಕೈಬಿಡುವುದು’ ಎಂದರ್ಥವಲ್ಲ. ಕರ್ಮವನ್ನೆಲ್ಲ ‘ಮಾಡಿ ಮುಗಿಸಿ ನಿರ್ಲಿಪ್ತವಾಗಿರುವುದು’ ಎಂದರ್ಥ. ಜ್ಞಾನದಲ್ಲಿ ಪಕ್ವತೆಯುಂಟಾಗುತ್ತಲೇ ಕರ್ಮವು ತಾನಾಗಿಯೇ ಕಳಚಿ ಬೀಳುತ್ತದೆ. ರಾಮಕೃಷ್ಣ ಪರಮಹಂಸರು ಕೊಡುವ ಉದಾಹರಣೆ ಮನನೀಯ.
ತೆಂಗಿನಮರದ ಹಸಿ ಗರಿಗಳನ್ನು ಕೀಳುವಾಗ ಕಷ್ಟ; ಕಿತ್ತ ಮೇಲೆ ಅರೆಬರೆ ಅಂಟಿಕೊಂಡಿದ್ದು, ಗುರುತು ಉಳಿದುಬಿಡುತ್ತದೆ. ಆದರೆ ಒಣಗಿದ ಮೇಲೆ ಗರಿಯು ತಾನಾಗಿ ಉದುರಿಬೀಳುತ್ತದಲ್ಲ! ಆಗ ಕಷ್ಟವಿಲ್ಲದೆ ಸಲೀಸಾಗಿ ಕಳಚಿಕೊಳ್ಳುತ್ತದೆ! ಗುರುತೂ ಉಳಿಯದು! ಕರ್ಮಯೋಗದಿಂದಲೂ ನಿರ್ಲಿಪ್ತಿಯಿಂದಲೂ ಮತಿಯು ಪಕ್ವತೆಯನ್ನು ಹೊಂದುತ್ತಲೇ ಕರ್ಮಪ್ರಸಕ್ತಿಯೂ ತಾನಾಗಿಯೇ ಕಳಚಿಬೀಳುತ್ತದೆ. ಕೃತಕ ಕರ್ಮತ್ಯಾಗ ಅರ್ಥಹೀನ! ಅದು ಅತೃಪ್ತಿ-ಅಶಾಂತಿಗಳಿಗೆ ಕಾರಣವಾಗಿ ಮತ್ತೊಮ್ಮೆ ಕರ್ಮಕ್ಕೇ ತಳ್ಳಿಬಿಡುತ್ತದೆ! ಹಾಗಾಗಿ ಕರ್ಮತ್ಯಾಗವೆಂದರೆ ‘ಕರ್ಮಫಲ ತ್ಯಾಗ’ವೆಂದೇ ಅರ್ಥಮಾಡಿಕೊಳ್ಳಬೇಕು. ಕತೃತ್ವ-ಭೋಕ್ತೃತ್ವದ ಭಾವವನ್ನು ಬಿಟ್ಟು ಮಾಡುವ ಕರ್ಮವೇ ‘ಯಜ್ಞ’. ಹಾಗೆ ಮಾಡುವವನ ಐಹಿಕ ಬಂಧಗಳು ಕಳಚಿಬೀಳಲಾರಂಭಿಸುತ್ತವೆ. ಕರ್ಮಗಳ ಪ್ರಸಕ್ತಿಯೂ ಕಡಿಮೆಯಾಗುತ್ತ ಬರುತ್ತವೆ, ಆಂತರ್ಯವು ಯೋಗಮುಖವಾಗುತ್ತದೆ. ಅದನ್ನೇ ಕೃಷ್ಣನು ಮುಂದಿನ ಶ್ಲೋಕದಲ್ಲಿ ಒಕ್ಕಣಿಸಿದ್ದಾನೆ;
ಯಸ್ತ್ವಾತ್ಮರತಿರೇವ ಸ್ಯಾತ್ ಆತ್ಮತೃಪ್ತಶ್ಚ ಮಾನವಃ |
ಆತ್ಮನ್ಯೇವ ಚ ಸಂತುಷ್ಟಃ ತಸ್ಯ ಕಾರ್ಯಂ ನ ವಿದ್ಯತೇ ||
ನೈವ ತಸ್ಯಕೃತೇನಾಥೋ ನಾಕೃತೇನೇಹ ಕಶ್ಚನ |
ನ ಚಾಸ್ಯ ಸರ್ವಭೂತೇಷು ಕಶ್ಚಿದರ್ಥವ್ಯಪಾಶ್ರಯಃ || (3.17-18)
‘‘ಯಾವ ಮನುಷ್ಯನು ಆತ್ಮನಲ್ಲಿಯೇ ರಮಿಸುತ್ತ, ಆತ್ಮತೃಪ್ತನಾಗಿರುತ್ತ, ಆತ್ಮದಲ್ಲೇ ಸಂತುಷ್ಟನಾಗಿರುತ್ತಾನೋ, ಅವನಿಗೆ ಯಾವ ಕರ್ಮವೂ ಇರುವುದಿಲ್ಲ. ಅಂತಹವನಿಗೆ ಇಹದಲ್ಲಿ ಕರ್ಮ ಮಾಡುವುದರಿಂದಾಗಲಿ, ಮಾಡದೇ ಇರುವುದರಿಂದಾಗಲೀ ಯಾವ ‘ಪ್ರಯೋಜನ’ವೂ ಇರದು. ಅಂತಹವನಿಗೆ ಈ ಜಗತ್ತಿನ ಯಾವುದೇ ಜೀವಿಯೊಂದಿಗೂ ನಂಟು-ಬಂಧಗಳೂ ಇರವು.’’
‘ಆತ್ಮದಲ್ಲಿ ರಮಿಸುವ ಸ್ಥಿತಿ’ ಒದಗಬೇಕಾದರೆ, ಮೊದಲು ಆ ಸುಖವನ್ನು ನಮ್ಮಿಂದ ‘ಆಚೆ’ ಹುಡುಕುವ ಭ್ರಾಂತಿ ಕುಗ್ಗಬೇಕಲ್ಲ! ಹಿಮಾಲಯ ಪ್ರಾಂತದಲ್ಲಿ ಓಡಾಡುವ ಕಸ್ತೂರೀಮೃಗವು ಪ್ರಾಯ ಹೊಂದಿದಾಗ, ಅದರ ನಾಭಿಯಲ್ಲಿ ಒಂದು ಗಡ್ಡೆ ಮೊಳೆತು, ಪರಿಮಳಯುಕ್ತವಾದ ದ್ರವ ಸೋರಲಾರಂಭಿಸುತ್ತದಂತೆ. ಆ ದ್ರವದ ಮೋಹಕ ಪರಿಮಳವನ್ನು ಅರಸಿ ಮೃಗವು ಬೆಟ್ಟಗಾಡುಗಳಲ್ಲೆಲ್ಲ ಅಲೆದಲೆದು ಸುಸ್ತಾಗುತ್ತದಂತೆ! ‘ತನ್ನ’ ನಾಭಿಯಿಂದಲೇ ಪಸರಿಸುವ ಪರಿಮಳವನ್ನು ಗುರುತಿಸಲಾಗದ ಕಸ್ತೂರಿಮೃಗದಂತೆಯೇ ನಾವೂ ‘ನಮ್ಮೊಳಗಿನ ಆತ್ಮಾನಂದ’ವನ್ನು ಗುರುತಿಸಲಾಗದೆ ಹೋಗುತ್ತೇವೆ ಎಂಬ ಮನೋಜ್ಞವಾದ ಉದಾಹರಣೆಯನ್ನೀಯುತ್ತಾರೆ ಆದಿಶಂಕರರು! ನಮ್ಮೊಳಗಿನ ಸಂತೋಷವನ್ನು ಕಂಡುಕೊಳ್ಳಲಾಗದ ನಾವು ಹೊರಗಡೆಯ ವಸ್ತು-ವ್ಯಕ್ತಿಗಳಲ್ಲಿ ಪದವಿ-ಮನ್ನಣೆಗಳಲ್ಲಿ ಸುಖವನ್ನರಸಿ ಹೋಗುತ್ತೇವಲ್ಲ! ನಮ್ಮ ಕರ್ಮಪ್ರಸಕ್ತಿಯು ಪ್ರಾರಂಭವಾಗುವುದೇ ಅಲ್ಲಿಂದ! ಹಾಗಾಗಿ ಕರ್ಮವು ಮುಗಿಯಬೇಕಾದರೆ, ನಾವು ಆತ್ಮಸ್ಥರಾಗಬೇಕು, ‘ಆತ್ಮನ್ಯೇವಾತ್ಮನಾ ತುಷ್ಟ’ರಾಗಬೇಕು! ಅದೇ ಯೋಗ! ಹಾಗೆ ಯೋಗಸ್ಥನಾದ ವ್ಯಕ್ತಿಯು ಕರ್ಮ ಮಾಡಿದರೂ ಮಾಡದಿದ್ದರೂ ಅದರಿಂದ ಅವನಿಗೆ ಆಗಬೇಕಾದದ್ದು ಏನೂ ಇರದು. ‘ಎಲ್ಲವೂ ಜಗಲ್ಲೀಲೆಯಿಂದ ನಡೆಯುತ್ತಿದೆ’ ಎಂಬ ರಸದೃಷ್ಟಿಯಿಂದ ಬದುಕುವ ಅವನಲ್ಲಿ ‘ಕರ್ತೃ-ಭೋಕ್ತೃ’ ಭಾವಗಳು (ನಾನು ‘ಮಾಡುವವನು’ – ‘ಅನುಭವಿಸುವವನು’ ಎಂಬ ಅಹಮಿಕೆ) ಲೇಶವೂ ಇರದು.
ಭೋಗದ ಬೆನ್ನಟ್ಟಿ ಮಾಡುವ ಕರ್ಮಗಳಿಗೆ ಕೊನೆಯೇ ಇರದು! ಏಕೆಂದರೆ ಅಲ್ಲಿ ‘ಮಾಡುವ ಕರ್ಮ’ದ ಬಗ್ಗೆಯೂ ಕರ್ಮಸಂಬಂಧಿತ ವ್ಯಕ್ತಿ, ವಸ್ತು, ಸನ್ನಿವೇಶ, ಲಾಭ-ನಷ್ಟ, ಸುಖ-ದುಃಖಗಳ ಬಗೆಗೂ ನಂಟು-ಗಂಟುಗಳು ಬೆಳೆಯುತ್ತವೆ. ಅವು ಮತ್ತಷ್ಟು ಕರ್ಮಗಳಿಗೆ ಕಾರಣವಾಗುತ್ತವೆ. ಆದರೆ ಕರ್ತೃ-ಭೋಕ್ತೃ-ಭಾವವಿಲ್ಲದೆ ಮಾಡುವ ‘ಯಜ್ಞಭಾವ’ದ ಕರ್ಮವು ಜ್ಞಾನದಲ್ಲಿ ಪರ್ಯವಸಾನಗೊಳ್ಳುತ್ತದೆ. ಅಲ್ಲಿ ಕರ್ಮದ ಬಗ್ಗೆಯೂ ಅಲ್ಲಿನ ವ್ಯಕ್ತಿ, ವಸ್ತು, ಲಾಭ-ನಷ್ಟಾದಿಗಳ ಬಗ್ಗೆ ನಂಟು-ಗಂಟುಗಳು ಬೆಳೆಯವು. ಅಂತಹ ಕರ್ಮವು ಬಂಧನಕ್ಕೆ ಕಾರಣವಾಗದೆ, ಮತ್ತಷ್ಟು ಕರ್ಮಸಂಕಲ್ಪಗಳನ್ನೂ ಹುಟ್ಟಿಸದೆ ಶುದ್ಧ ಆನಂದವನ್ನಷ್ಟೇ ಒದಗಿಸುತ್ತದೆ. ಅಂತಹ ಕರ್ಮಾತೀತನಾದ ಧನ್ಯವ್ಯಕ್ತಿಯು ಸರ್ವತ್ರ ಭಗವಲ್ಲೀಲೆಯನ್ನು ದರ್ಶಿಸುವ ‘ರಸರ್ಷಿ’ಯಾಗುತ್ತಾನೆ. ಅಮೋಘ ಕಾರ್ಯಗಳ ಮೂಲಕ ಜಗದ್ಧಿತವನ್ನೇ ಸಾಧಿಸುತ್ತಿದ್ದರೂ ಅವನ ಅಂತರಂಗದಲ್ಲಿ ‘ನಾನು ಮಾಡುತ್ತೇನೆ’ ಎಂಬ ಭಾವವಿರದು! ಆದ್ದರಿಂದ ಆತ ಮಾಡಿಯೂ ಮಾಡದವನು! ಕರ್ಮಾತೀತನು! ಅಂತಹ ಸಿದ್ಧಿಯನ್ನು ಪಡೆಯುವಂತೆ ಅರ್ಜುನನಿಗೆ ನಿರ್ದೇಶಿಸುತ್ತಿದ್ದಾನೆ ಕೃಷ್ಣ;
ತಸ್ಮಾದಸಕ್ತಃ ಸತತಂ ಕಾರ್ಯಂ ಕರ್ಮ ಸಮಾಚರ |
ಅಸಕ್ತೋ ಹ್ಯಾಚರನ್ ಕರ್ಮ ಪರಮಾಪ್ನೋತಿ ಪೂರುಷಃ || (3.19)
‘‘ಅನಾಸಕ್ತನಾಗಿ ಕರ್ಮವನ್ನು ಅಚ್ಚುಕಟ್ಟಾಗಿ ಮಾಡು. ಹಾಗೆ ಅನಾಸಕ್ತಿಯಿಂದ ಕರ್ಮ ಮಾಡುವವನು ಪರಮವನ್ನು (ಪರತತ್ವವನ್ನು / ಪರಮಾತ್ಮನನ್ನು) ಪಡೆಯುತ್ತಾನೆ.’’
-ಡಾ. ಆರತೀ ವಿ. ಬಿ.
ಕೃಪೆ : ವಿಜಯವಾಣಿ